ಬುಧವಾರ, ಆಗಸ್ಟ್ 17, 2022
28 °C
ವೈವಾಹಿಕ ವಿವಾದ ಪ್ರಕರಣಗಳಲ್ಲಿ ಲಿಂಗ–ಧರ್ಮ ತಟಸ್ಥ ಆಧಾರ

ಎಲ್ಲರಿಗೂ ಏಕರೂಪದ ಜೀವನಾಂಶ; ಕೇಂದ್ರದಿಂದ ಪ್ರತಿಕ್ರಿಯೆ ಕೇಳಿದ 'ಸುಪ್ರೀಂ'

ಪಿಟಿಐ Updated:

ಅಕ್ಷರ ಗಾತ್ರ : | |

ಸುಪ್ರೀಂ ಕೋರ್ಟ್

ನವದೆಹಲಿ: ವೈವಾಹಿಕ ವಿವಾದ ಪ್ರಕರಣಗಳಲ್ಲಿ ಎಲ್ಲಾ ನಾಗರಿಕರಿಗೂ ಲಿಂಗ ಮತ್ತು ಧರ್ಮ ತಟಸ್ಥವಾಗಿ ಏಕರೂಪವಾಗಿ ನಿರ್ವಹಣೆ ಮತ್ತು ಜೀವನಾಂಶಗಳನ್ನು ನೀಡಬೇಕು ಎನ್ನುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೋರಿದೆ.

ಈ ಸಂಬಂಧ ಬಿಜೆಪಿ ನಾಯಕ ಹಾಗೂ ವಕೀಲರೂ ಆಗಿರುವ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್‌.ಎ.ಬೊಬಡೆ ಅವರ ನೇತೃತ್ವದ ನ್ಯಾಯಪೀಠವು ಕೇಂದ್ರ ಗೃಹ ಸಚಿವಾಲಯ, ಕಾನೂನು ಮತ್ತು ನ್ಯಾಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳಿಗೆ ನೋಟಿಸ್ ನೀಡಿದೆ.

ಹಿರಿಯ ವಕೀಲರಾದ ಮೀನಾಕ್ಷಿ ಅರೋರ ಅವರ ಮಾತುಗಳನ್ನು ಅಲಿಸಿದ ಬಳಿಕ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಹಾಗೂ ವಿ. ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠವು, ‘ನಾವು ಬಹಳ ಎಚ್ಚರಿಕೆಯಿಂದಲೇ ಈ ನೋಟಿಸ್ ಅನ್ನು ಜಾರಿ ಮಾಡುತ್ತಿದ್ದೇವೆ’ ಎಂದು ಹೇಳಿತು.

ನಿರ್ವಹಣೆ ಮತ್ತು ಜೀವನಾಂಶ ಕೋರಿ ಬರುವ ವೈವಾಹಿಕ ವಿವಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಧರ್ಮ, ಜಾತಿ, ಜನಾಂಗ, ಲಿಂಗ, ಜನ್ಮಸ್ಥಳದ ತಾರತಮ್ಯವಿಲ್ಲದೆ ಎಲ್ಲರಿಗೂ ಏಕರೂಪವಾಗಿರುವ ಸೂಕ್ತಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ವಕೀಲರಾದ ಅಶ್ವಿನಿ ಉಪಾಧ್ಯಾಯ ಅರ್ಜಿ ಸಲ್ಲಿಸಿದ್ದರು.

ಇಂಥ ಪ್ರಕರಣಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಮಹಿಳೆಯರ ಹೋಲಿಕೆಯನ್ನು ಕುರಿತು ನ್ಯಾಯಾಲಯ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೀನಾಕ್ಷಿ ಅರೋರ, ‘ಧರ್ಮವು ಲಿಂಗವನ್ನು ವಿಭಿನ್ನವಾಗಿ ಪರಿಗಣಿಸಬಹುದು. ಆದರೆ, ಸಂವಿಧಾನವು ಮಹಿಳೆಯರನ್ನು ವಿಭಿನ್ನವಾಗಿ ಪರಿಗಣಿಸಲು ಅನುಮತಿಸುವುದಿಲ್ಲ’ ಎಂದರು.

ಈ ಬಗ್ಗೆ ಇರುವ ಸಂವಿಧಾನದ ನಿಬಂಧನೆಗಳನ್ನು ಉಲ್ಲೇಖಿಸಿದ ಅರೋರ, ‘ಈ ವಿಷಯದ ಬಗ್ಗೆ ಸರ್ಕಾರ ವಿಶೇಷ ಶಾಸನವನ್ನು ಮಾಡಬಹುದು. ಧರ್ಮದಲ್ಲಿ ಆಚರಣೆ ಅನ್ನುವಂಥದ್ದು ಒಂದು ವಿಷಯ. ಆದರೆ, ಅದಕ್ಕೂ ಮಿಗಿಲಾಗಿ ನಾಗರಿಕರಿಗೆ ಸಂವಿಧಾನದತ್ತವಾದ ಮೂಲಭೂತ ಹಕ್ಕುಗಳಿವೆ. ಅವುಗಳನ್ನು ರಕ್ಷಿಸಬೇಕಾಗಿದೆ’ ಎಂದೂ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು