ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಿಗಾಗಿ ನೆಲಸಮ ಬೇಡ: ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್

Last Updated 16 ಜೂನ್ 2022, 20:30 IST
ಅಕ್ಷರ ಗಾತ್ರ

ನವದೆಹಲಿ: ‘ಒತ್ತುವರಿ ತೆರವು ಕಾರ್ಯಾಚರಣೆಗಳು ಕಾನೂನುಬದ್ಧವಾಗಿರಬೇಕು. ಬದಲಿಗೆ ಪ್ರತೀಕಾರ ಕ್ರಮವಾಗಿರಬಾರದು’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ‘ಪ್ರಯಾಗರಾಜ್‌ ಮತ್ತು ಕಾನ್ಪುರದಲ್ಲಿ ಈಚೆಗೆ ನಡೆಸಿದ ಕಟ್ಟಡ ನೆಲಸಮ ಕಾರ್ಯಾಚರಣೆಗಳು ಕಾನೂನುಬಾಹಿರ ಎಂಬ ಆರೋಪದ ಬಗ್ಗೆ ಮೂರು ದಿನಗಳಲ್ಲಿ ಪ್ರತಿಕ್ರಿಯೆ ನೀಡಿ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

ಪ್ರಯಾಗರಾಜ್‌ ಮತ್ತು ಕಾನ್ಪುರದಲ್ಲಿನ ಕಟ್ಟಡ ನೆಲಸಮ ಕಾರ್ಯಾಚರಣೆಗಳು ಕಾನೂನುಬಾಹಿರ. ಅವುಗಳಿಗೆ ತಡೆ ನೀಡಿ ಎಂದು ಜಮೀಯತ್‌ ಉಲೇಮಾ ಇ ಹಿಂದ್‌ ಸಂಘಟನೆಯು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿಕ್ರಮನಾಥ್ ಅವರಿದ್ದ ಪೀಠವು ಹೀಗೆ ಹೇಳಿದೆ. ಜತೆಗೆ, ‘ನೆಲಸಮ ಕಾರ್ಯಾಚರಣೆಗಳಿಗೆ ತಡೆ ನೀಡಲು ಸಾಧ್ಯವಿಲ್ಲ. ಆದರೆ, ಯಾವುದೇ ಅಹಿತಕರ ಘಟನೆಗಳು ನಡೆಯಬಾರದು’ ಎಂದು ಪೀಠವು ಹೇಳಿದೆ.

‘ನೋಟಿಸ್‌ ನೀಡದೇ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ನೋಟಿಸ್‌ ನೀಡಿ 15 ದಿನ ಕಾಲಾವಕಾಶ ನೀಡಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಇದನ್ನು ಸಂಬಂಧಿತ ಪ್ರಾಧಿಕಾರಗಳು ಗಾಳಿಗೆ ತೂರಿವೆ’ ಎಂದು ಅರ್ಜಿದಾರರ ಪರ ವಕೀಲರು ಆರೋಪಿಸಿದರು.

ಉತ್ತರ ಪ್ರದೇಶ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಹಾಜರಿದ್ದರು.

‘ಕಷ್ಟದಲ್ಲಿರುವವರಿಗೆ ರಕ್ಷಣೆ ಬೇಕು’

‘ನಾವೂ ಸಮಾಜದ ಭಾಗವಾಗಿದ್ದೇವೆ. ಸಮಾಜದಲ್ಲಿ ಏನಾಗುತ್ತಿದೆ ಎಂಬುದನ್ನು ನಾವೂ ನೋಡುತ್ತಿದ್ದೇವೆ. ಎಲ್ಲವೂ ನ್ಯಾಯಸಮ್ಮತವಾಗಿ ಇರಬೇಕು’ ಎಂದು ಪೀಠವು ಹೇಳಿದೆ.

‘ತೊಂದರೆಗೆ ಒಳಗಾದವರ ಭದ್ರತೆಯನ್ನು ನಾವು ದೃಢಪಡಿಸಬೇಕಲ್ಲವೇ? ಅದು ನಮ್ಮ ಕರ್ತವ್ಯ. ಅವರೂ ನಮ್ಮ ಸಮಾಜದ ಭಾಗ ಎಂಬುದರ ಬಗ್ಗೆ ನಮಗೆ ಸ್ಪಷ್ಟತೆಯಿರಬೇಕು. ಅಂತಿಮವಾಗಿ ಯಾರೋ ತೊಂದರೆಯಲ್ಲಿ ಇದ್ದಾರೆ ಎಂದರೆ, ಅದನ್ನು ಪರಿಹರಿಸಿಕೊಳ್ಳುವ ಅವಕಾಶ ಅವರಿಗೆ ಸಿಗಲೇಬೇಕು. ಈ ನ್ಯಾಯಾಲಯವು ಅವರ ರಕ್ಷಣೆಗೆ ಬರದೇ ಇದ್ದರೆ, ಅದು ಸರಿಯಲ್ಲ’ ಎಂದು ಪೀಠವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT