ನವದೆಹಲಿ: ‘ಅರ್ಹತೆ ಹಾಗೂ ಅನುಭವ ಇದ್ದರೂ ಕೂಡ ಎಸ್‌ಸಿ–ಎಸ್‌ಟಿ ಸಮುದಾಯದ ಅಭ್ಯರ್ಥಿಗಳಿಗೆ ಏಮ್ಸ್‌ನಲ್ಲಿ ಅಧ್ಯಾಪಕ ಹುದ್ದೆ ನಿರಾಕರಿಸಲಾಗುತ್ತಿದೆ’ ಎಂದು ಸಂಸದೀಯ ಸ್ಥಾಯಿ ಸಮಿತಿ (ಎಸ್‌ಸಿ–ಎಸ್‌ಟಿ) ತನ್ನ ವರದಿಯಲ್ಲಿ ಆರೋಪಿಸಿದೆ.
‘1,111 ಹುದ್ದೆಗಳ ಪೈಕಿ ಏಮ್ಸ್‌ನಲ್ಲಿ ಸದ್ಯ 275 ಸಹಾಯಕ ಪ್ರಾಧ್ಯಾಪಕ ಹಾಗೂ 92 ಪ್ರಾಧ್ಯಾಪಕ ಹುದ್ದೆಗಳು ಖಾಲಿ ಇವೆ. ಇವುಗಳನ್ನು ಮುಂದಿನ ಮೂರು ತಿಂಗಳೊಳಗೆ ಭರ್ತಿ ಮಾಡಬೇಕು. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವರದಿ ಮಂಡನೆಯಾದ ನಂತರದ ಮೂರು ತಿಂಗಳಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈ ಸಂಬಂಧ ಕಾರ್ಯಸೂಚಿಯೊಂದನ್ನು ಸಿದ್ಧಪಡಿಸಿ ಅದನ್ನು ಕಡ್ಡಾಯವಾಗಿ ಸಲ್ಲಿಸಬೇಕು’ ಎಂದು ಸೂಚಿಸಿದೆ.
‘ಅಗತ್ಯವಿರುವಷ್ಟು ಅರ್ಹ ಅಭ್ಯರ್ಥಿಗಳು ದೊರೆಯಲಿಲ್ಲ’ ಎಂದು ಸರ್ಕಾರ ಪ್ರತಿಬಾರಿಯೂ ಜವಾಬು ನೀಡುತ್ತದೆ. ಇನ್ನು ಮುಂದೆ ಇಂತಹ ಜಾರಿಕೆಯ ಉತ್ತರ ನೀಡಿದರೆ ಅದನ್ನು ಸಹಿಸಲಾಗುವುದಿಲ್ಲ’ ಎಂದೂ ಸಮಿತಿ ಎಚ್ಚರಿಸಿದೆ.
‘ಎಸ್‌ಸಿ–ಎಸ್‌ಟಿ ಸಮುದಾಯದ ಅಭ್ಯರ್ಥಿಗಳು ಇತರರಷ್ಟೇ ಪ್ರತಿಭಾಶಾಲಿಗಳು ಹಾಗೂ ಸಮರ್ಥರಾಗಿದ್ದರೂ ಕೂಡ ಉದ್ದೇಶಪೂರ್ವಕವಾಗಿಯೇ ಅವರನ್ನು ಈ ಹುದ್ದೆಗಳಿಗೆ ಅರ್ಹರಲ್ಲ ಎಂದು ಬಿಂಬಿಸಲಾಗುತ್ತಿದೆ. ಆಯ್ಕೆ ಸಮಿತಿಯು ಪೂರ್ವಗ್ರಹ ಪೀಡಿತ ನಿರ್ಧಾರದ ಮೂಲಕ ಅಧ್ಯಾಪಕ ಹುದ್ದೆಗೇರುವ ಸಮುದಾಯದ ಅಭ್ಯರ್ಥಿಗಳ ಹಕ್ಕನ್ನು ಕಸಿದುಕೊಳ್ಳುತ್ತಿದೆ’ ಎಂದೂ ಸಮಿತಿ ದೂರಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.