ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ–ನೋಯ್ಡಾ ರಸ್ತೆ ದಿಗ್ಬಂಧನದಿಂದ ಮುಕ್ತವಾಗಿಲ್ಲ ಏಕೆ?: ಸುಪ್ರೀಂ ಕೋರ್ಟ್

ಉತ್ತರಪ್ರದೇಶ ಸರ್ಕಾರದಿಂದ ವಿವರಣೆ ಕೇಳಿದ ಸುಪ್ರೀಂ ಕೋರ್ಟ್‌
Last Updated 28 ಮಾರ್ಚ್ 2021, 12:45 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮತ್ತು ನೋಯ್ಡಾವನ್ನು ಸಂಪರ್ಕಿಸುವ ರಸ್ತೆಗಳು ದಿಗ್ಬಂಧನದಿಂದ ಇನ್ನೂ ಏಕೆ ಮುಕ್ತವಾಗಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ರೈತರು ನಡೆಸುತ್ತಿರುವ ಬೃಹತ್ ಆಂದೋಲನದಿಂದಾಗಿ ದೆಹಲಿ ಮತ್ತು ನೋಯ್ಡಾವನ್ನು ಸಂಪರ್ಕಿಸುವ ರಸ್ತೆಗಳು ಬಂದ್ ಆಗಿದ್ದವು.

‘ರಸ್ತೆಗಳನ್ನು ಮುಕ್ತಗೊಳಿಸಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಮತ್ತು ಇತರರಿಗೆ ನೋಟಿಸ್ ನೀಡುವುದು ಸೂಕ್ತವೆಂದು ನಾವು ಭಾವಿಸುತ್ತೇವೆ’ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್‌ ಮತ್ತು ಆರ್. ಸುಭಾಷ್ ರೆಡ್ಡಿ ಅವರನ್ನೊಳಗೊಂಡ ನ್ಯಾಯಪೀಠವು ಹೇಳಿದೆ.

‘ನೋಯ್ಡಾದಿಂದ ದೆಹಲಿಗೆ ತೆರಳಲು ಸಾಮಾನ್ಯವಾಗಿ 20 ನಿಮಿಷವಾಗುತ್ತದೆ. ಆದರೆ, ಈ ಮಾರ್ಗದಲ್ಲಿ ದಿಗ್ಬಂಧನ ಇರುವುದರಿಂದಾಗಿ ಈಗ 2 ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ಹಾಗಾಗಿ, ನೋಯ್ಡಾದಿಂದ ದೆಹಲಿಗೆ ಪ್ರಯಾಣ ಮಾಡುವುದು ದುಃಸ್ವಪ್ನದಂತಾಗಿದೆ’ ಎಂದು ದೂರಿ ಮೋನಿಕಾ ಅಗರ್‌ವಾಲ್ ಎನ್ನುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

‘ನೋಯ್ಡಾದ ನಿವಾಸಿಯಾಗಿರುವ ನಾನು ಮಾರ್ಕೆಟಿಂಗ್ ಉದ್ಯೋಗ ನಿಮಿತ್ತ ಆಗಾಗ್ಗೆ ದೆಹಲಿಗೆ ಪ್ರಯಾಣಿಸ ಬೇಕಾಗುತ್ತದೆ. ಒಂಟಿ ಪಾಲಕಿಯಾಗಿರುವ ನನಗೆ ವೈದ್ಯಕೀಯ ಸಮಸ್ಯೆಗಳೂ ಇವೆ. ಇದರಿಂದಾಗಿ ನಿತ್ಯವೂ ಈ ಮಾರ್ಗದಲ್ಲಿ ಸಂಚರಿಸುವುದು ಕಷ್ಟಕರವಾಗಿದೆ’ ಎಂದು ಮೋನಿಕಾ ಮನವಿಯಲ್ಲಿ ತಿಳಿಸಿದ್ದರು.

‘ರಸ್ತೆಗಳನ್ನು ತೆರವುಗೊಳಿಸಲು ಈ ನ್ಯಾಯಾಲಯವು ಹಲವು ನಿರ್ದೇಶನಗಳನ್ನು ನೀಡಿದೆ. ಆದರೆ, ಇನ್ನೂ ರಸ್ತೆಗಳು ತೆರವುಗೊಂಡಿಲ್ಲ’ಎಂದೂ ಮೋನಿಕಾ ವಾದಿಸಿದ್ದಾರೆ.

ರಸ್ತೆ ಮಾರ್ಗದಲ್ಲಿ ದಿಗ್ಬಂಧನ ತೆರವಿನ ಬಗ್ಗೆ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿರುವ ಸುಪ್ರೀಂ ಕೋರ್ಟ್, ಏ.9ಕ್ಕೆ ಪ್ರಕರಣವನ್ನು ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT