ಭಾನುವಾರ, ಸೆಪ್ಟೆಂಬರ್ 20, 2020
21 °C
ಆದಾಯ ಮೀರಿ ಆಸ್ತಿ ಗಳಿಕೆ: ಹೈಕೋರ್ಟ್‌ ಆದೇಶ ಪ್ರಶ್ನಿಸಿ ನಿವೃತ್ತ ಐಎಎಸ್‌ ಅಧಿಕಾರಿ ಪಾಷಾ ಮೇಲ್ಮನವಿ

ರಾಜ್ಯ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿ ರಾಜ್ಯ ಹೈಕೋರ್ಟ್‌ ನೀಡಿರುವ ಆದೇಶದ ಸಿಂಧುತ್ವ ಪ್ರಶ್ನಿಸಿ ನಿವೃತ್ತ ಐಎಎಸ್‌ ಅಧಿಕಾರಿ ಸೈಯದ್‌ ಜಮೀರ್‌ ಪಾಷಾ ಸಲ್ಲಿಸಿರುವ ಮೇಲ್ಮನವಿ ಕುರಿತಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ.

ನ್ಯಾಯಮೂರ್ತಿಗಳಾದ ಯು.ಯು.ಲಲಿತ್‌ ಹಾಗೂ ವಿನೀತ್‌ ಸರನ್‌ ಅವರಿರುವ ಪೀಠ, ಪಾಷಾ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿತು.

ಸೇವೆಯಿಂದ ನಿವೃತ್ತರಾಗುವುದಕ್ಕೂ ಒಂಬತ್ತು ದಿನ ಮುಂಚೆ, 2012ರ ಜೂನ್‌ 21ರಂದು, ಲೋಕಾಯುಕ್ತ ಪೊಲೀಸರು ಪಾಷಾ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ವಿವಿಧೆಡೆ ದಾಳಿ ನಡೆಸಿದ್ದ ಅಧಿಕಾರಿಗಳು ಪಾಷಾ ಅವರು ಘೋಷಿತ ಆದಾಯಕ್ಕಿಂತ ಶೇ 272ರಷ್ಟು ಅಧಿಕ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದರು.

2018ರ ಮೇ 29ರಂದು ಪಾಷಾ ಅವರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ್ದ ಲೋಕಾಯುಕ್ತ ಪೊಲೀಸರು, ಆದಾಯ ಮೀರಿ ಗಳಿಸಿದ ಆಸ್ತಿ ಪ್ರಮಾಣ ಶೇ 13.4 ಎಂದು ಉಲ್ಲೇಖಿಸಿದ್ದರು.

ಪಾಷಾ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ದೇವದತ್ತ ಕಾಮತ್‌ ಹಾಗೂ ನಿಶಾಂತ್‌ ಪಾಟೀಲ, ‘ಭ್ರಷ್ಟಾಚಾರ ನಿಯಂತ್ರಣ (ತಿದ್ದುಪಡಿ) ಕಾಯ್ದೆ 2018ರ ಜುಲೈ 26ರಂದು ಜಾರಿಯಾಯಿತು. ಅದರಂತೆ, ಇಂಥ ಪ್ರಕರಣಗಳಲ್ಲಿ, ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮತಿ ದೊರೆತ ನಂತರವಷ್ಟೇ ವಿಚಾರಣೆ ನಡೆಸಲು ಅವಕಾಶ ಇದೆ. ಇದನ್ನು ಹೈಕೋರ್ಟ್‌ ಪರಿಗಣಿಸಿಲ್ಲ’ ಎಂದು ವಾದಿಸಿದರು.

‘ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ಅಧೀನ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ. ಅನುಮತಿ ಇಲ್ಲದೇ ತಮ್ಮ ವಿರುದ್ಧ ವಿಚಾರಣೆ ನಡೆಸಲಾಗಿರುವ ಕಾರಣ ಈ ಪ್ರಕರಣವನ್ನು ಕೈಬಿಡಬೇಕು ಎಂಬ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿ ಹೈಕೋರ್ಟ್‌ ಹೊರಡಿಸಿರುವ ಆದೇಶ ಸಮರ್ಥನೀಯವಲ್ಲ’ ಎಂದೂ ವಕೀಲರು ವಾದಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು