ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಗಳನ್ನು ಕಡಿಯಲು ಗೌಪ್ಯವಾಗಿ ಅನುಮತಿ ನೀಡುವುದು ಸರಿಯಲ್ಲ: ಸುಪ್ರೀಂಕೋರ್ಟ್

Last Updated 20 ನವೆಂಬರ್ 2021, 10:53 IST
ಅಕ್ಷರ ಗಾತ್ರ

ನವದೆಹಲಿ: ‘ಮರಗಳನ್ನು ಕಡಿಯಲು ಕಾನೂನು ಪ್ರಕಾರವೇ ಅನುಮತಿ ನೀಡುವುದು ಹಾಗೂ ಅದನ್ನು ರಹಸ್ಯವಾಗಿಡುವುದು ಉತ್ತರದಾಯಿತ್ವ ಇಲ್ಲದಂತೆ ಮಾಡುತ್ತದೆ. ಇಂಥ ಕ್ರಮ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕಾನೂನಿಗೆ ವ್ಯತಿರಿಕ್ತವಾದುದು‘ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಈ ಕುರಿತ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌, ಸೂರ್ಯ ಕಾಂತ್ ಹಾಗೂ ವಿಕ್ರಮ್ ನಾಥ್ ಅವರನ್ನು ಒಳಗೊಂಡ ನ್ಯಾಯಪೀಠ, ‘ಮರಗಳನ್ನು ಕಡಿಯಲು ರಹಸ್ಯವಾಗಿ ಅನುಮತಿ ನೀಡುವುದು ಉತ್ತಮ ಆಡಳಿತಕ್ಕೆ ವಿರುದ್ಧವಾದುದು‘ ಎಂದೂ ಹೇಳಿತು.

ಉತ್ತರಾಖಂಡ ಹಾಗೂ ಉತ್ತರಪ್ರದೇಶ ರಾಜ್ಯಗಳ ಮೂಲಕ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿ 72ಎ ನಿರ್ಮಾಣಕ್ಕೆ ಮರಗಳನ್ನು ಕಡಿಯಲು ಡೆಹ್ರಾಡೂನ್‌ ಜಿಲ್ಲಾ ಅರಣ್ಯ ಅಧಿಕಾರಿ ಆಗಸ್ಟ್‌ 27ರಂದು ಅನುಮತಿ ನೀಡಿದ್ದರು. ಈ ಕ್ರಮವನ್ನು ಪ್ರಶ್ನಿಸಿ ‘ಸಿಟಿಜನ್ಸ್‌ ಫಾರ್ ಗ್ರೀನ್ ಡೂನ್‌’ ಎಂಬ ಎನ್‌ಜಿಒ ಅರ್ಜಿ ಸಲ್ಲಿಸಿತ್ತು.

ನ. 26ರ ವರೆಗೆ ಮರಗಳನ್ನು ಕಡಿಯದಂತೆ ತಡೆಯಾಜ್ಞೆ ನೀಡಿದ ನ್ಯಾಯಪೀಠ, ಈ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸುವಂತೆ ಎನ್‌ಜಿಒಗೆ ಸೂಚಿಸಿತು.

‘ಮರಗಳನ್ನು ಕಡಿಯಲು ಅನುಮತಿ ನೀಡುವುದನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಹೀಗೆ ಮಾಡುವುದರಿಂದ ನೊಂದವರು ಸಹ ಅಧಿಕಾರಿಗಳ ಇಂಥ ಕ್ರಮವನ್ನು ಪ್ರಶ್ನಿಸುವ ಹಕ್ಕು ಹೊಂದಿದ್ದಾರೆ ಎಂಬುದನ್ನು ಖಾತ್ರಿ ಪಡಿಸಲು ಸಾಧ್ಯವಾಗುತ್ತದೆ ಎಂಬುದೇ ಇದರ ಉದ್ದೇಶ’ ಎಂದೂ ನ್ಯಾಯಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT