ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಲ್‌ಎಟಿ–2020 ಪ್ರವೇಶ ಪರೀಕ್ಷೆ: ಹಸಿರು ನಿಶಾನೆ ತೋರಿದ ‘ಸುಪ್ರೀಂ’

Last Updated 11 ಸೆಪ್ಟೆಂಬರ್ 2020, 12:24 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿಯು (ಎನ್‌ಎಲ್‌ಎಸ್‌ಐಯು) ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಲು ಮುಂದಾಗಿದ್ದು, ಇದಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ಹಸಿರು ನಿಶಾನೆ ತೋರಿದೆ.

ನ್ಯಾಯಾಲಯದಿಂದ ಅಂತಿಮ ತೀರ್ಪು ಹೊರಬೀಳುವವರೆಗೂ ಪರೀಕ್ಷೆಯ ಫಲಿತಾಂಶ ಪ್ರಕಟಿಸಬಾರದು. ಜೊತೆಗೆ ಯಾವೊಬ್ಬ ವಿದ್ಯಾರ್ಥಿಯನ್ನೂ ದಾಖಲು ಮಾಡಿಕೊಳ್ಳಬಾರದು ಎಂದು ಆದೇಶಿಸಿದೆ.

ವಿಶ್ವವಿದ್ಯಾಲಯವು ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುತ್ತಿರುವುದನ್ನು ಪ್ರಶ್ನಿಸಿ,ಎನ್‌ಎಲ್‌ಎಸ್‌ಐಯು ಮಾಜಿ ಕುಲಪತಿ ಹಾಗೂ ಆಕಾಂಕ್ಷಿಯೊಬ್ಬರ ಪೋಷಕರೂ ಆಗಿರುವ ಪ್ರಾಧ್ಯಾಪಕ ಆರ್‌.ವೆಂಕಟ ರಾವ್‌ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಆರ್‌.ಸುಭಾಷ್‌ ರೆಡ್ಡಿ, ಎಂ.ಆರ್‌.ಶಾ ಅವರಿದ್ದ ತ್ರಿಸದಸ್ಯ ಪೀಠವು ವಿಶ್ವವಿದ್ಯಾಲಯ ಹಾಗೂ ಕುಲಪತಿ ಸುಧೀರ್‌ ಕೃಷ್ಣಸ್ವಾಮಿಯವರಿಗೆ ನೋಟಿಸ್‌ ಜಾರಿಗೊಳಿಸಿತು. ಮೂರು ದಿನಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿತು. ಜೊತೆಗೆ ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಿತು.

‘ನಿಗದಿಯಂತೆಯೇ ನ್ಯಾಷನಲ್‌ ಲಾ ಅಪ್ಟಿಟ್ಯೂಡ್‌ ಟೆಸ್ಟ್‌ (ಎನ್‌ಎಲ್‌ಎಟಿ)–2020 ಅನ್ನು ಶನಿವಾರ ಆಯೋಜಿಸಬಹುದು. ಆದರೆ ಫಲಿತಾಂಶ ಪ್ರಕಟಿಸುವಂತಿಲ್ಲ. ಪ್ರವೇಶ ಪ್ರಕ್ರಿಯೆಯನ್ನೂ ನಡೆಸಬಾರದು. ಇದು ಮಹತ್ವದ ವಿಚಾರ. ಅರ್ಜಿಯ ಇತ್ಯರ್ಥವಾಗಲೇಬೇಕು. ಈ ಸಂಬಂಧ ವಿಶ್ವವಿದ್ಯಾಲಯ ಹಾಗೂ ಕುಲಪತಿಗೆ ನೋಟಿಸ್ ಕೂಡ‌ ನೀಡಲಾಗಿದೆ’ ಎಂದು ಪೀಠವು ಹೇಳಿತು.

ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಲು ಮುಂದಾಗಿರುವುದು ಕಾನೂನು ಬಾಹಿರ ನಿರ್ಧಾರ. ಇದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಜೊತೆಗೆ ಅನವಶ್ಯಕ ವೆಚ್ಚಕ್ಕೂ ದಾರಿ ಮಾಡಿಕೊಟ್ಟಂತಾಗಲಿದೆ ಎಂದು ಅರ್ಜಿದಾರರು ದೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT