ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರ ಹತ್ಯೆ: ಇಟಲಿ ನೌಕಾಪಡೆ ವಿರುದ್ಧದ ಪ್ರಕರಣ ರದ್ದುಪಡಿಸಿದ ‘ಸುಪ್ರೀಂ’

Last Updated 15 ಜೂನ್ 2021, 8:26 IST
ಅಕ್ಷರ ಗಾತ್ರ

ನವದೆಹಲಿ: ಕೇರಳದ ಕರಾವಳಿಯಲ್ಲಿ 2012ರ ಫೆಬ್ರುವರಿಯಲ್ಲಿ ನಡೆದ ಇಬ್ಬರು ಮೀನುಗಾರರ ಹತ್ಯೆಗೆ ಸಂಬಂಧಿಸಿದಂತೆ ಇಟಲಿ ನೌಕಾಪಡೆಯ ಇಬ್ಬರು ನಾವಿಕರ ವಿರುದ್ಧ ಭಾರತದಲ್ಲಿ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ರದ್ದುಪಡಿಸಿದೆ.

ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಎಂ ಆರ್ ಷಾ ಅವರನ್ನೊಳಗೊಂಡ ರಜಾಕಾಲದ ಪೀಠವು ಇಬ್ಬರು ಇಟಲಿಯ ನೌಕಾಪಡೆಯವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ವಜಾಗೊಳಿಸಿ, ಅವರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿತು.

ಅಂತರರಾಷ್ಟ್ರೀಯ ನ್ಯಾಯಮಂಡಳಿ ತೀರ್ಪುನ್ನು ಭಾರತ ಒಪ್ಪಿಕೊಂಡಿರುವಂತೆ, ಇಟಲಿ ಸರ್ಕಾರ ಈ ಪ್ರಕರಣದ ಕುರಿತು ತನಿಖೆ ಮುಂದುವರಿಸಲಿದೆ.

ನ್ಯಾಯಾಲಯದ ನಿರ್ದೇಶನದಂತೆ ಇಟಲಿ ಸರ್ಕಾರ ಈಗಾಗಲೇ ಮೀನುಗಾರರ ಕುಟುಂಬಕ್ಕೆ ₹ 10 ಕೋಟಿ ಪರಿಹಾರ ಪಾವತಿಸಿದೆ. ಇಷ್ಟೊಂದು ಮೊತ್ತ ನೀಡಿರುವುಸುದು ಸಮಂಜಸ ಮತ್ತು ಸಮಪರ್ಕವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಈ ₹10 ಕೋಟಿಯಲ್ಲಿ, ತಲಾ ₹4 ಕೋಟಿಯನ್ನು ಮೃತ ಮೀನುಗಾರರ ಕುಟುಂಬದವರ ಹೆಸರಲ್ಲಿ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗುತ್ತದೆ. ಉಳಿದ ₹2 ಕೋಟಿಯನ್ನು ದೋಣಿಯ ಮಾಲೀಕರಿಗೆ ನೀಡಲು ತೀರ್ಮಾನಿಸಲಾಗಿದೆ.

2012ರ ಫೆಬ್ರುವರಿ 15ರಂದು ಲಕ್ಷದ್ವೀಪದ ಕಡೆಯಿಂದ ಮೀನುಗಾರಿಕೆ ಮುಗಿಸಿಕೊಂಡು ಮರಳುತ್ತಿದ್ದ ಕೇರಳದ ಮೀನುಗಾರರನ್ನು ಇಟಲಿಯ ನೌಕಾಪಡೆಯ ಇಬ್ಬರು ನಾವಿಕರು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಈ ಸಂಬಂಧ ನೌಕಾಪಡೆಯ ಇಬ್ಬರು ನಾವಿಕರ ವಿರುದ್ಧ ಮೊಕದ್ದಮೆ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT