ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಆರ್‌ಆರ್‌ಗೆ ಭೂಸ್ವಾಧೀನ: ರಾಜ್ಯ ಸರ್ಕಾರ, ಬಿಡಿಎಗೆ ‘ಸುಪ್ರೀಂ’ ಸೂಚನೆ

Last Updated 28 ನವೆಂಬರ್ 2021, 17:27 IST
ಅಕ್ಷರ ಗಾತ್ರ

ನವದೆಹಲಿ: ‘ಪೆರಿಫೆರಲ್‌ ವರ್ತುಲ ರಸ್ತೆ’ (ಪಿಆರ್‌ಆರ್‌) ನಿರ್ಮಾಣಕ್ಕೆ ಭೂ ಸ್ವಾಧೀನ ಮಾಡಿಕೊಂಡು, ಯೋಜನೆ ಅನುಷ್ಠಾನಗೊಳಿಸುವಂತೆ ಕರ್ನಾಟಕ ಸರ್ಕಾರ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಎಸ್‌.ಅಬ್ದುಲ್‌ ನಜೀರ್‌, ಸಂಜೀವ್‌ ಖನ್ನಾ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ನಗರಾಭಿವೃದ್ಧಿ ಇಲಾಖೆ ಈ ಸಂಬಂಧ ಸಲ್ಲಿಸಿದ ಅಫಿಡವಿಟ್ ಪರಿಶೀಲಿಸಿದ ನಂತರ ನ್ಯಾಯಪೀಠ ಈ ನಿರ್ದೇಶನ ನೀಡಿತು.

‘ಬೆಂಗಳೂರು ನಗರ ಎಲ್ಲ ದಿಕ್ಕುಗಳಲ್ಲಿಯೂ ಬೃಹತ್ತಾಗಿ ಬೆಳೆದಿದೆ. ನಗರದ ಈ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಒಟ್ಟು 116 ಕಿ.ಮೀ. ಉದ್ದದ ಪೆರಿಫೆರಲ್‌ ವರ್ತುಲ ರಸ್ತೆ ನಿರ್ಮಿಸುವ ಸಂಬಂಧ 2006ರ ನವೆಂಬರ್ 27ರಂದು ಬಿಡಿಎ ಪ್ರಸ್ತಾವನೆ ಸಲ್ಲಿಸಿತ್ತು’ ಎಂದು ರಾಜ್ಯ ಸರ್ಕಾರ ಅಫಿಡವಿಟ್‌ನಲ್ಲಿ ವಿವರಿಸಿದೆ.

‘ನಗರ ಭೌಗೋಳಿಕವಾಗಿ 2,196 ಚದರ ಕಿ.ಮೀ.ನಷ್ಟು ಬೆಳೆದಿದೆ. ನಗರದಲ್ಲಿ 80 ಲಕ್ಷಕ್ಕೂ ಅಧಿಕ ವಾಹನಗಳಿವೆ. ಬೆಂಗಳೂರು ರಾಜಧಾನಿಯೂ ಆಗಿರುವುದರಿಂದ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಬೇರೆ ರಾಜ್ಯಗಳಿಂದ ನಿತ್ಯವೂ ಸಾವಿರಾರು ವಾಹನಗಳು ನಗರಕ್ಕೆ ಬರುತ್ತವೆ. ಹೀಗಾಗಿ ನಗರದ ರಸ್ತೆಗಳು ಹಾಗೂ ಸಾರ್ವಜನಿಕ ವ್ಯವಸ್ಥೆ ಮೇಲೆ ವಿಪರೀತ ಒತ್ತಡ ಬೀಳುತ್ತಿದೆ’ ಎಂದೂ ವಿವರಿಸಲಾಗಿದೆ.

‘ಯೋಜನೆ ಅನುಷ್ಠಾನಕ್ಕೆ 216 ಎಕರೆ 18 ಗುಂಟೆ ಅಗತ್ಯ ಇದ್ದು, 2007ರಲ್ಲಿ ಈ ಕುರಿತು ಅಧಿಸೂಚನೆ ಹೊರಡಿಸಲಾಗಿತ್ತು. 2020ರ ಡಿಸೆಂಬರ್‌ನಲ್ಲಿ ಮಾಡಿದ್ದ ಯೋಜನಾ ವೆಚ್ಚ ₹ 15,475 ಕೋಟಿ ಎಂದು ಅಂದಾಜಿಸಲಾಗಿತ್ತು. ಪರಿಷ್ಕೃತ ಅಂದಾಜಿನಂತೆ, ವೆಚ್ಚವು ಈಗ ₹ 21,091 ಕೋಟಿ ಆಗುವುದು’ ಎಂದೂ ಕರ್ನಾಟಕ ರಾಜ್ಯ ಸರ್ಕಾರ ಅಫಿಡವಿಟ್‌ನಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT