ಮಂಗಳವಾರ, ಮೇ 17, 2022
26 °C

ಫೆ.7ಕ್ಕೆ ತಮಿಳುನಾಡಿಗೆ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮದುರೈ: ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಅವರು ಬೆಂಗಳೂರಿನಿಂದ ತಮಿಳುನಾಡಿಗೆ ಫೆಬ್ರುವರಿ 7ರಂದು ತೆರಳಲಿದ್ದಾರೆ.

‘ಶಶಿಕಲಾ ಅವರು ತಮಿಳುನಾಡಿಗೆ ಬಂದ ಬಳಿಕ ಅಪಾರ ಬದಲಾವಣೆಯಾಗಲಿದೆ’ ಎಂದು ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಪ್ರಧಾನ ಕಾರ್ಯದರ್ಶಿ ಮತ್ತು ಶಶಿಕಲಾ ಸಂಬಂಧಿ ಟಿ.ಟಿ.ವಿ ದಿನಕರನ್ ತಿಳಿಸಿದ್ದಾರೆ.

‘ಶಶಿಕಲಾ ಅವರನ್ನು ತಮಿಳುನಾಡಿನ ಗಡಿ ಹೊಸೂರಿನಿಂದಲೇ ಅದ್ದೂರಿಯಾಗಿ ಸ್ವಾಗತಿಸಲಾಗುವುದು. ಫೆಬ್ರುವರಿ 7ರಂದು ಬೆಳಿಗ್ಗೆ 9ಗಂಟೆಗೆ ಬೆಂಗಳೂರಿನಿಂದ ರಸ್ತೆ ಮೂಲಕ ಚೆನ್ನೈಗೆ ತೆರಳಲಿದ್ದಾರೆ.  ಬಳಿಕ, ದಿವಂಗತ ನಾಯಕರಾದ ಸಿ.ಎನ್‌. ಅಣ್ಣಾದೊರೈ, ಎಂ.ಜಿ. ರಾಮಚಂದ್ರನ್‌ ಮತ್ತು ಜೆ. ಜಯಲಲಿತಾ ಅವರ ಸ್ಮಾರಕಗಳಿಗೆ ಭೇಟಿ ನೀಡುವ ಉದ್ದೇಶವಿದೆ. ಆದರೆ, ಈಗ ಅಮ್ಮ ಸ್ಮಾರಕವನ್ನು ಮುಚ್ಚಲಾಗಿದೆ. ಸ್ಮಾರಕವನ್ನು ಮುಚ್ಚಿರುವ ಉದ್ದೇಶವೇನು? ಶಶಿಕಲಾ ಅವರು ತಮಿಳುನಾಡಿಗೆ ಹಿಂತಿರುಗುತ್ತಿರುವ ಪರಿಣಾಮ ಈ ಕ್ರಮಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

‘ಇಂತಹ ಕ್ರಮಗಳ ಬಗ್ಗೆ ಜನರು ವಿಧಾನಸಭೆ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ. ಸ್ಮಾರಕವನ್ನು ಸದಾ ಮುಚ್ಚಲು ಸಾಧ್ಯವಿಲ್ಲ. ಅದು ತೆರೆಯಲೇಬೇಕು ಮತ್ತು ಶಶಿಕಲಾ ಅಲ್ಲಿಗೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸುವುದು ಖಚಿತ’ ಎಂದು ಹೇಳಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಶಶಿಕಲಾ ಅವರನ್ನು ಜನವರಿ 27ರಂದು ಬಿಡುಗಡೆಗೊಳಿಸಲಾಗಿತ್ತು. ಆದರೆ, ಕೊರೊನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆಯಾಗಿದ್ದರಿಂದ ಆಸ್ಪತ್ರೆಯಿಂದ ತೆರಳಿದ್ದ ಶಶಿಕಲಾ, ವೈದ್ಯರ ಸಲಹೆಯಂತೆ ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು