ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆ: ತಜ್ಞರ ವರದಿ ಬಹಿರಂಗಕ್ಕೆ ಆಗ್ರಹ

ಸಮಿತಿ ಸದಸ್ಯ ಘನವಟ್‌ರಿಂದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಪತ್ರ
Last Updated 23 ನವೆಂಬರ್ 2021, 20:00 IST
ಅಕ್ಷರ ಗಾತ್ರ

ನವದೆಹಲಿ: ಮೂರು ಕೃಷಿ ಕಾಯ್ದೆಗಳ ಬಗ್ಗೆ ಸಲ್ಲಿಸಲಾದ ವರದಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು ಇಲ್ಲವೇ ವರದಿ ಬಹಿರಂಗಗೊಳಿಸಲು ಸಮಿತಿಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ, ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೇಮಿಸಿದ್ದ ಸಮಿತಿಯ ಸದಸ್ಯ ಅನಿಲ್‌ ಘನವಟ್ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಮಂಗಳವಾರ ಪತ್ರ ಬರೆದಿದ್ದಾರೆ.

‘ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಸರ್ಕಾರ ಪ್ರಕಟಿಸಿದ ನಂತರ, ಸಮಿತಿ ನೀಡಿರುವ ವರದಿಯು ಅಪ್ರಸ್ತುತ. ಆದರೆ, ಅದರ ಶಿಫಾರಸುಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಮುಖವಾಗಿವೆ’ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇನ್ನು ಮುಂದೆ ಆ ಮೂರು ಕಾನೂನುಗಳು ಇಲ್ಲವಾಗಬಹುದು. ಆದರೆ, ಅವುಗಳಲ್ಲಿ ಅಡಕವಾಗಿದ್ದ ‘ಸುಧಾರಣೆಯ ತುಡಿತ’ವನ್ನು ಅಲ್ಲಗಳೆಯುವಂತಿಲ್ಲ ಎಂದು ಘನವಟ್ ಹೇಳಿದ್ದಾರೆ.‌

ವರದಿ ಸಲ್ಲಿಕೆಯಾದ ಕೆಲ ದಿನಗಳಲ್ಲೇ ಸುಪ್ರೀಂ ಕೋರ್ಟ್‌ ಅದನ್ನು ಬಿಡುಗಡೆ ಮಾಡಿದ್ದರೆ, ಈ ಪರಿಸ್ಥಿಯೇ ಬರುತ್ತಿರಲಿಲ್ಲ. ವರದಿ ಸಲ್ಲಿಕೆಯಾಗಿ ಎಂಟು ತಿಂಗಳ ಮೇಲಾಗಿದೆ. ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ನಿರ್ಧಾರವೂ ಆಗಿದೆ. ಈಗಲಾದರೂ ವರದಿಯ ಶಿಫಾರಸುಗಳು ಏನಿದ್ದವು ಎಂಬುದು ಸಾರ್ವಜನಿಕವಾಗಿ ಗೊತ್ತಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನಿನ ಖಾತರಿ ಹಾಗೂ ಎಲ್ಲ ಬಗೆಯ ಕೃಷಿ ಉತ್ಪನ್ನಗಳಿಗೂ ಎಂಎಸ್‌ಪಿ ಭರವಸೆ ನೀಡುವಂತೆ ಆಗ್ರಹಿಸಿ ಈಗಲೂ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆಗಳು ಈಡೇರಿಸಲು ಶ‌ಕ್ಯ ಆಗದೇ ಇರುವಂಥವು ಎಂದು ಹೇಳಿದರು.

ಹೊಸದಾಗಿ ಕೃಷಿ ಕಾನೂನು ರಚಿಸುವುದಕ್ಕಾಗಿ ಅಧಿಕೃತ ಸಮಿತಿಯನ್ನು ರಚನೆಯ ಬಗ್ಗೆಯೂ ಅವರು ಸಲಹೆ ನೀಡಿದ್ದಾರೆ.

‘ಸರ್ಕಾರದ ಈಗಿನ ಯೋಜನೆಗಳೊಂದಿಗೇ ಹೋಗ ಲಾಗದು. ಸುಧಾರಣೆಗಳು ಬೇಕೇ ಬೇಕು. ಅಂಥ ಸುಧಾರಣೆಗಳ ಬಗ್ಗೆಯೇ ವರದಿಯು ಸಲಹೆ ನೀಡಿತ್ತು. ಹೀಗಾಗಿ, ಎಂಎಸ್‌ಪಿ ಹಾಗೂ ಇತರ ವಿಷಯಗಳ ಬಗ್ಗೆ ಅಧ್ಯಯನ ನಡೆಸುವ ಹೊಸ ಸಮಿತಿಯು ಈ ವರದಿಯನ್ನು ಪರಿಗಣಿಸಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೂವರು ತಜ್ಞರ ಸಮಿತಿಯು, ಮಾರ್ಚ್‌ 19ರಂದು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿತ್ತು. ರೈತರ ಪ್ರತಿಭಟನೆಗೆ ಪರಿಹಾರ ಒದಗಿಸುವಲ್ಲಿ ಸಮಿತಿಯ ಶಿಫಾರಸುಗಳು ದಾರಿಯನ್ನು ತೋರಲಿದ್ದು, ವರದಿಯನ್ನು ಬಹಿರಂಗ ಪಡಿಸಬೇಕು ಎಂದು ಘನವಟ್
ಅವರು ಸೆ.1ರಂದು ಕೂಡ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT