ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತದಲ್ಲಿ ಕಾಲು ತುಂಡಾದ ಬಾಲಕಿಗೆ ₹ 53.7 ಲಕ್ಷ ಪರಿಹಾರ: ಸುಪ್ರೀಂ ಕೋರ್ಟ್ ಆದೇಶ

10 ವರ್ಷಗಳ ಹಿಂದೆ ಬಳ್ಳಾರಿಯ ಕುಡಿತಿನಿಯಲ್ಲಿ ನಡೆದಿದ್ದ ಅಪಘಾತ
Last Updated 20 ಆಗಸ್ಟ್ 2022, 14:35 IST
ಅಕ್ಷರ ಗಾತ್ರ

ನವದೆಹಲಿ: ಹತ್ತು ವರ್ಷಗಳ ಹಿಂದೆ ಕರ್ನಾಟಕದ ಬಳ್ಳಾರಿಯ ಕುಡಿತಿನಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಲಾರಿ ಹರಿದು ಕಾಲು ತುಂಡಾದ ಪ್ರಕರಣದಲ್ಲಿ ಬಾಲಕಿಗೆ ₹ 53.07 ಲಕ್ಷ ಪರಿಹಾರವನ್ನು ಹೆಚ್ಚಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

‘ಅಪಘಾತದಿಂದಾಗಿ ಬಾಲಕಿಯ ಒಂದು ಕಾಲು ತುಂಡಾಗಿದೆ. ಆಕೆಯ ಸೊಂಟದ ಕೆಳಭಾಗದಲ್ಲಿ ಗಂಭೀರ ಗಾಯಗಳಾಗಿವೆ. ಆಕೆ ಜೀವನ ಪರ್ಯಂತ ಶಾಶ್ವತವಾದ ಅಂಗವೈಕಲ್ಯಕ್ಕೊಳಗಾಗಿದ್ದಾಳೆ. ಭವಿಷ್ಯದಲ್ಲಿ ಗಳಿಕೆ ಮತ್ತು ಮದುವೆಯ ನಿರೀಕ್ಷೆಯನ್ನೂ ಕೈಬಿಟ್ಟಿದ್ದಾಳೆ. ವೈದ್ಯಕೀಯ ವೆಚ್ಚ ಭರಿಸುವ ಜತೆಗೆ ನೋವು ಮತ್ತು ಸಂಕಟಕ್ಕೀಡಾಗಿದ್ದಾಳೆ. ಹಾಗಾಗಿ, ಅಪಘಾತ ಪರಿಹಾರದ ಮೊತ್ತವನ್ನು ₹ 53.07 ಲಕ್ಷ ಹೆಚ್ಚಿಸಬೇಕು’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಅಪಘಾತ ಸಂಭವಿಸಿದ ಹತ್ತು ವರ್ಷಗಳ ಬಳಿಕ ಪರಿಹಾರ ಮೊತ್ತವನ್ನು ಹೆಚ್ಚಳ ಮಾಡಿನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿಕ್ರಮ್ ನಾಥ್ ಅವರನ್ನೊಳಗೊಂಡ ನ್ಯಾಯಪೀಠವು ಆದೇಶ ಪ್ರಕಟಿಸಿದೆ.

ಅರ್ಜಿದಾರಳಾದ ಬಾಲಕಿ ರೂಪಾ ಅವರ ಪರ ವಕೀಲರಾದ ಸಂಜಯ್ ಎಂ. ನುಲಿ ಅವರು ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು.

ಕರ್ನಾಟಕ ಹೈಕೋರ್ಟ್, ಮೋಟಾರ್ ಅಪಘಾತ ಕ್ಲೇಮ್ಸ್‌ ಟ್ರಿಬ್ಯೂಲನ್‌ ನೀಡಿದ್ದ ಪರಿಹಾರ ಮೊತ್ತವನ್ನು ₹ 8.9 ಲಕ್ಷದಿಂದ ಶೇ 6ರ ಬಡ್ಡಿಯನ್ನೊಳಗೊಂಡಂತೆ ₹ 13.65 ಲಕ್ಷಕ್ಕೆ ಹೆಚ್ಚಿಸಿತ್ತು.

ಅರ್ಜಿದಾರರ ಪರ ವಕೀಲರು ಅಪಘಾತದಲ್ಲಿ ಕಾಲು ತುಂಡಾಗಿದ್ದರ ಪರಿಣಾಮ ಬಾಲಕಿಯು ಅನುಭವಿಸುತ್ತಿರುವ ದೈಹಿಕ– ಮಾನಸಿಕ ನೋವು ಹಾಗೂ ಭಾವನಾತ್ಮಕ ಸಂಕಟವನ್ನು ತೋರಿಸುವ ಚಿತ್ರಗಳನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದರು.

‘ಬಾಲಕಿಯು ಬೆಳೆದಂತೆ ಮತ್ತೊಂದು ಕಾಲು ಕೂಡಾ ಆಕೆಗೆ ಆಧಾರವಾಗುತ್ತಿಲ್ಲ. ಆಕೆ ಕೃತಕವಾದ ಅಂಗವನ್ನೂ ಬಳಸಲು ಸಾಧ್ಯವಾಗುತ್ತಿಲ್ಲ. ಆಕೆ ತನ್ನ ನಿತ್ಯದ ದಿನಚರಿಗೆ ಮತ್ತೊಬ್ಬರ ಮೇಲೆ ಅವಲಂಬಿತವಾಗಿರಬೇಕಾಗಿದೆ. ಒಂದೆಡೆಯಿಂದ ಮತ್ತೊಂದೆಡೆ ಹೋಗಲು ಆಕೆ ಸದಾ ಬಾಡಿಗೆ ಸಾರಿಗೆಯನ್ನು ಬಳಸಬೇಕಾಗುತ್ತದೆ. ವಿವಾಹವಾಗುವ ನಿರೀಕ್ಷೆಯನ್ನೂ ಕಳೆದುಕೊಂಡಿದ್ದಾಳೆ’ ಎಂದೂ ಅರ್ಜಿದಾರರ ಪರ ವಕೀಲರು ತಿಳಿಸಿದ್ದರು.

‘ಪರಿಹಾರದ ಮೊತ್ತವನ್ನು ವಾರ್ಷಿಕ ಬಡ್ಡಿ ಶೇ 8ರೊಂದಿಗೆ ₹ 53.07ಲಕ್ಷಕ್ಕೆ ಹೆಚ್ಚಿಸಿರುವ ನ್ಯಾಯಪೀಠವು, ಅರ್ಜಿದಾರ ಬಾಲಕಿಯು ಇನ್ನೂ ಅಪ್ರಾಪ್ತ ವಯಸ್ಕಳಾಗಿರುವುದರಿಂದ ಪರಿಹಾರ ಮೊತ್ತದಲ್ಲಿ ₹ 10 ಲಕ್ಷವನ್ನು ಆಕೆಯ ತಂದೆಗೆ ತಕ್ಷಣವೇ ವಿತರಿಸಬೇಕು ಹಾಗೂ ಉಳಿದ ಮೊತ್ತವನ್ನು ಆಕರ್ಷಕ ಬಡ್ಡಿಯ ಮೊತ್ತಕ್ಕೆ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಬೇಕು’ ಎಂದೂ ತಿಳಿಸಿದೆ.

ವಿವರ: 2012ರ ಏಪ್ರಿಲ್ 19ರಂದು ಬಳ್ಳಾರಿ ಜಿಲ್ಲೆಯ ಕುಡಿತಿನಿಯ ಅಭಿರುಚಿ ಫ್ಯಾಮಿಲಿ ರೆಸ್ಟೋರೆಂಟ್ ಎದುರು ಬಾಲಕಿಯು ಅಪಘಾತಕ್ಕೊಳಗಾಗಿದ್ದಳು. ತಾಯಿಯೊಂದಿಗೆ ಹಿಟ್ಟಿನ ಗಿರಣಿಗೆ ತೆರಳಿದ್ದ ಬಾಲಕಿಯು ಮನೆಗೆ ಹಿಂತಿರುಗುವಾಗ ಲಾರಿಯೊಂದು ಡಿಕ್ಕಿ ಹೊಡೆದು ಆಕೆಯ ಬಲಗಾಲಿನ ಮೇಲೆ ಹರಿದಿತ್ತು. ಅಪಘಾತದಲ್ಲಿ ಆಕೆಯ ಪಕ್ಕೆಲುಬು ಮುರಿದು, ತಲೆಗೂ ಪೆಟ್ಟಾಗಿತ್ತು. ತೀವ್ರ ಪೆಟ್ಟಾಗಿದ್ದ ಬಲಗಾಲನ್ನು ಕತ್ತರಿಸಲಾಗಿತ್ತು. ದೇಹದ ಬಲಗಡೆಯ ಸೊಂಟದ ಕೆಳಗಿನ ಭಾಗ ಸೇರಿದಂತೆ ಖಾಸಗಿ ಭಾಗಗಳ ಮೇಲೂ ಪರಿಣಾಮ ಬೀರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT