ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ದ್ವಾನಿ: ರೈಲ್ವೆ ಭೂಮಿ ಒತ್ತುವರಿ ತೆರವಿಗೆ ತಡೆ

ಉತ್ತರಾಖಂಡ ಹೈಕೋರ್ಟ್‌ ಅದೇಶಕ್ಕೆ ತಡೆಯಾಜ್ವೆ ನೀಡಿದ ಸುಪ್ರೀಂ ಕೋರ್ಟ್
Last Updated 5 ಜನವರಿ 2023, 12:28 IST
ಅಕ್ಷರ ಗಾತ್ರ

ನವದೆಹಲಿ: ಉತ್ತರಾಖಂಡದ ಹಲ್ದ್ವಾನಿಯ ಬನ್‌ಭೂಲ್‌ಪುರದಲ್ಲಿ ರೈಲ್ವೆ ಇಲಾಖೆಯ 29 ಎಕರೆ ಜಾಗದ ಒತ್ತುವರಿಯನ್ನು ತೆರವುಗೊಳಿಸುವಂತೆ ಉತ್ತರಾಖಂಡ ಹೈಕೋರ್ಟ್ ನೀಡಿದ ಆದೇಶಕ್ಕೆ ಗುರುವಾರ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ‘ಇದೊಂದು ಮಾನವೀಯ ವಿಷಯವಾಗಿದ್ದು, ರಾತ್ರೋರಾತ್ರಿ 50 ಸಾವಿರ ಜನರನ್ನು ಒಕ್ಕಲೆಬ್ಬಿಸಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಎ.ಎಸ್. ಓಕಾ ಅವರನ್ನೊಳಗೊಂಡ ನ್ಯಾಯಪೀಠವು, ‘ಈ ಸಮಸ್ಯೆಗೆ ಕಾರ್ಯಸಾಧುವಾದ ಪರಿಹಾರವನ್ನು ಕಂಡುಕೊಳ್ಳಬೇಕಿದೆ’ ಎಂದೂ ಸಲಹೆ ನೀಡಿದೆ.

ರೈಲ್ವೆಯ ಪ್ರಕಾರ, ಬನ್‌ಭೂಲ್‌ಪುರದಲ್ಲಿ 4,365 ಕುಟುಂಬಗಳು ಅತಿಕ್ರಮಣ ಮಾಡಿದ್ದು, ಸುಮಾರು 50 ಸಾವಿರ ಜನರು ವಾಸವಾಗಿದ್ದಾರೆ. ಅವರಲ್ಲಿ ಬಹುತೇಕರು ಮುಸ್ಲಿಂ ಸಮುದಾಯದವರಿದ್ದಾರೆ.

ಅತಿಕ್ರಮಣ ತೆರವಿಗೆ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ, ಸಲ್ಲಿಸಲಾಗಿರುವ ಅರ್ಜಿಗಳಿಗೆ ಪ್ರತಿಕ್ರಿಯೆ ನೀಡುವಂತೆ ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

‘ಉತ್ತರಾಖಂಡ ಜಾರಿಗೊಳಿಸಿರುವ ನಿರ್ದೇಶನಗಳಿಗೆ ತಡೆ ಇರುತ್ತದೆ’ ಎಂದು ಹೇಳಿದ ನ್ಯಾಯಪೀಠವು, ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರುವರಿ 7ಕ್ಕೆ ಮುಂದೂಡಲಾಗಿದೆ’ ಎಂದು ಹೇಳಿದೆ.

‘ಭೂಮಿಯ ಯಾವುದೇ ಹಕ್ಕುಗಳನ್ನು ಹೊಂದಿರದ ಜನರನ್ನು ಪ್ರತ್ಯೇಕಿಸಲು ಅಥವಾ ಒಕ್ಕಲೆಬ್ಬಿಸಲು ಕಾರ್ಯಸಾಧ್ಯವಾದ ವ್ಯವಸ್ಥೆಯು ಅವಶ್ಯಕ ಎಂಬುದನ್ನು ನಾವು ನಂಬುತ್ತೇವೆ. ಇದೊಂದು ಮಾನವೀಯ ವಿಷಯವಾಗಿದ್ದು, ಈ ನಿಟ್ಟಿನಲ್ಲಿ ರೈಲ್ವೆಯು ಪರಿಹಾರವನ್ನು ಕಂಡುಕೊಳ್ಳುವಾಗಲೇ ಈಗಾಗಲೇ ಅಸ್ತಿತ್ವದಲ್ಲಿರುವ ಪುನರ್ವಸತಿ ಯೋಜನೆಗಳನ್ನು ಗುರುತಿಸಬೇಕು ಹಾಗೂ ಪ್ರಾಯೋಗಿಕ ಮಾರ್ಗವನ್ನು ಕಂಡುಕೊಳ್ಳಬೇಕು’ ಎಂದೂ ಸುಪ್ರೀಂ ಕೋರ್ಟ್ ತಿಳಿಸಿದೆ.

ರೈಲ್ವೆಯ ಅಗತ್ಯಗಳನ್ನು ಮನವರಿಕೆ ಮಾಡಿಕೊಟ್ಟ, ರೈಲ್ವೆಯ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರ ವಾದವನ್ನು ಗಮನಿಸಿದ ನ್ಯಾಯಪೀಠವು, ‘ಈ ಭೂಮಿಯನ್ನು ಸಂಪೂರ್ಣವಾಗಿ ರೈಲ್ವೆಗೆ ವಹಿಸಬೇಕೆ ಅಥವಾ ರಾಜ್ಯವು ಅದರಲ್ಲಿ ಒಂದು ಭಾಗವನ್ನು ಪಡೆಯಲಿದೆಯೇ ಎಂಬ ಬಗ್ಗೆ ರಾಜ್ಯ ಸರ್ಕಾರದ ನಿಲವನ್ನು ಪರಿಗಣಿಸಬೇಕಾಗಿರುವುದು ಪ್ರಮುಖ ಅಂಶವಾಗಿದೆ’ ಎಂದೂ ಹೇಳಿದೆ.

‘ಸುಪ್ರೀಂ’ ತೀರ್ಪು ಸ್ವಾಗತಿಸಿದ ನಿವಾಸಿಗಳು

ಉತ್ತರಾಖಂಡ ಹೈಕೋರ್ಟ್ ಆದೇಶದಂತೆ ಒತ್ತುವರಿ ತೆರವಿನ ಭೀತಿಯನ್ನು ಎದುರಿಸುತ್ತಿರುವ ಹಲ್ದ್ವಾನಿಯ ಬನ್‌ಭೂಲಾಪುರದ ನಿವಾಸಿಗಳು ಗುರುವಾರ ಸುಪ್ರೀಂ ಕೋರ್ಟ್ ನೀಡಿದ ತಡೆಯಾಜ್ಞೆಯನ್ನು ಸ್ವಾಗತಿಸಿದ್ದಾರೆ.

‘ನಮ್ಮ ಬಳಿ ಸೂಕ್ತ ದಾಖಲೆಗಳಿವೆ. ನಾವಿಲ್ಲಿ 100 ವರ್ಷಗಳಿಂದ ವಾಸವಾಗಿದ್ದೇವೆ’ಎಂದು ಅಲ್ಲಿನ ನಿವಾಸಿಯೊಬ್ಬರು ತಿಳಿಸಿದರು.

ಸುಪ್ರೀಂ ಕೋರ್ಟ್ ತಡೆಯಾಜ್ಞೆಗೂ ಮುನ್ನ, ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಇಲ್ಲಿನ ಮಸೀದಿಯ ಬಳಿ ಪ್ರತಿಭಟನೆ ನಡೆಸಿ, ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT