ಬುಧವಾರ, ಸೆಪ್ಟೆಂಬರ್ 29, 2021
20 °C
ನ್ಯಾಯಾಂಗ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ

ಪೆಗಾಸಸ್‌: ಪತ್ರಕರ್ತರ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪೆಗಾಸಸ್ ಗೂಢಚರ್ಯೆಯನ್ನು ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಹಿರಿಯ ಪತ್ರಕರ್ತರಾದ ಎನ್‌.ರಾಮ್ ಮತ್ತು ಶಶಿ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಂದಿನ ವಾರ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ಶುಕ್ರವಾರ ಒಪ್ಪಿಕೊಂಡಿದೆ.

ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಅರ್ಜಿಯ ವಿಚಾರವನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಪೀಠದ ಮುಂದೆ ಶುಕ್ರವಾರ ಮಂಡಿಸಿದರು.

‘ನಾಗರಿಕರು, ರಾಜಕಾರಣಿಗಳು, ವಿರೋಧ ಪಕ್ಷಗಳ ನಾಯಕರು, ಪತ್ರಕರ್ತರು ಮತ್ತು ನ್ಯಾಯಾಲಯದ ಸಿಬ್ಬಂದಿಯನ್ನು ಗೂಢಚರ್ಯೆಗೆ ಗುರಿ ಮಾಡಲಾಗಿದೆ. ಈ ವಿಚಾರ ದೇಶ ದಾದ್ಯಂತ, ವಿಶ್ವದಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಹೀಗಾಗಿ ಈ ಅರ್ಜಿ
ಯನ್ನು ತಕ್ಷಣವೇ ವಿಚಾರಣೆಗೆ ಎತ್ತಿಕೊಳ್ಳಬೇಕು’ ಎಂದು ಪ್ರತಿಪಾದಿಸಿದ್ದರು.

‘ಈ ಅರ್ಜಿಯನ್ನು ತುರ್ತು ವಿಚಾರಣೆ ಕೋರಿಕೆ ಪಟ್ಟಿಗೆ ಸೇರಿಸಲು ನ್ಯಾಯಾಲಯದ ಸಿಬ್ಬಂದಿ ಸಿದ್ಧರಿರಲಿಲ್ಲ’ ಎಂದು ಮತ್ತೊಬ್ಬ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಪೀಠದ ಮುಂದೆ ಹೇಳಿದರು. 

ಅರ್ಜಿದಾರರ ಪರ ವಕೀಲರ ಪ್ರತಿಪಾದನೆಯನ್ನು ಕೇಳಿದ ಪೀಠವು, ‘ಮುಂದಿನ ವಾರ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುತ್ತೇವೆ’ ಎಂದು ಹೇಳಿತು.

ಸಿಪಿಎಂ ರಾಜ್ಯಸಭಾ ಸದಸ್ಯ ಜಾನ್ ಬ್ರಿಟಾಸ್ ಅವರು ಸುಪ್ರೀಂ ಕೋರ್ಟ್‌ಗೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿಯು ಇನ್ನಷ್ಟೇ ಪೀಠದ ಮುಂದೆ ಬರಬೇಕಿದೆ.

ಇಸ್ರೇಲ್‌ನಲ್ಲಿ ತನಿಖೆ ಆರಂಭ (ಪಿಟಿಐ ವರದಿ): ಪೆಗಾಸಸ್ ಕುತಂತ್ರಾಂಶವನ್ನು ಅಭಿವೃದ್ಧಿಪಡಿಸಿ, ಮಾರಾಟ ಮಾಡಿರುವ ಎನ್‌ಎಸ್‌ಒ ಗ್ರೂಪ್‌ ಕಂಪನಿಯ ವಿರುದ್ಧ ಆದೇಶಿಸಲಾಗಿದ್ದ ತನಿಖೆಗೆ ಇಸ್ರೇಲ್‌ನ ತನಿಖಾ ಸಂಸ್ಥೆಗಳು ಶುಕ್ರವಾರ ಚಾಲನೆ ನೀಡಿವೆ.

‘ಗೂಢಚರ್ಯೆ ತಂತ್ರಾಂಶ ಮಾರಾಟಕ್ಕೆ ನೀಡಲಾಗಿದ್ದ ಅನುಮತಿ ಮತ್ತು ಸೂಚಿಸಲಾಗಿದ್ದ ಷರತ್ತುಗಳನ್ನು ಎನ್‌ಎಸ್‌ಒ ಗ್ರೂಪ್‌ ಉಲ್ಲಂಘಿಸಿದೆಯೇ ಎಂಬುದನ್ನು ಶುಕ್ರವಾರ ಪರಿಶೀಲಿಸಲಾಗಿದೆ. ಇದಕ್ಕಾಗಿ ಎನ್‌ಎಸ್‌ಒ ಗ್ರೂಪ್‌ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಲಾಗಿದೆ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಹೆಚ್ಚಿನ ವಿವರ ನೀಡಿಲ್ಲ.

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ: ಇದೇ ಬುಧವಾರ ನಡೆಯಬೇಕಿದ್ದ ಮಾಹಿತಿ ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿ ಸಭೆಗೆ ಹಾಜರಾಗಲು ನಿರಾಕರಿಸಿದ ಸರ್ಕಾರದ ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಸಮಿತಿಯ ಅಧ್ಯಕ್ಷ ಶಶಿ ತರೂರ್ ಅವರು ಲೋಕಸಭೆಯ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಅವರನ್ನು ಒತ್ತಾಯಿಸಿ ಪತ್ರ ಬರೆದಿದ್ದಾರೆ. ‘28ರಂದು (ಬುಧವಾರ) ಸಭೆಗೆ ಹಾಜರಾಗುವಂತೆ ಗೃಹ ಸಚಿವಾಲಯ, ದೂರಸಂಪರ್ಕ ಸಚಿವಾಲಯ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿಗಳಿಗೆ ಜುಲೈ 20ರಂದೇ ನೋಟಿಸ್ ನೀಡಲಾಗಿತ್ತು. ಸಭೆಗೆ ಹಾಜರಾಗಲು ಮೂರೂ ಸಚಿವಾಲಯಗಳ ಕಾರ್ಯದರ್ಶಿಗಳು ಒಪ್ಪಿಗೆ ನೀಡಿದ್ದರು. ಆದರೆ 28ರ ಮಧ್ಯಾಹ್ನ 2.30ರ ನಂತರ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಇ-ಮೇಲ್ ಮಾಡಿದ್ದಾರೆ. ಇದು ಸಂಸತ್ ನಿಂದನೆಗೆ ಅರ್ಹವಾದ ನಡವಳಿಕೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ’ ಎಂದು ತರೂರ್ ಪತ್ರದಲ್ಲಿ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು