ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ಸಮೂಹದಲ್ಲಿ ಹೂಡಿಕೆ | ಎಸ್‌ಬಿಐ, ಎಲ್‌ಐಸಿಗೆ ಬಲವಂತ: ರಾಹುಲ್‌ ಆರೋಪ

Last Updated 1 ಮಾರ್ಚ್ 2023, 16:21 IST
ಅಕ್ಷರ ಗಾತ್ರ

ನವದೆಹಲಿ: ‘ಅದಾನಿ ಸಮೂಹವನ್ನು ರಕ್ಷಿಸುವುದಕ್ಕಾಗಿ ಅದರಲ್ಲಿ ಹಣ ಹೂಡಿಕೆ ಮಾಡುವಂತೆ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಹಾಗೂ ಭಾರತೀಯ ಜೀವ ವಿಮಾ ನಿಗಮವನ್ನು (ಎಲ್‌ಐಸಿ) ಬಲವಂತಪಡಿಸಲಾಗಿತ್ತು’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

‘ಮಿತ್ರಕಾಲ್‌–2’ ಸರಣಿಯ ಹಿನ್ನೆಲೆಯಲ್ಲಿ ಬುಧವಾರ ವಿಡಿಯೊವೊಂದನ್ನು ಬಿಡುಗಡೆ ಮಾಡಿರುವ ಅವರು, ‘ಅದಾನಿ ಸಮೂಹದ ಷೇರು ಮೌಲ್ಯ ಕುಸಿತದಿಂದಾಗಿ ಎಲ್‌ಐಸಿಗೆ ಪ್ರತಿ ದಿನ ಸುಮಾರು ₹1 ಸಾವಿರ ಕೋಟಿ ಮೊತ್ತ ನಷ್ಟವಾಗುತ್ತಿದೆ. ಉದ್ಯಮಿ ಗೌತಮ್‌ ಅದಾನಿಯ ಸಮೂಹದಲ್ಲಿ ಹೂಡಿಕೆ ಮಾಡುವಂತೆ ಎಸ್‌ಬಿಐ ಹಾಗೂ ಎಲ್‌ಐಸಿಯನ್ನು ಬಲವಂತಪಡಿಸಿದ್ದು ಯಾರು ಎಂಬ ಪ್ರಶ್ನೆಯನ್ನು ಈ ದೇಶದ ಜನರು ಕೇಳುತ್ತಿದ್ದಾರೆ’ ಎಂದಿದ್ದಾರೆ.

‘ಅದಾನಿ ಸಮೂಹದಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಎಂಬುದು ಗೊತ್ತಿದ್ದರೂ ಕೂಡ ಎಲ್‌ಐಸಿಯು ಕೋಟ್ಯಂತರ ಮೊತ್ತವನ್ನು ಹೂಡಿಕೆ ಮಾಡಿದ್ದು ಏಕೆ? ಈ ಪ್ರಶ್ನೆಗೆ ಉತ್ತರ ದೊರೆತ ಬಳಿಕವೇ ಈ ದೇಶಕ್ಕೆ ಆಗಿರುವ ನಷ್ಟ ಎಷ್ಟು ಎಂಬುದು ಗೊತ್ತಾಗಲಿದೆ’ ಎಂದು ಹೇಳಿದ್ದಾರೆ.

‘ನೀವು ನಿಮ್ಮ ಮಕ್ಕಳ ಭವಿಷ್ಯವನ್ನು ಅಪಾಯಕ್ಕೆ ದೂಡಲು ಬಯಸುತ್ತೀರಾ? ಅದಾನಿ ಸಮೂಹವನ್ನು ರಕ್ಷಿಸುವುದಕ್ಕಾಗಿ ನೀವು ಕಷ್ಟಪಟ್ಟು ದುಡಿದಿದ್ದ ಹಣವನ್ನು ಅದರಲ್ಲಿ ಹೂಡಿಕೆ ಮಾಡಿದ್ದು ಏಕೆ? ಖಾಸಗಿ ಸಂಸ್ಥೆಗಳು ಅದಾನಿ ಸಮೂಹದಲ್ಲಿ ಏಕೆ ಹಣ ಹೂಡಿಲ್ಲ? ಜನರು ಎಲ್‌ಐಸಿಯಲ್ಲಿ ಹೂಡಿರುವ ಹಣವು ಸುರಕ್ಷಿತವಾಗಿದೆಯೇ ಇಲ್ಲವೇ ಎಂಬುದನ್ನು ಖಾತರಿಪಡಿಸುವುದು ಪ್ರಧಾನಿಯವರ ಕರ್ತವ್ಯ ಅಲ್ಲವೇ’ ಎಂದು ಅವರು ನಾಗರಿಕರನ್ನು ಪ್ರಶ್ನಿಸಿದ್ದಾರೆ.

‘ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿದ್ದರಿಂದಾಗಿ 2023ರ ಜನವರಿ 24ರಿಂದ ಎಲ್‌ಐಸಿಗೆ ಆಗಿರುವ ನಷ್ಟ ಎಷ್ಟು ಎಂಬ ಸತ್ಯವನ್ನು ಪ್ರಧಾನಿಯವರು ಬಹಿರಂಗಪಡಿಸಲಿದ್ದಾರೆಯೇ? ಅದಾನಿ ಸಮೂಹವು ಬಹುಕಾಲದಿಂದಲೂ ಹಣ ಅಕ್ರಮ ವರ್ಗಾವಣೆ ಆರೋಪ ಎದುರಿಸುತ್ತಿದೆ. ಆ ಸಮೂಹದ ಶೆಲ್‌ ಕಂಪನಿಗಳ ಹಿಂದೆ ಇರುವವರು ಯಾರು’ ಎಂದೂ ಅವರು ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT