ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಿಗಳ ಪಿಂಚಣಿ ತಿದ್ದುಪಡಿ ಯೋಜನೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂಕೋರ್ಟ್

ಗರಿಷ್ಠ ಸಂಬಳ ₹15 ಸಾವಿರ ಮಿತಿ ರದ್ದು: ಪಿಂಚಣಿ ನಿಧಿ ವಂತಿಗೆಗೆ ಇಲ್ಲ ಮಿತಿ
Last Updated 5 ನವೆಂಬರ್ 2022, 5:40 IST
ಅಕ್ಷರ ಗಾತ್ರ

ನವದೆಹಲಿ: ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ)– 2014ರ ಯೋಜನೆಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಎತ್ತಿಹಿಡಿದಿದೆ. ಜತೆಗೆ, ಪಿಂಚಣಿ ನಿಧಿಗೆ ಸೇರಲು ನಿಗದಿಪಡಿಸಿದ್ದ ಗರಿಷ್ಠ ಮಾಸಿಕ ₹15 ಸಾವಿರ ವೇತನದ ಮಿತಿಯನ್ನೂ ರದ್ದುಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್‌, ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್‌ಮತ್ತುಸುಧಾಂಶು ಧುಲಿಯಾಅವರ ನೇತೃತ್ವದ ಪೀಠವು, ಈ ಯೋಜನೆಯಲ್ಲಿದ್ದ ಕೆಲವು ನಿಬಂಧನೆಗಳನ್ನು ಕೈಬಿಟ್ಟು, ಸೇವೆಯಲ್ಲಿರುವ ಉದ್ಯೋಗಿಗಳಿಗೆ ಯೋಜನೆಯ ಲಾಭ ಪಡೆಯಲು ಅವಕಾಶ ಕಲ್ಪಿಸಿದೆ. ಪೀಠದ ಈ ಆದೇಶದಿಂದ ಉದ್ಯೋಗದಾತರು ಮತ್ತು ಉದ್ಯೋಗಿಗಳು ಯಾವುದೇ ಮಿತಿಯಿಲ್ಲದೇ ಪಿಂಚಣಿ ನಿಧಿಗೆ ವಂತಿಗೆ ನೀಡುವ ಅವಕಾಶ ಲಭಿಸಿದೆ.

2014ರ ಈ ತಿದ್ದುಪಡಿ ಯೋಜನೆಯನ್ನು ರದ್ದುಪಡಿಸಿ ಕೇರಳ,ರಾಜಸ್ಥಾನ ಮತ್ತು ದೆಹಲಿಯಹೈಕೋರ್ಟ್‌ ತೀರ್ಪು ನೀಡಿದ್ದವು. ಇದನ್ನು ಪ್ರಶ್ನಿಸಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಮತ್ತು ಕೇಂದ್ರ ಸರ್ಕಾರ ವಿಶೇಷ ಮೇಲ್ಮನವಿ ಅರ್ಜಿಯನ್ನು (ಎಸ್‌ಎಲ್‌ಪಿ) ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದವು.

ಮೂರು ರಾಜ್ಯಗಳ ಹೈಕೋರ್ಟ್‌ಗಳು ನೀಡಿದ ತೀರ್ಪುಗಳನ್ನು ಪರಾಮರ್ಶಿಸಿದ ಪೀಠವು,ಈವರೆಗೆ ಈಪಿಂಚಣಿಯೋಜನೆ ಆಯ್ದುಕೊಳ್ಳದ ಉದ್ಯೋಗಿಗಳು ಆರು ತಿಂಗಳೊಳಗೆ ಈ ಯೋಜನೆಗೆ ಸೇರಬೇಕು. ಕೊನೆ ದಿನಾಂಕದೊಳಗೆ ಯೋಜನೆಗೆ ಸೇರಲು ಸಾಧ್ಯವಾಗದ ಅರ್ಹ ಉದ್ಯೋಗಿಗಳಿಗೆ ಈ ವಿಷಯದ ಬಗ್ಗೆ ಸ್ಪಷ್ಟತೆಯ ಕೊರತೆ ಇರುವುದರಿಂದ ಹೆಚ್ಚುವರಿ ಅವಕಾಶ ನೀಡಬೇಕು ಎಂದೂ ಅದು ಹೇಳಿದೆ.

ಗರಿಷ್ಠ ಸಂಬಳ ಮಿತಿ ₹15 ಸಾವಿರ ಮೀರಿದರೆ ಶೇ 1.16ರಷ್ಟು ಕೊಡುಗೆ ನೀಡಬೇಕು ಎಂದು ವಿಧಿಸಿದ್ದ ಷರತ್ತನ್ನು ಪೀಠವು ಅಮಾನ್ಯಗೊಳಿಸಿದೆ.

ಮಿತಿ ದಾಟಿದ ಗರಿಷ್ಠ ಸಂಬಳದ ಮೇಲೆ ಹೆಚ್ಚುವರಿ ಕೊಡುಗೆ ನೀಡಬೇಕೆಂಬ ಷರತ್ತನ್ನು ‘ಅಲ್ಟ್ರಾ ವೈರಸ್‌’ ಎಂದು ವ್ಯಾಖ್ಯಾನಿಸಿ, ರದ್ದುಪಡಿಸಿದ ಪೀಠವು, ಪಿಂಚಣಿ ನಿಧಿ ಹೊಂದಿಸಲು ಸಂಬಂಧಿಸಿದವರಿಗೆ ತೀರ್ಪಿನ ಈ ಭಾಗವನ್ನು ಆರು ತಿಂಗಳ ಅವಧಿಗೆ ಅಮಾನತಿನಲ್ಲಿರಿಸಲಾಗುವುದು ಎಂದು ಹೇಳಿದೆ.

ಈ ಯೋಜನೆಯಡಿ ಪಾವತಿಸುವ ಉದ್ಯೋಗದಾತ ಮತ್ತು ಉದ್ಯೋಗಿಗಳ ತಲಾ ಕೊಡುಗೆಯ ಸಂಬಳದ ಗರಿಷ್ಠ ಮಿತಿ ಆರಂಭದಲ್ಲಿ ₹ 6,500 ಇತ್ತು. ಇದಕ್ಕೆ ಕೇಂದ್ರ ಸರ್ಕಾರ 2014ರಲ್ಲಿ ತಿದ್ದುಪಡಿ ತಂದು ಸಂಬಳದ ಗರಿಷ್ಠ ಮಿತಿಯನ್ನು ₹ 15 ಸಾವಿರಕ್ಕೆ ಹೆಚ್ಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT