ಗುರುವಾರ , ಜೂನ್ 24, 2021
22 °C

ಲಸಿಕೆಗಳ ವಿಭಿನ್ನ ಬೆಲೆಗಳ ತಾರ್ಕಿಕತೆ ವಿವರಿಸಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ

ಪಿಟಿಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಕೋವಿಡ್-19 ಲಸಿಕೆಗಳ ಖರೀದಿಯಲ್ಲಿ ಬೆಲೆಗಳ ವ್ಯತ್ಯಾಸಗಳ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಗಮನಹರಿಸಿದೆ. ಅಂತಹ ಬೆಲೆ ನೀತಿಯ ಹಿಂದಿನ ‘ತಾರ್ಕಿಕತೆ ಮತ್ತು ಆಧಾರ’ವನ್ನು ವಿವರಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿದೆ.

'ಸಾಂಕ್ರಾಮಿಕ ಸಮಯದಲ್ಲಿ ಅಗತ್ಯ ಸರಬರಾಜು ಮತ್ತು ಸೇವೆಗಳ ವಿತರಣೆ' ಗೆ ಸಂಬಂಧಿಸಿದ ಸುಮೊಟೊ ಪ್ರಕರಣದ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯವು ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ವಿತರಣೆಗೆ ಹೇಗೆ ಸಿದ್ಧವಾಗಿದ್ದೀರಿ ಎಂಬ ಬಗ್ಗೆ ಮಾಹಿತಿ ಕೇಳಿದೆ.

‘ಲಸಿಕೆಗಳ ಬೆಲೆಗೆ ಸಂಬಂಧಿಸಿದಂತೆ ಅಂಗೀಕರಿಸಿದ ಆಧಾರ ಮತ್ತು ತಾರ್ಕಿಕತೆಯನ್ನು ಕೇಂದ್ರ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ಸ್ಪಷ್ಟಪಡಿಸಬೇಕು’ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಹೇಳಿದೆ.

‘ಲಸಿಕೆ ತಯಾರಿಸುತ್ತಿರುವ ಬೇರೆ ಬೇರೆ ತಯಾರಕರು ವಿಭಿನ್ನ ಬೆಲೆಗಳನ್ನು ನಿಗದಿ ಮಾಡಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಏನು ಮಾಡುತ್ತಿದೆ ’ ಎಂದು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಎಸ್ ರವೀಂದ್ರ ಭಟ್ ಅವರನ್ನೂ ಒಳಗೊಂಡ ನ್ಯಾಯಪೀಠ ಹೇಳಿದೆ.

ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಿದ ವಿಚಾರಣೆಯಲ್ಲಿ, ಹಿರಿಯ ವಕೀಲ ಮತ್ತು ಎಸ್‌ಸಿಬಿಎ (ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್) ಅಧ್ಯಕ್ಷ ವಿಕಾಸ್ ಸಿಂಗ್ ಅವರು ಕೇಂದ್ರ, ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳು ಖರೀದಿಸುತ್ತಿರುವ ಕೋವಿಡ್ ಲಸಿಕೆಗಳ ಬೆಲೆ ವ್ಯತ್ಯಾಸದ ಬಗ್ಗೆ ನ್ಯಾಯಪೀಠದ ಗಮನ ಸೆಲೆದರು.

ಔಷಧಿಗಳ ಬೆಲೆಯನ್ನು ನಿಯಂತ್ರಿಸಲು ಡ್ರಗ್ಸ್ ಕಂಟ್ರೋಲ್ ಕಾನೂನಿನಡಿಯಲ್ಲಿ ಕೇಂದ್ರದ ಅಧಿಕಾರವನ್ನು ನ್ಯಾಯಪೀಠ ಉಲ್ಲೇಖಿಸಿದೆ. ಈ ಅಧಿಕಾರವನ್ನು ಬಳಸಲು ಕೊರೊನಾ ಸಾಂಕ್ರಾಮಿಕ ರೋಗದ ಸಮಯ ಬಹುಶಃ ಸೂಕ್ತವಾದುದು ಎಂದು ನ್ಯಾಯಪೀಠ ಹೇಳಿದೆ.

‘ಇದು ಸಾಂಕ್ರಾಮಿಕ ಮತ್ತು ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭ. ಈಗಲ್ಲದೆ ಅಂತಹ ಅಧಿಕಾರಗಳನ್ನು ಯಾವಾಗ ಬಳಸುತ್ತೀರಿ?’ ಎಂದು ನ್ಯಾಯಾಲಯ ಕೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು