ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಬೈರ್ ವಿರುದ್ಧ ತ್ವರಿತ ಕ್ರಮ ಸಲ್ಲ: ‘ಸುಪ್ರೀಂ’ ನಿರ್ದೇಶನ

20ಕ್ಕೆ ಅರ್ಜಿ ವಿಚಾರಣೆ * 5 ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಬೇಡ
Last Updated 18 ಜುಲೈ 2022, 16:00 IST
ಅಕ್ಷರ ಗಾತ್ರ

ನವದೆಹಲಿ:ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರ ವಿರುದ್ಧ ದಾಖಲಾಗಿರುವ ಐದು ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಬುಧವಾರದ ತನಕ (ಜುಲೈ 20) ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಉತ್ತರಪ್ರದೇಶದ ಪೊಲೀಸರಿಗೆ ಸೋಮವಾರ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎ.ಎಸ್. ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠವು, ‘ಒಂದು ಪ್ರಕರಣದಲ್ಲಿ ಜಾಮೀನು ಪಡೆದ ಬೆನ್ನಲ್ಲೇ ಮತ್ತೊಂದು ಪ್ರಕರಣದಲ್ಲಿ ಜುಬೈರ್ ಅವರನ್ನು ಬಂಧಿಸಲಾಗುತ್ತಿದೆ. ಎಲ್ಲ ಎಫ್ಐಆರ್‌ಗಳು ಒಂದೇ ಗುರಿಯನ್ನು ಹೊಂದಿರುವಂತೆ ತೋರುತ್ತದೆ. ಇದೊಂದು ವಿಷವರ್ತುಲದಂತೆ ಗೋಚರಿಸುತ್ತಿದೆ’ ಎಂದೂ ಹೇಳಿದೆ.

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಜುಬೈರ್ ಅವರು ಅರ್ಜಿ ಸಲ್ಲಿಸಿದ್ದು, ಅವರ ಪರ ವಕೀಲೆ ವೃಂದಾ ಗ್ರೋವರ್ ಅವರ ಮನವಿಯ ಮೇರೆಗೆ ತುರ್ತಾಗಿ ಅರ್ಜಿಯನ್ನು ನ್ಯಾಯಪೀಠವು ಕೈಗೆತ್ತಿಕೊಂಡಿತು.

ತಮ್ಮ ಅರ್ಜಿದಾರರನ್ನು ಒಂದು ಪ್ರಕರಣದಲ್ಲಿ ಜಾಮೀನು ನೀಡುತ್ತಿದ್ದಂತೆಯೇ ಮತ್ತೊಂದು ಪ್ರಕರಣದಲ್ಲಿ ಬಂಧಿಸಲಾಗುತ್ತಿದೆ. ಇದನ್ನು ಕೊನೆಗೊಳಿಸಬೇಕು. ಇದು ಕಾನೂನು ಪ್ರಕ್ರಿಯೆಯ ದುರಪಯೋಗವಾಗಿದೆ ಎಂದು ವೃಂದಾ ಅವರು ಮನವಿ ಮಾಡಿದರು.

ಬಳಿಕ ನ್ಯಾಯಪೀಠವು ಜುಲೈ 20ರಂದು ಜುಬೈರ್ ಅವರ ಪ್ರಕರಣವನ್ನು ವಿಚಾರಣೆಗೆ ಕೈಗೊಳ್ಳಲು ಸಂಬಂಧಿಸಿದಂತೆ ಕೋರ್ಟ್ ರಿಜಿಸ್ಟ್ರಿಗೆ ಪಟ್ಟಿ ಮಾಡಲು ಸೂಚನೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT