ಭಾನುವಾರ, ಏಪ್ರಿಲ್ 18, 2021
23 °C

ಕನ್ನಡಿಗ, ಐಪಿಎಸ್ ಅಧಿಕಾರಿ ಎಂ.ಎ. ಗಣಪತಿ ಎನ್‌ಎಸ್‌ಜಿ ಮಹಾನಿರ್ದೇಶಕರಾಗಿ ನೇಮಕ

ಶೆಮಿನ್ ಜಾಯ್ ಡೆಕ್ಕನ್ ಹೆರಾಲ್ಡ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕದ ಕೊಡಗು ಮೂಲದ ಹಿರಿಯ ಐಪಿಎಸ್ ಅಧಿಕಾರಿ ಎಂ ಎ ಗಣಪತಿ ಅವರನ್ನು ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ (ಎನ್‌ಎಸ್‌ಜಿ) ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ನೇಮಕಾತಿ ಸಮಿತಿಯು ಗಣಪತಿ ಅವರ ನೇಮಕಾತಿಗೆ ಅನುಮೋದನೆ ನೀಡಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಮಂಗಳವಾರ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಇದೇವೇಳೆ, ಪಶ್ಚಿಮ ಬಂಗಾಳದ ಕೇಡರ್‌ನ 1986 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಕುಲದೀಪ್ ಸಿಂಗ್ ಅವರನ್ನು ಸಿಆರ್‌ಪಿಎಫ್ ಮಹಾನಿರ್ದೇಶಕರಾಗಿ ಕ್ಯಾಬಿನೆಟ್ ನೇಮಕಾತಿ ಸಮಿತಿಯು ನೇಮಕ ಮಾಡಿದೆ. ಪ್ರಸ್ತುತ ಅವರು ಸಿಆರ್‌ಪಿಎಫ್‌ನ ವಿಶೇಷ ಡಿಜಿ ಆಗಿದ್ದಾರೆ.

ಎನ್‌ಎಸ್‌ಜಿ ಮಹಾನಿರ್ದೇಶಕರಾಗಿ ನೇಮಕವಾಗಿರುವ ಗಣಪತಿ ಅವರು ಪ್ರಸ್ತುತ, ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿಯ ಮಹಾನಿರ್ದೇಶಕರಾಗಿದ್ದಾರೆ.

57 ವರ್ಷದ 1986 ರ ಐಪಿಎಸ್‌ ಬ್ಯಾಚ್‌ನ ಅಧಿಕಾರಿಯಾಗಿರುವ ಗಣಪತಿ, ಕರ್ನಾಟಕದ ಕೊಡಗು ಮೂಲದವರಾಗಿದ್ದಾರೆ. ಉತ್ತರಾಖಂಡದಲ್ಲಿ ಪೊಲೀಸ್ ಮಹಾನಿರ್ದೇಶಕರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ.

ಈ ಹಿಂದೆ ಅವರು ಗೃಹ ಸಚಿವಾಲಯದಲ್ಲಿ (ಎಂಎಚ್‌ಎ) ಆಂತರಿಕ ಭದ್ರತೆ ಮತ್ತು ಎಡಪಂಥೀಯ ಉಗ್ರವಾದದಂತಹ ಚಟುವಟಿಕೆಗಳನ್ನು ಹತ್ತಿಕ್ಕುವ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಜೊತೆಗೆ, ಗೃಹ ಸಚಿವಾಲಯದ ವಕ್ತಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ (ಜೆಎನ್‌ಯು) ಸ್ನಾತಕೋತ್ತರ ಪದವಿ ಪಡೆದ ನಂತರ 1986 ರಲ್ಲಿ ಉತ್ತರಪ್ರದೇಶದಲ್ಲಿ ಐಪಿಎಸ್‌ಗೆ ಸೇರಿದರು. ಉತ್ತರ ಪ್ರದೇಶ ವಿಭಜನೆಯ ನಂತರ ಅವರನ್ನು ಉತ್ತರಾಖಂಡ ಕೇಡರ್‌ಗೆ ವರ್ಗಾಯಿಸಲಾಯಿತು.

ಗಣಪತಿ ಅವರು ಐಪಿಎಸ್ ಅಧಿಕಾರಿಯಾಗಿ 30 ವರ್ಷಗಳ ತಮ್ಮ ಸುದೀರ್ಘ ಸೇವಾವಧಿಯಲ್ಲಿ, ಮೊರಾದಾಬಾದ್ ನಗರ, ಸೋನೆಭದ್ರ ಮತ್ತು ಹಾರ್ಡೊಯ್‌ನಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ, ನೈನಿತಾಲ್, ಮೀರತ್ ಮತ್ತು ಕಾನ್ಪುರದಲ್ಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

1999 ರಿಂದ ಸಿಬಿಐನಲ್ಲಿ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸಿದ್ದು, ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಭ್ರಷ್ಟಾಚಾರ ವಿರೋಧಿ) ಆಗಿ ಬಡ್ತಿ ಪಡೆದಿದ್ದರು.

ಉತ್ತರಾಖಂಡ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವಾಗ, ಸೋನೆಭದ್ರದಲ್ಲಿ ಮಾವೋವಾದಿ ಭೀತಿ ಮತ್ತು ನೈನಿತಾಲ್‌ನಲ್ಲಿ ಸಿಖ್ ಉಗ್ರಗಾಮಿ ಚಟುವಟಿಕೆಯನ್ನು ಎದುರಿಸಿದ ಅನುಭವ ಹೊಂದಿದ್ದಾರೆ. ಬಳಿಕ, ಮೀರತ್ ಮತ್ತು ಕಾನ್ಪುರದಲ್ಲಿಯೂ ಅವರನ್ನು ಪೋಸ್ಟ್ ಮಾಡಲಾಗಿತ್ತು..

ಗಣಪತಿ ಅವರು 2010ರಲ್ಲಿ ತಮ್ಮ ವಿಶೇಷ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ಪಡೆದಿದ್ದಾರೆ. ದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಹೌದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು