ಬಂಗಾಳದ ಮೃತ ಬಿಜೆಪಿ ಕಾರ್ಯಕರ್ತರ ಸಂಬಂಧಿಗಳ ಅರ್ಜಿಯಿಂದ ಹಿಂದೆ ಸರಿದ ನ್ಯಾಯಮೂರ್ತಿ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮೇ 2 ರಂದು ನಡೆದ ಮತದಾನ ಸಂಬಂಧಿತ ಹಿಂಸಾಚಾರದಲ್ಲಿ ಮೃತಪಟ್ಟ ಇಬ್ಬರು ಬಿಜೆಪಿ ಕಾರ್ಯಕರ್ತರ ಸಂಬಂಧಿಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು ಶುಕ್ರವಾರ ಹಿಂದೆ ಸರಿದಿದ್ದಾರೆ.
ಪ್ರಕರಣವನ್ನು ನ್ಯಾಯಾಲಯದ ಮೇಲ್ವಿಚಾರಣೆ ನಡೆಸಬೇಕು, ತನಿಖೆಯನ್ನು ಸಿಬಿಐ ಅಥವಾ ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.
‘ಈ ಅರ್ಜಿಯ ವಿಚಾರಣೆ ನಡೆಸಲು ನನಗೆ ಕಷ್ಟವಿದೆ. ಹೀಗಾಗಿ ಈ ವಿಷಯವನ್ನು ಬೇರೊಂದು ಪೀಠಕ್ಕೆ ವರ್ಗಾಯಿಲಾಗುವುದು, ಎಂದು ವಿಚಾರಣೆ ಆರಂಭದಲ್ಲೇ ಇಂದಿರಾ ಬ್ಯಾನರ್ಜಿ ಹೇಳಿದರು.
ಇಂದಿರಾ ಬ್ಯಾನರ್ಜಿ ಅವರು ಇಲ್ಲದ ಮತ್ತೊಂದು ಪೀಠಕ್ಕೆ ಈ ಅರ್ಜಿಯನ್ನು ವರ್ಗಾಯಿಸುವಂತೆ ನ್ಯಾಯಮೂರ್ತಿ ಎಂ.ಆರ್ ಶಾ ಅವರನ್ನೂ ಒಳಗೊಂಡ ರಜೆ ಕಾಲದ ಪೀಠವು ತಿಳಿಸಿತು.
ಬಿಸ್ವಜಿತ್ ಸರ್ಕಾರ್ ಎಂಬುವವರು ಸಲ್ಲಿಸಿದ ಈ ಅರ್ಜಿಯನ್ನು ಮೇ 18 ರಂದು ಊರ್ಜಿತಗೊಳಿಸಿದ್ದ ನ್ಯಾಯಾಲಯ ವಿಚಾರಣೆಗೆ ಸಮ್ಮತಿಸಿತ್ತು. ಈ ವಿಚಾರವಾಗಿ ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರದಿಂದ ಪ್ರತಿಕ್ರಿಯೆ ಕೋರಲಾಗಿತ್ತು. ಬಿಸ್ವಜಿತ್ ಅವರ ಅಣ್ಣ ಚುನಾವಣೋತ್ತರ ಗಲಭೆಯಲ್ಲಿ ಕೊಲೆಯಾಗಿದ್ದರು. ಬಿಸ್ವಜಿತ್ ಅವರ ಜೊತೆಗೆ ಸ್ವರ್ಣಲತಾ ಅಧಿಕಾರಿ ಎಂಬುವವರೂ ಅರ್ಜಿ ಸಲ್ಲಿಸಿದ್ದಾರೆ. ಅವರ ಪತಿಯೂ ಮತದಾನ ಸಂಬಂಧಿತ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟಿದ್ದರು ಎನ್ನಲಾಗಿದೆ.
ಇದು ಅತ್ಯಂತ ಗಂಭೀರ ಪ್ರಕರಣವಾಗಿದೆ. ವಿಧಾನಸಭೆ ಚುನಾವಣೆ ಮತ ಎಣಿಕೆ ದಿನದಂದು ನಡೆದ ಈ ಕೊಲೆಗಳ ವಿಚಾರವಾಗಿ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೋರ್ಟ್ ಮೇಲ್ವಿಚಾರಣೆಯೊಂದಿಗೆ ಪ್ರಕರಣವನ್ನು ಸಿಬಿಐ ಅಥವಾ ಎಸ್ಐಟಿಗೆ ವಹಿಸಬೇಕು ಎಂದು ಅವರು ವಾದಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.