ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಲಾಯಂ ಸಿಂಗ್‌ಗೆ ಭಾವುಕ ವಿದಾಯ

Last Updated 11 ಅಕ್ಟೋಬರ್ 2022, 14:40 IST
ಅಕ್ಷರ ಗಾತ್ರ

ಲಖನೌ: ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಮುಲಾಯಂ ಸಿಂಗ್‌ ಯಾದವ್‌ ಅವರಿಗೆಮೈನ್‌ಪುರಿ ಜಿಲ್ಲೆಯ ಸೈಫೈಯಲ್ಲಿ ಮಂಗಳವಾರ ಭಾವುಕ ವಿದಾಯ ನೀಡಲಾಯಿತು.

ಅಂತ್ಯಕ್ರಿಯೆಯಲ್ಲಿ ಭಾರಿ ಜನಸ್ತೋಮ ಕಂಡುಬಂತು. ರಾಜಕೀಯ ನಾಯಕರು ಪಕ್ಷಬೇಧ ಮರೆತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಉತ್ತರಪ್ರದೇಶದ ಉಪ ಮುಖ್ಯಮಂತ್ರಿಗಳಾದ ಬ್ರಜೇಶ್‌ ಪಾಠಕ್ ಮತ್ತು ಕೇಶವ್‌ಪ್ರಸಾದ್‌ ಮೌರ್ಯ ಅವರು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರನ್ನು ಸಂತೈಸುತ್ತಿದ್ದ ದೃಶ್ಯ ಗಮನ ಸೆಳೆಯಿತು.

ನೆಚ್ಚಿನ ನಾಯಕನ ಅಂತಿಮ ದರ್ಶನಕ್ಕಾಗಿದೂರದ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಜನ, ‘ನೇತಾಜಿ ಅಮರ್‌ ರಹೇ’ ಎಂಬ ಘೋಷಣೆ ಕೂಗಿ ಅಭಿಮಾನ ಮೆರೆದರು. ಅಖಿಲೇಶ್‌ ಅವರು ಭಾರವಾದ ಮನಸ್ಸಿನಿಂದಲೇ ಅಪ‍್ಪನ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಮುಲಾಯಂ ಅವರ ಪಾರ್ಥಿವ ಶರೀರವನ್ನು ಮನೆಯಿಂದ ನುಮಾಯಿಶಾ ಮೇಲಾ ಮೈದಾನಕ್ಕೆ ಹೂವಿನಿಂದ ಅಲಂಕರಿಸಲಾಗಿದ್ದ ವಿಶೇಷ ವಾಹನದಲ್ಲಿ ತಂದು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಪಾರ್ಥಿವ ಶರೀರ ಸಾಗಿಬಂದ ಮಾರ್ಗದ ಉದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಕೆಲವರು ಮರವೇರಿ ಕುಳಿತಿದ್ದರು. ಸಮಾಜವಾದಿ ಪಕ್ಷದ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನನ್ನು ನೆನೆದು ಕಣ್ಣೀರಿಟ್ಟರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್‌, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌,ರಾಷ್ಟ್ರೀಯ ಲೋಕದಳದ (ಆರ್‌ಎಲ್‌ಡಿ) ಮುಖ್ಯಸ್ಥ ಜಯಂತ್‌ ಚೌಧರಿ, ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್‌.ಚಂದ್ರಬಾಬು ನಾಯ್ಡು, ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌, ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌, ಕಾಂಗ್ರೆಸ್‌ ನಾಯಕ ಸಚಿನ್ ಪೈಲಟ್‌, ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್‌, ಅವರ ಮಗ ಅಭಿಷೇಕ್‌ ಬಚ್ಚನ್, ರಿಲಯನ್ಸ್‌ ಸಮೂಹದ ಮುಖ್ಯಸ್ಥ ಅನಿಲ್‌ ಅಂಬಾನಿ, ಬಾಬಾ ರಾಮ್‌ದೇವ್‌, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌, ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌, ಸಿಪಿಐ(ಎಂ)ನ ಸೀತಾರಾಂ ಯೆಚೂರಿ, ಪ್ರಕಾಶ್‌ ಕಾರಟ್‌, ಎನ್‌ಸಿಪಿ ಮುಖಂಡರಾದ ಪ್ರಫುಲ್‌ ‍ಪಟೇಲ್‌, ಸುಪ್ರಿಯಾ ಸುಳೆ ಅವರು ಅಂತ್ಯಕ್ರಿಯೆಗೆ ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT