ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ‘ಸುಪ್ರೀಂ’ ಕಠಿಣ ಕ್ರಮದ ಎಚ್ಚರಿಕೆ

ಮಾಹಿತಿ ಆಯೋಗದಲ್ಲಿ ಮಾಹಿತಿ ಆಯುಕ್ತರ ಹುದ್ದೆ ಖಾಲಿ
Last Updated 30 ಆಗಸ್ಟ್ 2021, 15:47 IST
ಅಕ್ಷರ ಗಾತ್ರ

ನವದೆಹಲಿ: ಮಾಹಿತಿ ಆಯೋಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದಿರುವ ಕರ್ನಾಟಕವು ಸೇರಿದಂತೆ ಹಲವು ರಾಜ್ಯಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಎಚ್ಚರಿಕೆ ನೀಡಿದೆ.

ಎರಡು ವರ್ಷಗಳ ಹಿಂದೆಯೇ ಸೂಚನೆ ನೀಡಿದರೂ ಮಾಹಿತಿ ಆಯುಕ್ತರನ್ನು ನೇಮಕ ಮಾಡಲು ರಾಜ್ಯಗಳು ವಿಫಲವಾಗಿರುವುದಕ್ಕೆ ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಅಂಜಲಿ ಭಾರದ್ವಾಜ್ ಪ್ರಕರಣದಲ್ಲಿ 2019ರ ಫೆಬ್ರುವರಿ 15ರಂದು ನೀಡಲಾದ ತೀರ್ಪನ್ನು ಪಾಲಿಸದಿದ್ದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ರಾಜ್ಯಗಳಿಗೆ ಎಚ್ಚರಿಕೆಯನ್ನೂ ನೀಡಿತು.

ಎಲ್ಲಾ ರಾಜ್ಯಗಳು ಬಾಕಿ ಪ್ರಕರಣಗಳು ಸೇರಿದಂತೆ ವಸ್ತುಸ್ಥಿತಿಯ ವರದಿಯನ್ನು ನಾಲ್ಕು ವಾರಗಳಲ್ಲಿ ಸಲ್ಲಿಸಬೇಕು ಎಂದು ಪೀಠ ಗಡುವು ನೀಡಿತು.

ಕರ್ನಾಟಕದ ಪರವಾಗಿ ಹಾಜರಾದ ವಕೀಲ ವಿ.ಎನ್. ರಘುಪತಿ, ಮಂಜೂರಾದ ಒಟ್ಟು 10 ಮಾಹಿತಿ ಆಯುಕ್ತರ ಹುದ್ದೆಗಳ ಪೈಕಿ ಏಳು ಮಂದಿ ಆಯುಕ್ತರು ಕೆಲಸ ಮಾಡುತ್ತಿದ್ದಾರೆ. ಮಾಹಿತಿ ಆಯುಕ್ತರ ಮೂರು ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಜಾಹೀರಾತು ನೀಡಲಾಗಿದೆ ಎಂದು ಮಾಹಿತಿ ಸಲ್ಲಿಸಿದರು.

ಆದಾಗ್ಯೂ, ನ್ಯಾಯಾಲಯವು ಮುಖ್ಯ ಮಾಹಿತಿ ಆಯುಕ್ತರಿಗೆ ಕಚೇರಿ ಸಿಬ್ಬಂದಿ ಮತ್ತು ಮೂಲಸೌಕರ್ಯ ಒದಗಿಸುವುದಕ್ಕೆ ಸಂಬಂಧಿಸಿದಂತೆ ವಸ್ತು ಸ್ಥಿತಿ ವರದಿ ಸಲ್ಲಿಸುವಂತೆ ಸೂಚಿಸಿತು.

ಅರ್ಜಿದಾರರ ಪರ ಹಾಜರಾದ ವಕೀಲ ಪ್ರಶಾಂತ್ ಭೂಷಣ್, ಮಹಾರಾಷ್ಟ್ರದಲ್ಲಿ 2021ರ ಮೇ 31ರ ವೇಳೆಗೆ, ರಾಜ್ಯ ಮಾಹಿತಿ ಆಯೋಗದ ಮುಂದೆ ಇತ್ಯರ್ಥಕ್ಕೆ ಸುಮಾರು 75,000 ಪ್ರಕರಣಗಳು ಬಾಕಿ ಇವೆ ಎಂದು ಮಾಹಿತಿ ಸಲ್ಲಿಸಿದರು. ಮುಖ್ಯ ಮಾಹಿತಿ ಆಯುಕ್ತರನ್ನು ಒಳಗೊಂಡಂತೆ ಎಂಟು ಮಂದಿ ಇರಬೇಕಾದ ಕಡೆ ನಾಲ್ವರು ಆಯುಕ್ತರು ಮಾತ್ರ ಪ್ರಸ್ತುತ ಕೆಲಸ ಮಾಡುತ್ತಿದ್ದಾರೆ. ಆಯುಕ್ತರ ಸಂಖ್ಯೆಯನ್ನು 11ಕ್ಕೆ ಹೆಚ್ಚಿಸುವಂತೆ ನ್ಯಾಯಾಲಯ ತೀರ್ಪು ನೀಡಿದೆ.

ತೆಲಂಗಾಣ ರಾಜ್ಯದಲ್ಲಿ ಮುಖ್ಯ ಮಾಹಿತಿ ಆಯುಕ್ತರ ಹುದ್ದೆಯು ಕಳೆದ ಒಂದು ವರ್ಷದಿಂದ ಖಾಲಿ ಇದೆ ಎಂದು ಆ ರಾಜ್ಯದ ವಕೀಲರು ಹೇಳಿದರೆ, ನಾಗಾಲ್ಯಾಂಡ್‌ನಲ್ಲಿ, ಮುಖ್ಯ ಮಾಹಿತಿ ಆಯುಕ್ತರ ಹುದ್ದೆಯು ಕಳೆದ ಆರು ತಿಂಗಳಿಂದ ಖಾಲಿ ಇದೆ ಎಂದು ನ್ಯಾಯಾಲಯಕ್ಕೆ ವಕೀಲರು ಮಾಹಿತಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT