ನವದೆಹಲಿ (ಪಿಟಿಐ): ಪೌರತ್ವ (ತಿದ್ದುಪಡಿ) ಕಾಯ್ದೆಯ (ಸಿಎಎ) ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವಸಾರ್ವಜನಿಕ ಹಿತಾಸಕ್ತಿ ಅರ್ಜಿಗಳೂ ಸೇರಿ ಸುಮಾರು 232 ಅರ್ಜಿಗಳ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಮತ್ತು ಬೇಲಾ ಎಂ. ತ್ರಿವೇದಿ ಅವರಿರುವ ತ್ರಿಸದಸ್ಯ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಲಿದೆ.
ಈ ಅರ್ಜಿಗಳ ಕುರಿತು ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರಕ್ಕೆ 4 ವಾರಗಳ ಸಮಯಾವಕಾಶ ನೀಡಿರುವ ಸುಪ್ರೀಂ ಕೋರ್ಟ್, ಈ ಕಾಯ್ದೆ ಪ್ರಶ್ನಿಸಿ ಸಲ್ಲಿಕೆ ಆಗಿರುವ ಅರ್ಜಿಗಳ ವಿಚಾರಣೆ ನಡೆಸದಂತೆ ಹೈಕೋರ್ಟ್‌ಗಳನ್ನು ತಡೆದಿದೆ.
ಈ ಕಾಯ್ದೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ಮೂಲಭೂತ ಹಕ್ಕಾದ ಸಮಾನತೆಯ ಹಕ್ಕನ್ನು ಈ ಕಾಯ್ದೆಯು ಉಲ್ಲಂಘಿಸುತ್ತದೆ ಎಂದು ಹೇಳಿತ್ತು. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಆರ್‌ಜೆಡಿ ನಾಯಕ ಮನೋಜ್ ಝಾ, ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಮತ್ತು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಮುಂತಾದವರು ಈ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
ಈ ತಿದ್ದುಪಡಿ ಮಸೂದೆಯನ್ನು 2019ರಲ್ಲಿ ಆಂಗೀಕರಿಸಲಾಗಿತ್ತು. ನೆರೆ ರಾಷ್ಟ್ರಗಳಿಂದ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಂಯೇತರ ಧರ್ಮೀಯರಿಗೆ ಭಾರತರ ಪೌರತ್ವ ನೀಡುವ ಕಾಯ್ದೆ ಇದಾಗಿದೆ. ಈ ಕಾಯ್ದೆಯಲ್ಲಿ ಮುಸ್ಲಿಮರನ್ನು ಕೈಬಿಟ್ಟ ಕಾರಣ ವಿರೋಧ ಪಕ್ಷಗಳಿಂದ ಮತ್ತು ಮುಸ್ಲಿಂ ಸಮುದಾಯದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.
ಕೇಂದ್ರ ಸರ್ಕಾರದ ವಾದ ಆಲಿಸುವವರೆಗೆ ಸಿಎಎ ಗೆ ತಡೆ ನೀಡಲಾಗುವುದಿಲ್ಲ ಎಂದು 2020ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.
ಹಲವು ಅರ್ಜಿಗಳ ವಿಚಾರಣೆ: ದೇಶದ ಎಲ್ಲಾ ಜಿಲ್ಲೆಗಳಲ್ಲೂ ವಿಶೇಷ ಭ್ರಷ್ಟಾಚಾರ ವಿರೋಧಿ ಕೋರ್ಟ್ ಸ್ಥಾಪಿಸುವಂತೆ ಕೋರಿ ಸಲ್ಲಿಸಲಾಗಿರುವ ಪಿಐಎಲ್‌ನ ವಿಚಾರಣೆಯನ್ನೂ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ಸೋಮವಾರವೇ ಕೈಗೆತ್ತಿಕೊಳ್ಳಲಿದೆ. ಕಾನೂನು ಆಯೋಗವನ್ನು ಶಾಸನಬದ್ಧಗೊಳಿಸಲು ಕೋರಿ ಸಲ್ಲಿಸಲಾಗಿರುವ ಪಿಐಎಲ್ ಮತ್ತು ಇವಿಎಂಗಳ ಮೇಲೆ ಪಕ್ಷದ ಚಿಹ್ನೆ ಬದಲು ಅಭ್ಯರ್ಥಿಯ ವಿದ್ಯಾರ್ಹತೆ, ವಯಸ್ಸನ್ನು ನಮೂದಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನೂ ಸೋಮವಾರವೇ ಸುಪ್ರೀಂ ಕೋರ್ಟ್ ನಡೆಸಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.