ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಿಂಗ ವಿವಾಹಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

Last Updated 14 ಸೆಪ್ಟೆಂಬರ್ 2020, 11:54 IST
ಅಕ್ಷರ ಗಾತ್ರ

ನವದೆಹಲಿ: ‘ಸಲಿಂಗ ವಿವಾಹವು ಸ್ವೀಕಾರಾರ್ಹವಲ್ಲ. ಅದು ನಮ್ಮ ಮೌಲ್ಯಗಳಿಗೆ ವಿರುದ್ಧವಾಗಿದ್ದು ಅದಕ್ಕೆ ಕಾನೂನಿನಲ್ಲಿ ಅವಕಾಶವೂ ಇಲ್ಲ. ಸಮಾಜವೂ ಅದನ್ನು ಒಪ್ಪುವುದಿಲ್ಲ’ ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಸಲಿಂಗ ವಿವಾಹಕ್ಕೆ ಹಿಂದೂ ವಿವಾಹ ಕಾಯ್ದೆ (ಎಚ್‌ಎಂಎ) ಹಾಗೂ ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ಮಾನ್ಯತೆ ನೀಡಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ‌ಅರ್ಜಿ (ಪಿಐಎಲ್‌) ಸಲ್ಲಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಡಿ.ಎನ್‌.ಪಟೇಲ್‌ ಹಾಗೂ ನ್ಯಾಯಮೂರ್ತಿ ಪ್ರತೀಕ್ ಜಲಾನ್‌ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಸೋಮವಾರ ಇದರ ವಿಚಾರಣೆ ನಡೆಸಿತು.

‘ಸಂಸ್ಕಾರಯುತವಲ್ಲದ ವಿವಾಹವನ್ನುನಮ್ಮ ಕಾನೂನು ವ್ಯವಸ್ಥೆ, ಸಮಾಜವು ಒಪ್ಪುವುದಿಲ್ಲ’ ಎಂದು ಸಾಲಿಸಿಟರ್‌ ಜನರಲ್‌ (ಎಸ್‌ಜಿ) ತುಷಾರ್‌ ಮೆಹ್ತಾ ಅವರು ಪೀಠಕ್ಕೆ ತಿಳಿಸಿದರು.

‘ಹಿಂದೂ ವಿವಾಹ ಕಾಯ್ದೆಯಲ್ಲಿ ಗಂಡ ಹೆಂಡತಿಯ ಉಲ್ಲೇಖವಿರುತ್ತದೆ. ಸಲಿಂಗ ವಿವಾಹದಲ್ಲಿ ಗಂಡ ಯಾರು, ಹೆಂಡತಿ ಯಾರು ಎಂಬುದನ್ನು ಯಾರು ನಿರ್ಧರಿಸುತ್ತಾರೆ’ ಎಂದು ಮೆಹ್ತಾ ಪ್ರಶ್ನಿಸಿದರು.

‘ಸಲಿಂಗ ವಿವಾಹ ಬಯಸುವವರು ವಿದ್ಯಾವಂತರೇ ಆಗಿದ್ದಾರೆ. ಅವರು ನೇರವಾಗಿಯೇ ನ್ಯಾಯಾಲಯವನ್ನು ಸಂಪರ್ಕಿಸಬಹುದಿತ್ತಲ್ಲ. ಅದನ್ನು ಬಿಟ್ಟು ಪಿಐಎಲ್‌ ಸಲ್ಲಿಸಿದ್ದಾದರೂ ಏಕೆ’ ಎಂದು ಪೀಠವು ಕೇಳಿತು.

‘ಸಂತ್ರಸ್ತರು ಸಮಾಜಕ್ಕೆ ಹೆದರುತ್ತಿದ್ದಾರೆ. ಹೀಗಾಗಿ ಪಿಐಎಲ್‌ ಸಲ್ಲಿಸಿದ್ದಾರೆ’ ಎಂದು ಅರ್ಜಿದಾರರ ಪರ ವಕೀಲ ಅಭಿಜಿತ್‌ ಅಯ್ಯರ್‌ ಮಿತ್ರಾ ಪೀಠಕ್ಕೆ ತಿಳಿಸಿದರು.

ಸಲಿಂಗ ವಿವಾಹವನ್ನು ನೋಂದಣಿ ಮಾಡಲು ನಿರಾಕರಿಸುವ ವ್ಯಕ್ತಿಗಳ ಕುರಿತ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡುವಂತೆ ಅಭಿಜಿತ್‌ ಅವರಿಗೆ ಸೂಚಿಸಿದ ಪೀಠವು ವಿಚಾರಣೆಯನ್ನು ಅಕ್ಟೋಬರ್‌ 21ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT