ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗಳ ವಿರುದ್ಧದ ವಿಚಾರಣೆಗೆಹೆಚ್ಚಿನ ಕೋರ್ಟ್ ಸ್ಥಾಪನೆಗೆ ಸುಪ್ರೀಂ ಸೂಚನೆ

Last Updated 5 ಅಕ್ಟೋಬರ್ 2020, 15:06 IST
ಅಕ್ಷರ ಗಾತ್ರ

ನವದೆಹಲಿ: ಸಂಸದರು ಮತ್ತು ಶಾಸಕರ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿಚಾರಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ಕೋರ್ಟ್‌ಗಳನ್ನು ಸ್ಥಾಪಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ನಿರ್ದೇಶಿಸಿತು.

‘ಸದ್ಯ, ಹಾಲಿ ಮತ್ತು ಮಾಜಿ ಸಂಸದರು ಮತ್ತು ಶಾಸಕರ ವಿರುದ್ಧ ಒಟ್ಟು 165 ಪ್ರಕರಣಗಳಿವೆ. ಇವುಗಳ ವಿಚಾರಣೆಗೆ ಒಂದೇ ವಿಶೇಷ ಕೋರ್ಟ್‌ ಸಾಲದು’ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿತು.

ಅಮಿಕಸ್ ಕ್ಯೂರಿ, ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಮತ್ತು ವಕೀಲ ಸ್ನೇಹಾ ಕಲಿಟ ಅವರು, ‘ಕಳೆದ ಎರಡು ವರ್ಷಗಳಲ್ಲಿ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳು ಹೆಚ್ಚಾಗಿವೆ. ಇವುಗಳ ಕಟ್ಟುನಿಟ್ಟಿನ ಮೇಲ್ವಿಚಾರಣೆ ಅಗತ್ಯವಾಗಿದೆ’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಹನ್ಸಾರಿಯಾ ಅವರು, ಸುರಕ್ಷಿತ ಮತ್ತು ಸುಭದ್ರವಾದ ಸಾಕ್ಷ್ಯ ಪರಿಶೀಲನಾ ಕೊಠಡಿ ಸ್ಥಾಪನೆ, ಪ್ರತಿ ಕೋರ್ಟ್‌ಗೂ ವಿಡಿಯೊ ಕಾನ್ಪರೆನ್ಸ್ ಸೌಲಭ್ಯ, ಪ್ರಕರಣಗಳ ಸ್ಥಿತಿ ತಿಳಿಸಲು ವಿಶೇಷ ವೆಬ್‌ಸೈಟ್ ರಚಿಸಬೇಕು ಎಂಬುದು ಸೇರಿದಂತೆ ವಿವಿಧ ಸಲಹೆಗಳನ್ನು ನೀಡಿದರು.

ಇತ್ತೀಚಿನ ವರದಿಯಂತೆ, ದೇಶದಾದ್ಯಂತ ಒಟ್ಟು ಪ್ರಕರಣಗಳ ಸಂಖ್ಯೆ 4,859ಕ್ಕೆ ಏರಿದೆ. ಮಾರ್ಚ್ 2020ರಲ್ಲಿ ಒಟ್ಟು 4442 ಪ್ರಕರಣಗಳಿದ್ದವು. ಆಯಾ ವ್ಯಾಪ್ತಿಯ ಕೋರ್ಟ್‌ಗಳಿಗೇ ಪ್ರಕರಣ ಒಪ್ಪಿಸಿ ಆದ್ಯತೆ ಮೇರೆಗೆ ವಿಚಾರಣೆ ನಡೆಸಲು ಸೂಚಿಸಬಹುದು ಎಂದೂ ಅವರು ತಿಳಿಸಿದರು.

‘ಪಶ್ಚಿಮ ಬಂಗಾಳದಲ್ಲಿಯೂ ಹೆಚ್ಚಿನ ವಿಶೇಷ ಕೋರ್ಟ್‌ಗಳ ಸ್ಥಾಪನೆಗೆ ಅಲ್ಲಿನ ಹೈಕೋರ್ಟ್‌ಗೆ ತಿಳಿಸಬಹುದು. ಕೇರಳದಲ್ಲಿ ಭಿನ್ನ ಸ್ಥಿತಿ ಇದೆ. ಸ್ಥಳೀಯ ಪೊಲೀಸರು ಆರೋಪಿ ಜನಪ್ರತಿನಿಧಿಗಳನ್ನು ಬಂಧಿಸಿ, ಹಾಜರುಪಡಿಸಲು ನಿರಾಕರಿಸುತ್ತಿದ್ದಾರೆ’ ಎಂದು ಅಮಿಕಸ್‌ ಕ್ಯೂರಿ ಸುಪ್ರೀಂ ಕೋರ್ಟ್ ಗಮನಕ್ಕೆ ತಂದರು.

ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಲಾಯಿತು. ಈ ಹಿಂದೆ ಸೆ.17ರಂದು ಹಾಲಿ ಸಂಸದರು, ಶಾಸಕರ ವಿರುದ್ಧದ ತನಿಖೆಗೆ ಕೆಳಹಂತದ ಕೋರ್ಟ್‌ಗಳು ತಡೆ ನೀಡಿರುವ ಪ್ರಕರಣಗಳ ಬಗ್ಗೆ ಎರಡು ತಿಂಗಳಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಎಲ್ಲ ರಾಜ್ಯಗಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್‌ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT