ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ವಿರೋಧಿ ಶಕ್ತಿಗಳಿಂದ ಸಾಧನವಾಗಿ ಸುಪ್ರೀಂ ಕೋರ್ಟ್‌ ಬಳಕೆ: ‘ಪಾಂಚಜನ್ಯ’

ಆರ್‌ಎಸ್‌ಎಸ್‌ ಮುಖವಾಣಿ ‘ಪಾಂಚಜನ್ಯ’ದ ಸಂಪಾದಕೀಯದಲ್ಲಿ ಟೀಕೆ
Last Updated 16 ಫೆಬ್ರುವರಿ 2023, 15:54 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತ ವಿರೋಧಿ ಶಕ್ತಿಗಳು ಸುಪ್ರೀಂಕೋರ್ಟ್‌ ಅನ್ನು ಒಂದು ಸಾಧನವನ್ನಾಗಿ ಬಳಸುತ್ತಿವೆ’ ಎಂದು ಆರ್‌ಎಸ್‌ಎಸ್‌ ಮುಖವಾಣಿ ‘ಪಾಂಚಜನ್ಯ’ ನಿಯತಕಾಲಿಕೆಯಲ್ಲಿ ಆರೋಪಿಸಲಾಗಿದೆ.

‘ದೇಶದ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಸುಪ್ರೀಂಕೋರ್ಟ್‌ ಸ್ಥಾಪಿಸಲಾಗಿದೆ. ಆದರೆ, ಈಗ ದೇಶ ವಿರೋಧಿ ಶಕ್ತಿಗಳು ತಮ್ಮ ದಾರಿಯನ್ನು ಸುಗಮಗೊಳಿಸುವ ಸಲುವಾಗಿ ಸುಪ್ರೀಂಕೋರ್ಟ್‌ಅನ್ನು ಒಂದು ಸಾಧನವನ್ನಾಗಿ ಬಳಸಿಕೊಳ್ಳುತ್ತಿವೆ’ ಎಂದೂ ಆಪಾದಿಸಲಾಗಿದೆ.

‘ಪಾಂಚಜನ್ಯ’ದ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿರುವ ಸಂಪಾದಕೀಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಬಿಬಿಸಿಯ ಸಾಕ್ಷ್ಯಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದನ್ನು ನಿಷೇಧಿಸಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ನೋಟಿಸ್‌ ನೀಡಿರುವುದನ್ನು ನಿಯತಕಾಲಿಕೆ ಟೀಕಿಸಿದೆ.

‘ಮೊದಲು ಮಾನವ ಹಕ್ಕುಗಳ ಹೆಸರಿನಲ್ಲಿ ಉಗ್ರರನ್ನು ರಕ್ಷಿಸುವ ಪ್ರಯತ್ನಗಳು ನಡೆದವು, ನಂತರ, ಪರಿಸರ ಸಂರಕ್ಷಣೆ ನೆಪದಲ್ಲಿ ದೇಶದ ಅಭಿವೃದ್ಧಿಗೆ ಅಡ್ಡಿಪಡಿಸಲಾಯಿತು. ಈಗ, ಇಲ್ಲಿದ್ದುಕೊಂಡೇ ಭಾರತದ ವಿರುದ್ಧ ಅಪಪ್ರಚಾರ ನಡೆಸಲು ದೇಶ ವಿರೋಧಿ ಶಕ್ತಿಗಳು ಹಕ್ಕು ಹೊಂದಿರಬೇಕು ಎಂದು ಸಾರುವ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

‘ಸುಪ್ರೀಂಕೋರ್ಟ್ ಈ ದೇಶದ ತೆರಿಗೆದಾರರು ನೀಡುವ ಹಣದಿಂದ ನಡೆಯುತ್ತಿದೆ. ದೇಶದ ಹಿತ ಕಾಪಾಡುವುದಕ್ಕಾಗಿ ಇಲ್ಲಿನ ಕಾನೂನಿನ ಪ್ರಕಾರ ಅದು ಕಾರ್ಯ ನಿರ್ವಹಿಸುತ್ತದೆ’ ಎಂದಿದೆ.

‘ದೇಶಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಬಿಬಿಸಿ ಸಾಕ್ಷ್ಯಚಿತ್ರವನ್ನು ನಿರ್ಮಿಸಿದೆ’ ಎಂದಿರುವ ಸಂಪಾದಕೀಯವು, ‘ಈ ಸಾಕ್ಷ್ಯಚಿತ್ರ ಸುಳ್ಳಿನ ಕಂತೆ ಹಾಗೂ ಕಪೋಲಕಲ್ಪಿತ ಸಂಗತಿಗಳ ಆಧಾರದ ಮೇಲೆ ಇದನ್ನು ನಿರ್ಮಿಸಲಾಗಿದೆ’ ಎಂದು ಟೀಕಿಸಿದೆ.

‘ಈ ದೇಶ ವಿರೋಧಿ ಶಕ್ತಿಗಳು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿರುವ ಅವಕಾಶಗಳನ್ನು, ನಮ್ಮ ಔದಾರ್ಯ ಹಾಗೂ ನಾಗರಿಕತೆಯ ಮಟ್ಟಗಳ ಲಾಭ ಪಡೆಯುತ್ತಿವೆ’ ಎಂದು ಪ್ರತಿಪಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT