ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಾತ ಸೃಷ್ಟಿ ಸಲ್ಲ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ‘ಸುಪ್ರೀಂ’ ಸೂಚನೆ

‘ಒಬಿಸಿಗೆ ಮೀಸಲಾತಿ: ಮೂರು ಹಂತದ ಪರಿಶೀಲನೆ ಅಗತ್ಯ’
Last Updated 10 ಮೇ 2022, 14:25 IST
ಅಕ್ಷರ ಗಾತ್ರ

ನವದೆಹಲಿ: ‘ಮೂರು ಹಂತದ ಪರಿಶೀಲನೆ ಇಲ್ಲದೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಸಾಧ್ಯವಿಲ್ಲ. ಆದರೆ, ಸ್ಥಳೀಯ ಸಂಸ್ಥೆಗಳ ಅಧಿಕಾರ ಅವಧಿ ಪೂರ್ಣಗೊಂಡ ನಂತರ ನಿರ್ವಾತ ಸೃಷ್ಟಿಯಾಗಲು ಬಿಡದೇ ಚುನಾವಣೆ ನಡೆಸುವುದು ರಾಜ್ಯಗಳ ಸಾಂವಿಧಾನಿಕ ಹೊಣೆಗಾರಿಕೆಯಾಗಿದೆ’ ಎಂದು ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ.

ಮಧ್ಯಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ, ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ ಈ ವಿಷಯವನ್ನು ಸ್ಪಷ್ಟಪಡಿಸಿತು.

ಅಲ್ಲದೇ, ರಾಜ್ಯದ 23,263 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸಂಬಂಧ ಎರಡು ವಾರಗಳ ಒಳಗಾಗಿ ಅಧಿಸೂಚನೆ ಹೊರಡಿಸುವಂತೆ ಮಧ್ಯಪ್ರದೇಶದ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಜುಲೈ 12ಕ್ಕೆ ಮುಂದೂಡಿತು.

‘ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಕೆಲ ಅರ್ಜಿಗಳ ವಿಚಾರಣೆ ಬಾಕಿ ಇದೆ. ಕೆಲ ಅರ್ಜಿಗಳಿಗೆ ಸಂಬಂಧಿಸಿ ಮಧ್ಯಂತರ ಆದೇಶಗಳನ್ನು ಹೊರಡಿಸಲಾಗಿದ್ದು, ಇವು ಚುನಾವಣೆ ಅಧಿಸೂಚನೆ ಪ್ರಕಟಿಸಲು ಅಡ್ಡಿಯಾಗಬಹುದು’ಎಂಬುದಾಗಿ ರಾಜ್ಯ ಚುನಾವಣಾ ಆಯೋಗದ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಈ ವಿಷಯವಾಗಿ ಸುಪ್ರೀಂಕೋರ್ಟ್‌ ನೀಡುವ ಆದೇಶ ಮತ್ತು ನಿರ್ದೇಶನಗಳನ್ನು ರಾಜ್ಯ ಚುನಾವಣಾ ಆಯೋಗ ಪಾಲಿಸಬೇಕು. ಈ ವಿಷಯವಾಗಿ ಹೈಕೋರ್ಟ್‌ ಅಥವಾ ಸಿವಿಲ್‌ ನ್ಯಾಯಾಲಯ ನೀಡುವ ನೀಡುವ ಆದೇಶಗಳಿಂದ ಪ್ರಭಾವಿತವಾಗಬಾರದು’ ಎಂದು ಸೂಚಿಸಿತು.

‘ಒಂದು ವೇಳೆ ಮಧ್ಯಪ್ರದೇಶ ಹೈಕೋರ್ಟ್‌ ಅಥವಾ ಸಿವಿಲ್‌ ಕೋರ್ಟ್‌ ಯಾವುದಾದರೂ ಆದೇಶ ನೀಡಿದಲ್ಲಿ ಅಥವಾ ನೀಡುವುದಿದ್ದರೆ ಹಾಗೂ ಅದು ಸುಪ್ರೀಂಕೋರ್ಟ್‌ನ ನಿರ್ದೇಶನಕ್ಕೆ ವಿರುದ್ಧವಾಗಿದ್ದಲ್ಲಿ, ಅಂಥ ಆದೇಶವು ವಜಾಗೊಂಡಿದೆ ಎಂಬುದಾಗಿ ಪರಿಭಾವಿಸಬೇಕು. ಅಲ್ಲದೇ, ಸುಪ್ರೀಂಕೋರ್ಟ್‌ನ ಪೂರ್ವಾನುಮತಿ ಇಲ್ಲದೇ ಯಾವುದೇ ಕ್ರಮ ಕೈಗೊಳ್ಳಬಾರದು’ ಎಂದೂ ನ್ಯಾಯಪೀಠ ಸೂಚಿಸಿತು.

‘ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದ ಸುಪ್ರೀಂಕೋರ್ಟ್‌ನ ಈ ಆದೇಶ ಹಾಗೂ ನಿರ್ದೇಶನಗಳು ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಲ್ಲ. ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೂ ಹಾಗೂ ಸಂಬಂಧಿಸಿದ ಚುನಾವಣಾ ಆಯೋಗಗಳಿಗೆ ಅನ್ವಯ’ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ.

‘ನಿಖರವಾದ ಅಂಕಿಅಂಶಗಳ ಆಧಾರದಲ್ಲಿ ಮೂರು ಹಂತದ ಪರಿಶೀಲನೆ ನಡೆಸಿ, ಆಯಾ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಖಾತರಿಪಡಿಸಿದ ಬಳಿಕವೇ ರಾಜಕೀಯ ಮೀಸಲಾತಿ ನೀಡಬೇಕು’ ಎಂದು ಸುಪ್ರೀಂಕೋರ್ಟ್‌ 2010ರಲ್ಲಿ ತೀರ್ಪು ನೀಡಿತ್ತು. 2021ರ ಮಾರ್ಚ್‌ನಲ್ಲೂ ಸುಪ್ರೀಂಕೋರ್ಟ್‌ ಇದನ್ನು ಪುನರುಚ್ಚರಿಸಿತ್ತು.

ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಎರಡು ವಾರಗಳ ಒಳಗಾಗಿ ಅಧಿಸೂಚನೆ ಹೊರಡಿಸುವಂತೆ ಮಹಾರಾಷ್ಟ್ರದ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿ ಮೇ 4ರಂದು ಸುಪ್ರೀಂಕೋರ್ಟ್‌ ಆದೇಶಿಸಿತ್ತು.

‘ಮೀಸಲಾತಿ ಉದ್ದೇಶ, ಸ್ವರೂಪ ಬೇರೆಯಾಗಿವೆ’
‘ಸ್ಥಳೀಯ ಸಂಸ್ಥೆಗಳಲ್ಲಿ ನೀಡಲಾಗಿರುವ ಮೀಸಲಾತಿಯ ಸ್ವರೂಪ ಹಾಗೂ ಉದ್ದೇಶವೇ ಬೇರೆ, ಶಿಕ್ಷಣ ಹಾಗೂ ಉದ್ಯೋಗದಲ್ಲಿ ನೀಡಿರುವ ಮೀಸಲಾತಿಯೇ ಬೇರೆ ಎಂಬುದನ್ನು ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ಈಗಾಗಲೇ ವ್ಯಾಖ್ಯಾನಿಸಿದೆ.

‘ಹಿಂದು ವರ್ಗಗಳಿಗೆ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿ ಮೂರು ಹಂತದ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ನಂತರ, ಭವಿಷ್ಯದಲ್ಲಿ ನಡೆಯುವ ಚುನಾವಣೆಗಳಿಗೆ ಮೀಸಲಾತಿಯನ್ನು ಪರಿಗಣಿಸಬಹುದು. ಆದರೆ, ಸಾಂವಿಧಾನಿಕ ಹೊಣೆಗಾರಿಕೆ ದೃಷ್ಟಿಯಿಂದ ನೋಡಿದಾಗ, ಚುನಾವಣೆಗಳು ನಡೆಯಲೇಬೇಕು ಹಾಗೂ ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ನ್ಯಾಯಪೀಠ ಹೇಳಿತು.

ಪರಿಶೀಲನಾ ಅರ್ಜಿ ಸಲ್ಲಿಕೆ: ಶಿವರಾಜಸಿಂಗ್‌ ಚೌಹಾಣ್
ಭೋಪಾಲ್:
‘ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದ ನಂತರವೇ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುವುದು’ ಎಂಬ ಬಗ್ಗೆ ಸುಪ್ರೀಂಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜಸಿಂಗ್ ಚೌಹಾಣ್ ಮಂಗಳವಾರ ಇಲ್ಲಿ ಹೇಳಿದರು.

ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸಂಬಂಧ ಎರಡು ವಾರಗಳ ಒಳಗಾಗಿ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿರುವ ಕುರಿತು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT