ಭಾನುವಾರ, ಅಕ್ಟೋಬರ್ 24, 2021
28 °C

ಪೆಗಾಸಸ್ ತನಿಖೆ: ಮುಂದಿನ ವಾರ ಆದೇಶ ಪ್ರಕಟಿಸುವುದಾಗಿ ಹೇಳಿದ ಸುಪ್ರೀಂ ಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿರೋಧ ಪಕ್ಷಗಳ ಮುಖಂಡರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಮುಂತಾದವರ ಮೇಲೆ ಇಸ್ರೇಲ್‌ನ ಕುತಂತ್ರಾಂಶ ಪೆಗಾಸಸ್‌ ಬಳಸಿ ಬೇಹುಗಾರಿಕೆ ನಡೆಸಲಾಗಿದೆ ಎಂಬ ಬಗ್ಗೆ ತನಿಖೆಗೆ ತಾಂತ್ರಿಕ ಸಮಿತಿ ನೇಮಿಸುವ ಸುಳಿವನ್ನು ಸುಪ್ರೀಂ ಕೋರ್ಟ್‌ ಗುರುವಾರ ನೀಡಿದೆ. 

ಸಮಿತಿಗೆ ನೇಮಿಸಲು ಉದ್ದೇಶಿಸಲಾಗಿದ್ದ ಕೆಲವು ಪರಿಣತರು ವೈಯಕ್ತಿಕ ಕಾರಣದಿಂದ ಹಿಂದೆ ಸರಿದ ಕಾರಣ ಈ ಬಗ್ಗೆ ಆದೇಶ ನೀಡುವುದು ವಿಳಂಬವಾಗಿದೆ. ಈ ವಾರದಲ್ಲಿಯೇ ಸಮಿತಿಯ ನೇಮಕಕ್ಕೆ ಉದ್ದೇಶಿಸಲಾಗಿತ್ತು. ಆದರೆ, ಮುಂದಿನ ವಾರ ಆದೇಶ ಹೊರಡಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರು ಹೇಳಿದ್ದಾರೆ.  

ತಾಂತ್ರಿಕ ಸಮಿತಿಯ ಸದಸ್ಯರ ಹೆಸರನ್ನು ಶೀಘ್ರದಲ್ಲಿಯೇ ಅಂತಿಮಗೊಳಿಸಲಾಗುವುದು ಎಂದೂ ರಮಣ ಅವರು ತಿಳಿಸಿದ್ದಾರೆ. 

ಪ್ರಕರಣದ ಅರ್ಜಿದಾರರೊಬ್ಬರ ಪರ ಹಿರಿಯ ವಕೀಲ ಸಿ.ಯು. ಸಿಂಗ್‌ ಅವರಿಗೆ ಈ ವಿಚಾರವನ್ನು ಮುಖ್ಯ ನ್ಯಾಯಮೂರ್ತಿ ರಮಣ ಅವರು ಮೌಖಿಕವಾಗಿ ತಿಳಿಸಿದರು. ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ಸಿಂಗ್‌ ಅವರು ನ್ಯಾಯಾಲಯದಲ್ಲಿ ಇದ್ದರು. 

ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಹಿಮಾ ಕೊಹ್ಲಿ ಅವರೂ ಇದ್ದ ‍ಪೀಠವು ಇದೇ 13ರಂದು ಆದೇಶವನ್ನು ಕಾಯ್ದಿರಿಸಿತ್ತು. ಬೇಹುಗಾರಿಕೆ ಪ್ರಕರಣದಲ್ಲಿ ಮಧ್ಯಂತರ ಆದೇಶ ನೀಡುವುದಾಗಿ ತಿಳಿಸಿತ್ತು. 

ಗೂಢಚರ್ಯೆಯ ಆರೋಪಗಳನ್ನು ಪರಿಶೀಲಿಸುವುದಕ್ಕಾಗಿ ಸ್ವತಂತ್ರ ಪರಿಣತರ ಸಮಿತಿ ರಚಿಸುವುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೇಳಿತ್ತು. ಪ್ರಕರಣಕ್ಕೆ ಸಂಬಂಧಿಸಿದ ವಿವರಗಳನ್ನು ಪರಿಣತರ ಸಮಿತಿಯ ಮುಂದೆ ಬಹಿರಂಗಪಡಿಸುವುದಾಗಿಯೂ ಭರವಸೆ ಕೊಟ್ಟಿತ್ತು. 

ಆದರೆ, ವಿವರವಾದ ಪ್ರಮಾಣಪತ್ರವನ್ನು ಕೋರ್ಟ್‌ಗೆ ಸ‌ಲ್ಲಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿತ್ತು. ಯಾವುದೇ ತಂತ್ರಾಂಶ ಬಳಸಿ ಗೂಢಚರ್ಯೆ ನಡೆಸಲಾಗಿದೆಯೇ ಇಲ್ಲವೇ ಎಂಬುದನ್ನು ಚರ್ಚಿಸಲು ಸಾಧ್ಯವಿಲ್ಲ. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರ. ಬೇಹುಗಾರಿಕೆಯ ವಿವರಗಳು ಬಹಿರಂಗವಾದರೆ ಭಯೋತ್ಪಾದನಾ ಸಂಘಟನೆಗಳು ಜಾಗೃತಗೊಂಡು, ತಂತ್ರಾಂಶಕ್ಕೆ ತಿರುಗೇಟು ನೀಡುವ ಪ್ರಯತ್ನ  ನಡೆಸಬಹುದು ಎಂದಿತ್ತು. 

ರಾಷ್ಟ್ರೀಯ ಭದ್ರತೆಗೆ ಧಕ್ಕೆ ಆಗುವಂತಹ ಯಾವುದೇ ವಿವರವನ್ನು ತಿಳಿದುಕೊಳ್ಳುವ ಇಚ್ಛೆ ಇಲ್ಲ. ಆದರೆ, ಸರ್ಕಾರವು ತನಿಖೆಗೆ ಆದೇಶಿಸಿದೆಯೇ ಎಂದು ತಿಳಿಯಲು ಬಯಸಿದ್ದಾಗಿ ಕೋರ್ಟ್‌ ಹೇಳಿತ್ತು. 

ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಎಂಬ ಕಂಪನಿಯು ತಯಾರಿಸುತ್ತಿರುವ ಪೆಗಾಸಸ್‌ ಎಂಬ ಬೇಹುಗಾರಿಕೆ ತಂತ್ರಾಂಶ ಬಳಸಿ ಜಗತ್ತಿನಾದ್ಯಂತ 50 ಸಾವಿರಕ್ಕೂ ಹೆಚ್ಚು ಜನರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ. ಅದರಲ್ಲಿ ಭಾರತದ ಹಲವರು ಕೂಡ ಇದ್ದಾರೆ ಎಂದು ಅಂತರ ರಾಷ್ಟ್ರೀಯ ತನಿಖಾ ಸಹಯೋಗವು ಜುಲೈ 18ರಂದು ವರದಿ ಮಾಡಿತ್ತು. 

ವಕೀಲ ಎಂ.ಎಲ್‌. ಶರ್ಮಾ, ಸಿಪಿಎಂ ಸಂಸದ ಜಾನ್‌ ಬ್ರಿಟ್ಟಾಸ್‌, ಪತ್ರಕರ್ತ ಎನ್‌. ರಾಮ್‌, ಭಾರತೀಯ ಸಂಪಾದಕರ ಕೂಟ ಮತ್ತು ಇತರರು ಪ್ರಕರಣದ ಬಗ್ಗೆ ತನಿಖೆಗೆ ಆದೇಶ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ನಿರ್ಧಾರ ಸ್ವಾಗತಿಸಿದ ಕಾಂಗ್ರೆಸ್‌
ಪರಿಣತರ ಸಮಿತಿ ರಚಿಸುವ ಕೋರ್ಟ್‌ನ ನಿರ್ಧಾರವು ಸರಿಯಾದ ದಿಕ್ಕಿನಲ್ಲಿ ಇರಿಸಿದ ಹೆಜ್ಜೆ. ಆದರೆ, ಸುಪ್ರೀಂ ಕೋರ್ಟ್‌ ಉಸ್ತುವಾರಿಯಲ್ಲಿ ಸಮಗ್ರ ಮತ್ತು ಸ್ವತಂತ್ರ ತನಿಖೆಯೇ ಪ್ರಕರಣಕ್ಕೆ ಇರುವ ಸರಳ ಪರಿಹಾರ ಎಂದು ಕಾಂಗ್ರೆಸ್‌ ಪಕ್ಷವು ಹೇಳಿದೆ. 

ಪ್ರಕರಣದ ತನಿಖೆಯು ರಾಷ್ಟ್ರೀಯ ಭದ್ರತೆಗೆ ಧಕ್ಕೆ ಆಗುವುದನ್ನು ತಪ್ಪಿಸುತ್ತದೆ. ಬೇಹುಗಾರಿಕೆಗೆ ಒಳಗಾಗಿದ್ದಾರೆ ಎಂಬ ಪಟ್ಟಿಯಲ್ಲಿ ಆಡಳಿತ ಪಕ್ಷದ ರಾಜಕೀಯ ಪ್ರತಿಸ್ಪರ್ಧಿಗಳು ಮಾತ್ರವಲ್ಲ, ಸಾಂವಿಧಾನಿಕ ಹುದ್ದೆಯಲ್ಲಿ ಇದ್ದವರೂ ಸೇರಿದ್ದಾರೆ ಎಂದು ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನಾತೆ ಹೇಳಿದ್ದಾರೆ. 

ಸಮಿತಿ ರಚನೆಯ ನಿರ್ಧಾರವನ್ನು ಕಾಂಗ್ರೆಸ್‌ ಸ್ವಾಗತಿಸುತ್ತದೆ. ಇದು ಸಮಗ್ರ ತನಿಖೆಯೊಂದರ ಭಾಗ ಎಂದು ಪಕ್ಷವು ಭಾವಿಸಿದೆ ಎಂದು ಅವರು ಹೇಳಿದ್ದಾರೆ.

***

ಪೆಗಾಸಸ್‌ ಪ್ರಕರಣವು ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವ ವಿಚಾರ ಅಲ್ಲ, ಅದು<br/>ರಾಷ್ಟ್ರೀಯ ಭದ್ರತೆ ಮತ್ತು ಖಾಸಗಿತನದ ಮೇಲೆ ಕೇಂದ್ರ ಸರ್ಕಾರದ ಪ್ರಹಾರ.
-ರಣದೀಪ್‌ ಸುರ್ಜೇವಾಲಾ, ಕಾಂಗ್ರೆಸ್‌ ವಕ್ತಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು