ಶುಕ್ರವಾರ, ಡಿಸೆಂಬರ್ 4, 2020
25 °C

ಮೌದ್ಗಿಲ್ ಸೋದರಿಯ ಮಕ್ಕಳ ಪಾಲನೆ: ಹೈಕೋರ್ಟ್‌ ಮಧ್ಯಸ್ಥಿಕೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಕ್ಕಳನ್ನು ಮರಳಿಸುವಂತೆ ಕೋರಿ ಹರಿಯಾಣದ ಗುರುಗ್ರಾಮ ಮೂಲದ ವ್ಯಕ್ತಿಯೊಬ್ಬರು ಸಲ್ಲಿಸಿರುವ ಹೇಬಿಯಸ್‌ ಕಾರ್ಪಸ್ ಅರ್ಜಿಗೆ ಸಂಬಂಧಿಸಿದ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಹೈಕೋರ್ಟ್‌ನ ಮಧ್ಯಸ್ಥಿಕೆ ಕೇಂದ್ರಕ್ಕೆ ಸೂಚಿಸಿದೆ.

ರಾಜ್ಯದ ಹಿರಿಯ ಐಎಎಸ್‌ ಅಧಿಕಾರಿ ಮನೀಶ್‌ ಮೌದ್ಗಿಲ್‌ ಅವರು ತನ್ನ ಮಕ್ಕಳನ್ನು ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡಿದ್ದಾರೆ ಎಂದು, ಅವರ ತಂಗಿಯ ಪತಿ ಸಚಿನ್ ಗೌರ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠ ಈ ಸೂಚನೆ ನೀಡಿದೆ.

‘ನನ್ನ ಪತ್ನಿಯ ಸೋದರ ಮನೀಶ್‌ ಮೌದ್ಗಿಲ್‌ ಹಾಗೂ ಅವರ ಹಿರಿಯ ಸೋದರಿ ಅನುಪಮ್ ವಿಕಾಸ್ ಅವರು ಮಕ್ಕಳನ್ನು ಅಕ್ರಮವಾಗಿ ತಮ್ಮ ವಶದಲ್ಲಿ ಇರಿಸಿಕೊಂಡಿದ್ದಾರೆ. ಮೌದ್ಗಿಲ್‌ ಅವರ ಪತ್ನಿ ಡಿ.ರೂಪಾ ಐಪಿಎಸ್‌ ಅಧಿಕಾರಿ ಆಗಿರುವುದರಿಂದ ಈ ಕುರಿತು ಎಷ್ಟೇ ದೂರು ನೀಡಿದರೂ ಕರ್ನಾಟಕದ ಪೊಲೀಸರು ಕ್ರಮ ಕೈಗೊಂಡಿಲ್ಲ’ ಎಂದು ಸಚಿನ್ ದೂರಿದ್ದಾರೆ.

ಬೆಂಗಳೂರಿನಲ್ಲಿರುವ ಹೈಕೋರ್ಟ್‌ನ ಮಧ್ಯಸ್ಥಿಕೆ ಕೇಂದ್ರದೆದುರು ಡಿಸೆಂಬರ್‌ 4ರಂದು ನಡೆಯಲಿರುವ ವಿಚಾರಣೆಗೆ ಹಾಜರಾಗುವಂತೆ ಪ್ರಕರಣಕ್ಕೆ ಸಂಬಂಧಿಸಿದ ಉಭಯ ಬಣದವರಿಗೂ ನಿರ್ದೇಶನ ನೀಡಲಾಗಿದೆ. ಪ್ರಕರಣದ ಸೌಹಾರ್ದಯುತ ಇತ್ಯರ್ಥಕ್ಕೆ ಯತ್ನಿಸಿ ವರದಿ ಸಲ್ಲಿಸುವಂತೆ ಕೇಂದ್ರಕ್ಕೂ ಸೂಚಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಮೌದ್ಗಿಲ್‌ ಅವರ ಸೋದರಿ ಪೂಜಾ ಅವರು ಪತಿಯ ಕಿರುಕುಳದಿಂದ ಮಾನಸಿಕವಾಗಿ ನೊಂದು ಇತ್ತೀಚೆಗಷ್ಟೇ ನಿಧನರಾಗಿದ್ದಾರೆ. ನಿರುದ್ಯೋಗಿಯೂ, ಮದ್ಯವ್ಯಸನಿಯೂ ಆಗಿರುವ ಸಚಿನ್‌ಗೆ ಮಕ್ಕಳ ಜವಾಬ್ದಾರಿ ವಹಿಸಲಾಗದು. ಮೌದ್ಗಿಲ್‌ ಅವರ ತಾಯಿಯ ಆರೈಕೆಯಲ್ಲಿರುವ ಚಿಕ್ಕಮಕ್ಕಳನ್ನು ಉತ್ತಮ ಶಾಲೆಗೆ ಸೇರಿಸಲಾಗಿದೆ ಎಂದು ವಕೀಲ ಚಿನ್ಮಯ್‌ ದೇಶಪಾಂಡೆ ನ್ಯಾಯಪೀಠಕ್ಕೆ ವಿವರಿಸಿದರು.

ಪತಿ ಕಿರುಕುಳ ನೀಡಿದ್ದರಿಂದಲೇ ಮಾನಸಿಕವಾಗಿ ನೊಂದು ಅನಾರೋಗ್ಯಕ್ಕೆ ಒಳಗಾಗಿದ್ದ ಪೂಜಾ, ಚಿಕಿತ್ಸೆಗೆ ಸ್ಪಂದಿಸದೆ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಅವರ ಮಕ್ಕಳ ಹೊಣೆಯನ್ನು ವಹಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದೂ ಅವರು ಹೇಳಿದರು.

‘ಕಳೆದ ಜೂನ್‌ 4ರಂದು ಪತ್ನಿ ಪೂಜಾ ಹಾಗೂ ಮಕ್ಕಳನ್ನು ಅವರ ಹಿರಿಯ ಸೋದರಿ ಅನುಪಮ್‌ ಅವರು ಬೆಂಗಳೂರಿಗೆ ಕರೆದೊಯ್ದಿದ್ದರು. ಆದರೆ, ಜೂನ್‌ 12ರಂದು ಇದ್ದಕ್ಕಿದ್ದಂತೆಯೇ ಪೂಜಾ ಸಾವಿಗೀಡಾದ ವಿಷಯ ತಿಳಿಸಲಾಯಿತು. ಅವರ ಅಂತ್ಯಕ್ರಿಯೆಗೆ ಪಾಲಕರೊಂದಿಗೆ ತೆರಳಿದಾಗ ವೈದ್ಯಕೀಯ ವರದಿಗಳನ್ನು ಮರೆಮಾಚಲಾಯಿತು’ ಎಂದು ಅರ್ಜಿಯಲ್ಲಿ ದೂರಿರುವ ಸಚಿನ್‌, ‘ತಾಯಿಯ ಸಾವಿನ ನಂತರ ಸಹಜವಾಗಿ ಅಪ್ರಾಪ್ತ ಮಕ್ಕಳು ತಂದೆಯೊಂದಿಗೆ ಇರಬೇಕು. ಆದರೆ, ಮಕ್ಕಳನ್ನು ನನ್ನ ಜೊತೆ ಕಳುಹಿಸದೆ ಅಕ್ರಮವಾಗಿ ಇರಿಸಿಕೊಳ್ಳಲಾಗಿದೆ’ ಎಂದು ಆರೋಪಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು