ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಕೇಂದ್ರದಲ್ಲಿ ಸೆಲ್ಫಿ ಸ್ಟ್ಯಾಂಡ್, ಟಿವಿ, ಮ್ಯಾಗಜಿನ್

Last Updated 20 ಜನವರಿ 2021, 5:05 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್ ಲಸಿಕೆ ಅಭಿಯಾನ ಆರಂಭವಾದ ಬಳಿಕ ಆರೋಗ್ಯ ಕಾರ್ಯಕರ್ತರೇ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದು, ಲಸಿಕೆ ಪಡೆಯುವವರ ಸಂಖ್ಯೆ ನಿಗದಿತ ಮಟ್ಟಕ್ಕೆ ತಲುಪುತ್ತಿಲ್ಲ. ಹಾಗಾಗಿ, ಜನರನ್ನು ಲಸಿಕಾ ಕೇಂದ್ರಕ್ಕೆ ಆಕರ್ಷಿಸಲು ನವದೆಹಲಿಯಲ್ಲಿ ಹೊಸ ಪ್ರಯತ್ನ ಮಾಡಲಾಗಿದೆ.

ಇಲ್ಲಿನ ಲಸಿಕಾ ಕೇಂದ್ರಗಳಲ್ಲಿ 30 ನಿಮಿಷಗಳ ಕಡ್ಡಾಯ ಮೇಲ್ವಿಚಾರಣೆ ಸಂದರ್ಭದಲ್ಲಿ ಸೆಲ್ಫಿ ಸ್ಟ್ಯಾಂಡ್, ಆಪ್ತಸಮಾಲೋಚಕರು, ಸಂಗೀತ, ಟಿವಿ ಮತ್ತು ಮ್ಯಾಗಜಿನ್ ವ್ಯವಸ್ಥೆ ಮಾಡಲಾಗಿದೆ.

ದಿನದಿಂದ ದಿನಕ್ಕೆ ಲಸಿಕೆ ಹಾಕಿಸಿಕೊಳ್ಳುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಮೊದಲಿಗೆ ವೈದ್ಯರೇ ಲಸಿಕೆ ಹಾಕಿಸಿಕೊಳ್ಳುವ ಮೂಲಕ ತಮ್ಮ ಕಿರಿಯ ಸಹೋದ್ಯೋಗಿಗಳಿಗೆ ಉದಾಹರಣೆಯಾಗಿ ನಿಲ್ಲಿ ಎಂದು ಹಿರಿಯ ವೈದ್ಯರಿಗೆ ಜಿಲ್ಲಾಡಳಿತ ಮನವಿ ಮಾಡಿದೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಇದರ ಜೊತೆಗೆ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಿದ ಫಲಾನುಭವಿಗಳ ಪಟ್ಟಿಯನ್ನು ಬದಲಾಯಿಸಲು ಅನುವು ಮಾಡಿಕೊಡುವಂತೆ ಕೋ-ವಿನ್ ಅಪ್ಲಿಕೇಶನ್‌ಗೆ ಫೀಚರ್ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಈ ಮೊದಲು, ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಲಾದ ಪಟ್ಟಿಯ ಬದಲಾಯಿಸಲು ಸಾಧ್ಯವಿರಲಿಲ್ಲ. ಆದರೆ, ಈಗ ನಾವು ಅದಕ್ಕೆ ಫಲಾನುಭವಿಗಳನ್ನು ಸೇರಿಸಬಹುದು" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿಂಜರಿಕೆ ಮತ್ತು ಲಸಿಕೆ ಪಡೆಯಲು ಮುಂದಾಗದವರನ್ನು ಬದಲಿಸುವ ಮೂಲಕ ಆಸಕ್ತ ಮತ್ತು ಲಸಿಕೆಗೆ ಸಿದ್ಧರಿರುವವರನ್ನು ಸೇರಿಸುವ ಮೂಲಕ ಲಸಿಕೆ ಪಡೆಯುವ ಆರೋಗ್ಯ ಕಾರ್ಯಕರ್ತರ ಸಂಖ್ಯೆಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಶನಿವಾರ ಆರಂಭಗೊಂಡ ಬೃಹತ್ ಲಸಿಕೆ ಅಭಿಯಾನದ ನಂತರ ನಗರದಲ್ಲಿ ಇದುವರೆಗೆ 8,117 ಮಂದಿಗೆ ಲಸಿಕೆ ಹಾಕುವ ಗುರಿ ಇತ್ತು. ಇದುವರೆಗೆ ಒಟ್ಟು 4,319 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗಿದೆ.

ಹಿರಿಯ ವೈದ್ಯರು ಮತ್ತು ಪ್ರೊಫೆಸರ್‌ಗಳು ಮೊದಲಿಗೆ ಲಸಿಕೆ ಹಾಕಿಸಿಕೊಂಡು ಸೆಲ್ಫಿ ತೆಗೆದು ಅದನ್ನು ಲಸಿಕೆ ಕೇಂದ್ರದ ದೊಡ್ಡ ಪರದೆ ಮೇಲೆ ಪ್ರದರ್ಶಿಸಲಾಗುತ್ತದೆ. ಲಸಿಕೆ ಅಭಿಯಾನ ಚುರುಕುಗೊಳಿಸಲು ಬೇಕಾದ ಎಲ್ಲ ಕ್ರಮಗಳನ್ನು ದೆಹಲಿಯಲ್ಲಿ ಜಿಲ್ಲಾಡಳಿತ ಕೈಗೊಳ್ಳುತ್ತಿದೆ.

ಇದರ ಜೊತೆಗೆ, ಲಸಿಕೆ ಪಡೆದ ಬಳಿಕ 30 ನಿಮಿಷಗಳ ಕಡ್ಡಾಯ ಮೇಲ್ವಿಚಾರಣೆ ಅವಧಿಯಲ್ಲಿ ಮ್ಯಾಗಜಿನ್, ಹಿತವಾದ ಸಂಗೀತ, ಟಿವಿ ವ್ಯವಸ್ಥೆ ಕಲ್ಪಿಸಲಾಗಿದೆ.

"ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಕೆಯನ್ನು ತಪ್ಪಿಸಲು, ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯು(ಎನ್‌ಐಎಚ್‌ಎಫ್‌ಡಬ್ಲ್ಯು) ಲಸಿಕಾ ಕೇಂದ್ರಗಳಲ್ಲಿ ಮನಶ್ಶಾಸ್ತ್ರಜ್ಞ ಮತ್ತು ಶುಶ್ರೂಷಕರ ಮಾರ್ಗದರ್ಶನದಲ್ಲಿ 'ಸ್ವಸ್ತ್‌ದೂತ್' ಸ್ವಯಂಸೇವಕರು ಲಸಿಕೆ ನೀಡುವ ಮೊದಲು ಫಲಾನುಭವಿಗಳೊಂದಿಗೆ ಮಾತುಕತೆ ನಡೆಸಿ ಅವರ ಮನವೊಲಿಸುತ್ತಿದ್ದಾರೆ" ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಮನೋರತ್ನ ಸ್ವಯಂಸೇವಕರು, ಎನ್‌ಜಿಒಗಳ ಮತ್ತು ನಾಗರಿಕ ತಂಡಗಳ ಮೂಲಕ ಲಸಿಕೆ ಪಡೆಯುವ ಕುರಿತಂತೆ ಸಮಾಜದಲ್ಲಿ ವರ್ತನೆಯ ಬದಲಾವಣೆಯನ್ನು ತರಲು ಜಿಲ್ಲಾಡಳಿತ ಬದ್ಧವಾಗಿದೆ" ಎಂದು ಅವರು ಹೇಳಿದ್ದಾರೆ.

ಈಶಾನ್ಯ ದೆಹಲಿಯಲ್ಲಿ, ಮೊದಲು ಹಿರಿಯ ವೈದ್ಯರು ಮುಂದೆ ಬಂದು ಲಸಿಕೆ ಹಾಕಿಸಿಕೊಂಡು ಇತರ ಆರೋಗ್ಯ ಕಾರ್ಯಕರ್ತರಿಗೆ ಸಂದೇಶ ನೀಡುವಂತೆ ಕೇಳಿಕೊಳ್ಳಲಾಗಿದೆ. ಇದರಿಂದ ಕಿರಿಯ ಸಹೋದ್ಯೋಗಿಗಳು ಪ್ರೇರೇಪಿತರಾಗುತ್ತಾರೆ. ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚುತ್ತದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಲಸಿಕೆ ಪಡೆಯುವವರ ಸಂಖ್ಯೆ ಕುಸಿತಕ್ಕೆ ಕೆಲವು ತಾಂತ್ರಿಕ ಸಮಸ್ಯೆಗಳು, ಹಿಂಜರಿಕೆ ಮತ್ತು ಲಸಿಕೆ ಪ್ರತಿಕೂಲ ಪರಿಣಾಮದ ಘಟನೆಗಳ ಬಳಿಕ ಉಂಟಾದ ಆತಂಕ ಸೇರಿದಂತೆ ಹಲವು ಕಾರಣವಾಗಿವೆ. ಈ ಮಧ್ಯೆ, ಲಸಿಕೆಯಿಂದ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಪ್ರಕರಣ ಕಂಡುಬಂದಿಲ್ಲ ಎಂದು ಸರ್ಕಾರ ಹೇಳಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ದೆಹಲಿಯಲ್ಲಿ ಶನಿವಾರ ಕೊರೊನಾ ವೈರಸ್‌ ಲಸಿಕೆ ಪಡೆದ ಬಳಿಕ ಒಂದು "ತೀವ್ರ" ಮತ್ತು 51 "ಸಣ್ಣ" ಪ್ರಮಾಣದ ಅಡ್ಡ ಪರಿಣಾಮದ ಪ್ರಕರಣಗಳು ವರದಿಯಾಗಿವೆ.

ದೆಹಲಿಯ 75 ಕೇಂದ್ರಗಳಲ್ಲಿ ಕೋವಿಶೀಲ್ಡ್ ಮತ್ತು 6 ಕೇಂದ್ರಗಳಲ್ಲಿ ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. ವಾರದ ನಾಲ್ಕು ದಿನ(ಸೋಮವಾರ, ಮಂಗಳವಾರ, ಗುರುವಾರ ಮತ್ತು ಶನಿವಾರ) ಮಾತ್ರ ಲಸಿಕೆ ಹಾಕಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT