ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ತಿನಲ್ಲಿ ಭಾರತ–ಚೀನಾ ಸೇನಾ ಸಂಘರ್ಷ ಪ್ರತಿಧ್ವನಿ: ವಿರೋಧ ಪಕ್ಷಗಳ ಪ್ರತಿಭಟನೆ

ಚರ್ಚೆಗೆ ನಕಾರ: ವಿಪಕ್ಷ ಸಭಾತ್ಯಾಗ
Last Updated 14 ಡಿಸೆಂಬರ್ 2022, 4:26 IST
ಅಕ್ಷರ ಗಾತ್ರ

ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಭಾರತ–ಚೀನಾ ಸೇನಾ ಸಂಘರ್ಷದ ಕುರಿತು ಸಂಸತ್ತಿನಲ್ಲಿ ಭಾರಿ ಕೋಲಾಹಲ ಉಂಟಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂಘರ್ಷದ ಕುರಿತು ಹೇಳಿಕೆ ನೀಡಿದ ಕೂಡಲೇ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದವು. ಆದರೆ, ಅದಕ್ಕೆ ಅವಕಾಶ ಕೊಡದ ಕಾರಣ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದವು.

ಕಲಾಪವನ್ನು ಅಮಾನತು ಮಾಡಿ, ಡಿಸೆಂಬರ್‌ 9ರಂದು ನಡೆದ ಸಂಘರ್ಷದ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಎಂದು ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌, ಆರ್‌ಜೆಡಿ ಮತ್ತು ಎಎಪಿಯ ಹಲವು ಸಂಸದರು ಎರಡೂ ಸದನಗಳಲ್ಲಿ ನೋಟಿಸ್‌ ನೀಡಿದ್ದರು. ಆದರೆ, ಚರ್ಚೆಗೆ ಸರ್ಕಾರ ಒಪ್ಪಲಿಲ್ಲ. ವಿರೋಧ ಪಕ್ಷಗಳ ಪ್ರತಿಭಟನೆ
ಯಿಂದಾಗಿ ಮೊದಲ ನಾಲ್ಕು ತಾಸಿನ ಕಲಾಪದಲ್ಲಿ ಎರಡೂ ಸದನಗಳಲ್ಲಿ ಕಲಾಪ ಮುಂದೂಡಬೇಕಾಯಿತು.

ಸಂಸತ್ತಿನ ಮೇಲೆ ಉಗ್ರರ ದಾಳಿಯಲ್ಲಿ ಹುತಾತ್ಮರಾದವರಿಗೆ ನಮನ ಸಲ್ಲಿಸಿದ ಬಳಿಕ ವಿರೋಧ ಪಕ್ಷಗಳ ಸಂಸದರು ಸಂಘರ್ಷದ ವಿಚಾರ ಎತ್ತಿದರು. ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿಯೇ
ಚರ್ಚೆ ನಡೆಯಬೇಕು ಎಂದು ಪಟ್ಟು ಹಿಡಿದು ಘೋಷಣೆಗಳನ್ನು ಕೂಗಲಾರಂಭಿಸಿದರು.

2020ರ ಏಪ್ರಿಲ್‌ನಲ್ಲಿ ಇದ್ದ ಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ಭಾರತ ಆಗ್ರಹಿಸಿದ್ದರೂ ಭಾರತದ ಭೂ ಪ್ರದೇಶವನ್ನು ಬಿಟ್ಟುಹೋಗಲು ಚೀನಾ ಒಪ್ಪಿಲ್ಲ. ‘ನಮ್ಮ ಭೂಪ್ರದೇಶದೊಳಕ್ಕೆ ಯಾರೂ ಬಂದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020ರ ಜೂನ್‌ 20ರಂದು ಹೇಳಿದ್ದನ್ನು ಚೀನಾ ಗುರಾಣಿಯಾಗಿ ಬಳಸುತ್ತಿದೆ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಭಾರತದ ಯೋಧರ ಶೌರ್ಯವನ್ನು ಖರ್ಗೆ ಅವರು ಕೊಂಡಾಡಿದರು. ಚೀನಾವು ಭಂಡತನದಿಂದ ಭಾರತದೊಳಕ್ಕೆ ಅತಿಕ್ರಮಣ ಮಾಡಿದೆ. ದೆಪ್ಸಾಂಗ್‌ ಬಯಲಿನ ವೈ ಜಂಕ್ಷನ್‌ ವರೆಗೆ ಅಪ್ರಚೋದಿತವಾಗಿ ಮತ್ತು ಅಕ್ರಮವಾಗಿ ಚೀನಾ ಬಂದಿದೆ ಮತ್ತು ಇವತ್ತಿನ ವರೆಗೂ ಈ ಪ್ರದೇಶದಿಂದ ಹೊರಗೆ ಹೋಗಿಲ್ಲ ಎಂದು ಖರ್ಗೆ ಹೇಳಿದರು. ಪೂರ್ವ ಲಡಾಖ್‌ನ ಗೋಗ್ರಾ ಮತ್ತು ಹಾಟ್‌ಸ್ಪ್ರಿಂಗ್ಸ್‌ ಪ್ರದೇಶದಲ್ಲಿಯೂ ಚೀನಾ ಅತಿಕ್ರಮಣ ಮಾಡಿದೆ. ಪ್ಯಾಂಗಾಂಗ್ ಸರೋವರದಲ್ಲಿ ಚೀನಾದ ನಿರ್ಮಾಣ ಕಾಮಗಾರಿಗಳನ್ನು ಮೋದಿ ನೇತೃತ್ವದ ಸರ್ಕಾರವು ನಿರಂತರವಾಗಿ ನಿರ್ಲಕ್ಷಿಸುತ್ತಲೇ ಬಂದಿದೆ ಎಂದು ಖರ್ಗೆ ಆರೋಪಿಸಿದ್ದಾರೆ.

‘ಈ ಪ್ರದೇಶದಲ್ಲಿ ಹೊಸತೊಂದು ರೇಡಾರ್ ಗುಮ್ಮಟ ಮತ್ತು ಎರಡು ಅತಿ ಹೆಚ್ಚು ಫ್ರೀಕ್ವೆನ್ಸಿಯ ಮೈಕ್ರೊವೇವ್‌ ಗೋಪುರಗಳನ್ನು ಚೀನಾ ನಿರ್ಮಿಸುತ್ತಿರುವುದು ಹಾಗೂ ಇನ್ನಿತರ ಸ್ಥಳಗಳಲ್ಲಿ ಚೀನಾದ ನಿರ್ಮಾಣ ಕಾಮಗಾರಿ ಕುರಿತು ಸರ್ಕಾರಕ್ಕೆ ಅರಿವೇ ಇಲ್ಲ. ಪ್ಯಾಂಗಾಂಗ್‌ ಸರೋವರಕ್ಕೆ ಸೇತುವೆ ನಿರ್ಮಿಸಲಾಗುತ್ತಿದ್ದು, ಅದು ಸಾಧ್ಯವಾದರೆ ಚೀನಾ ಸೈನಿಕರ ಓಡಾಟ ಸುಲಭವಾಗಲಿದೆ. ಈ ಬಗ್ಗೆಯೂ ಸರ್ಕಾರಕ್ಕೆ ನಿರ್ಲಕ್ಷ್ಯವೇ ಇದೆ’ ಎಂದು ಖರ್ಗೆ ಆರೋಪಿಸಿದ್ದಾರೆ.

ರಾಜನಾಥ್ ಅವರು ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಹೇಳಿಕೆ ನೀಡಬೇಕಿತ್ತು. ಆದರೆ, ಮಧ್ಯಾಹ್ನ 12.30ಕ್ಕೇ ಹೇಳಿಕೆ ನೀಡಲಾಗುವುದು ಎಂದು ಸದನ ನಾಯಕ ಪೀಯೂಷ್‌ ಗೋಯಲ್‌ ಅವರು ತಿಳಿಸಿದರು. ಹೇಳಿಕೆಯ ಬಳಿಕ ಚರ್ಚೆಗೆ ಅವಕಾಶ ಇದೆಯೇ ಎಂದು ವಿರೋಧ ಪಕ್ಷಗಳು ಪ್ರಶ್ನಿಸಿದವು. ಸರ್ಕಾರದ ಕಡೆಯಿಂದ ಯಾವುದೇ ಭರವಸೆ ದೊರೆಯಲಿಲ್ಲ. ಹೀಗಾಗಿ, ವಿರೋಧ ಪಕ್ಷಗಳು ಪ್ರತಿಭಟನೆಗೆ ಇಳಿದವು. ಸದನವನ್ನು ಮಧ್ಯಾಹ್ನ 12ರವರೆಗೆ ಮುಂದೂಡಲಾಯಿತು.

ರಾಜನಾಥ್ ಅವರು ಹೇಳಿಕೆ ಪೂರ್ಣಗೊಳಿಸಿದ ಕೂಡಲೇ ಖರ್ಗೆ ಅವರು ಚರ್ಚೆಗೆ ಪಟ್ಟು ಹಿಡಿದರು. ಹರಿವಂಶ್‌ ಅವರು ಪ್ರಶ್ನಾ ವೇಳೆಯನ್ನು ಕೈಗೆತ್ತಿಕೊಂಡಾಗ ಖರ್ಗೆ ಅವರು ಸಭಾತ್ಯಾಗ ಮಾಡುವುದಾಗಿ ಘೋಷಿಸಿದರು.

ಲೋಕಸಭೆಯಲ್ಲಿಯೂ ಇದೇ ಪರಿಸ್ಥಿತಿ ಇತ್ತು. ಸಂಸದರಾದ ಅಧಿರ್ ರಂಜನ್ ಚೌಧರಿ, ಗೌರವ್‌ ಗೊಗೊಯ್‌ (ಕಾಂಗ್ರೆಸ್‌), ಟಿ.ಆರ್‌. ಬಾಲು (ಡಿಎಂಕೆ) ಮತ್ತು ಅಸಾದುದ್ದೀನ್ ಒವೈಸಿ (ಎಐಎಂಐಎಂ) ಪ್ರಶ್ನಾ ವೇಳೆಯಲ್ಲಿ ವಿಷಯ ಎತ್ತಿದರು. ನಂತರ ನಡೆದ ಪ್ರತಿಭಟನೆಯಿಂದಾಗಿ ಸದನವನ್ನು ಮು‍ಂದೂಡಬೇಕಾಯಿತು.

ಚರ್ಚೆಗೆ ಅವಕಾಶ ಕೊಡಬೇಕು ಎಂದು ಚೌಧರಿ ಒತ್ತಾಯಿಸಿದರೆ, ಪ್ರಧಾನಿ ಹೇಳಿಕೆ ನೀಡಬೇಕು ಎಂದು ಗೊಗೊಯ್‌ ಆಗ್ರಹಿಸಿದರು.

ಗಡಿಯಲ್ಲಿ ಸಾಮಾನ್ಯ ಸ್ಥಿತಿ: ಚೀನಾ

ಬೀಜಿಂಗ್‌ (ಪಿಟಿಐ): ಗಡಿಯಲ್ಲಿನ ಸ್ಥಿತಿಯು ಸಾಮಾನ್ಯವಾಗಿ ಸ್ಥಿರವಾಗಿದೆ ಎಂದು ತವಾಂಗ್ ವಲಯದಲ್ಲಿನ ಸೇನಾ ಸಂಘರ್ಷದ ದಿನಗಳ ಬಳಿಕ ಚೀನಾ ಹೇಳಿದೆ.

ಡಿ.9ರಂದು ಚೀನಾದ ಸೈನಿಕರು ತಮ್ಮ ಭಾಗದಲ್ಲಿ ಎಂದಿನಂತೆ ಗಸ್ತು ನಡೆಸುತ್ತಿದ್ದಾಗ ಭಾರತದ ಸೈನಿಕರು ಅವರನ್ನು ತಡೆದಿದ್ದಾರೆ ಎಂದು ಚೀನಾ ಸೇನೆಯ ಪಶ್ಚಿಮ ಕಮಾಂಡ್‌ನ ವಕ್ತಾರ ಲಾಂಗ್‌ ಶೋಹುವ ಹೇಳಿದ್ದಾರೆ.

ಗಡಿ ಸಂಬಂಧಿ ಸಮಸ್ಯೆಗಳನ್ನು ರಾಜತಾಂತ್ರಿಕ ಮತ್ತು ಸೇನಾ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕಾಗಿ ಎರಡೂ ದೇಶಗಳು ಅತ್ಯುತ್ತಮವಾದ ಸಂವಹನ ವ್ಯವಸ್ಥೆ ಹೊಂದಿವೆ ಎಂದು ಚೀನಾ ವಿದೇಶಾಂಗ ವಕ್ತಾರ ವಾಂಗ್‌ ವೆನ್‌ಬಿನ್‌ ಹೇಳಿದ್ದಾರೆ. ಆದರೆ, ಡಿ.9ರ ಸಂಘರ್ಷದ ಯಾವುದೇ ವಿವರವನ್ನು ಅವರು ನೀಡಿಲ್ಲ.

ಆರ್‌ಜಿಎಫ್‌ಗೆ ದೇಣಿಗೆ ಕುರಿತ ಸತ್ಯಾಂಶ ಕೇಳಲಾಗದೆ ಕಾಂಗ್ರೆಸ್‌ ಗದ್ದಲ: ಶಾ

ಭಾರತ–ಚೀನಾ ಸೇನಾ ಸಂಘರ್ಷದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು ಎಂಬ ಕಾಂಗ್ರೆಸ್‌ನ ಬೇಡಿಕೆಯನ್ನು ಆ ಪಕ್ಷಕ್ಕೇ ತಿರುಗುಬಾಣವಾಗಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಯತ್ನಿಸಿದ್ದಾರೆ. ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ (ಆರ್‌ಜಿಎಫ್‌) ಚೀನಾದಿಂದ ಬಂದಿದ್ದ ದೇಣಿಗೆಯ ಕುರಿತ ನಿಜಾಂಶವನ್ನು ಕೇಳಲು ಸಿದ್ಧವಿಲ್ಲದ ಕಾಂಗ್ರೆಸ್‌, ಸಂಸತ್ತಿನಲ್ಲಿ ಗದ್ದಲ ಸೃಷ್ಟಿಸಿದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಸಂಸದರಾದ ಬೆನ್ನಿ ಬೆಹನನ್‌ ಮತ್ತು ವಿ.ಕೆ. ಶ್ರೀಕಂಠನ್‌ ಅವರ ಪ್ರಶ್ನೆಗಳಿಗೆ ಲೋಕಸಭೆಯಲ್ಲಿ ಶಾ ಉತ್ತರಿಸಬೇಕಿತ್ತು. ಗದ್ದಲದಿಂದಾಗಿ ಅದು ಸಾಧ್ಯವಾಗಲಿಲ್ಲ.

ಚೀನಾ ರಾಯಭಾರ ಕಚೇರಿಯಿಂದ ₹1.35 ಕೋಟಿ ಮತ್ತು ಈಗ ನಿಷೇಧಿತಇಸ್ಲಾಮಿಕ್‌ ರಿಸರ್ಚ್‌ ಪ್ರತಿಷ್ಠಾನದ ಸ್ಥಾಪಕ ಜಾಕಿರ್‌ ನಾಯ್ಕ್‌ನಿಂದ ₹50 ಲಕ್ಷ ದೇಣಿಗೆ ಪಡೆದ ಕಾರಣಕ್ಕಾಗಿ ಆರ್‌ಜಿಎಫ್‌ನನೋಂದಣಿಯನ್ನು ರದ್ದುಪಡಿಸಲಾಗಿದೆ ಎಂದು‍ ಶಾ ಹೇಳಿದ್ದಾರೆ.

‘ಪ್ರಶ್ನೆ ಪಟ್ಟಿಯನ್ನು ನಾನು ನೋಡಿದೆ. ಕಾಂಗ್ರೆಸ್‌ನ ಆತಂಕ ನನಗೆ ಅರ್ಥವಾಗುತ್ತದೆ. ಸದನ ನಡೆಯಲು ಅವಕಾಶ ಕೊಟ್ಟಿದ್ದರೆ ಪ್ರಶ್ನೆಗಳಿಗೆ ನಾನು ಉತ್ತರ ನೀಡುತ್ತಿದ್ದೆ’ ಎಂದರು.

‘ಭಾರತ–ಚೀನಾ ನಡುವಣ ಸಂಬಂಧದ ಬಗ್ಗೆ ಅಧ್ಯಯನ ನಡೆಸುವುದಕ್ಕಾಗಿ ಚೀನಾ ರಾಯಭಾರ ಕಚೇರಿಯಿಂದ ಹಣ ಪಡೆಯಲಾಗಿದೆ ಎಂದು ಆರ್‌ಜಿಎಫ್‌ ಹೇಳಿದೆ. ಈ ಅಧ್ಯಯನದಲ್ಲಿ 1962ರ ಯುದ್ಧದಲ್ಲಿ ಭಾರತದ ಭೂಪ್ರದೇಶವು ಚೀನಾ ಕೈವಶವಾಗಿದ್ದರ ಉಲ್ಲೇಖ ಇದೆಯೇ’ ಎಂದು ಶಾ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮುಖ್ಯಸ್ಥರಾಗಿರುವ ಆರ್‌ಜಿಎಫ್‌ ಮತ್ತು ರಾಜೀವ್ ಗಾಂಧಿ ಚಾರಿಟಬಲ್‌ ಟ್ರಸ್ಟ್‌ನ ಪರವಾನಗಿಯನ್ನು ಕೇಂದ್ರ ಗೃಹ ಸಚಿವಾಲಯವು ಕಾನೂನು ಉಲ್ಲಂಘನೆಯ ಆರೋಪದಲ್ಲಿ ಅಕ್ಟೋಬರ್‌ನಲ್ಲಿ ರದ್ದುಪಡಿಸಿದೆ.

ಸತ್ಯ ಮುಚ್ಚಿಡುತ್ತಿರುವ ಸರ್ಕಾರ: ಕಾಂಗ್ರೆಸ್‌

ರಾಜನಾಥ್‌ ಸಿಂಗ್ ಅವರ ಹೇಳಿಕೆಯು ಅಪೂರ್ಣ, ಸರ್ಕಾರವು ಸತ್ಯವನ್ನು ಮುಚ್ಚಿಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ರಾಜೀವ್‌ ಗಾಂಧಿ ಪ್ರತಿಷ್ಠಾನದ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ) ನೋಂದಣಿಯನ್ನು ರದ್ದುಪಡಿಸುವ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದರ ಬದಲು ಸರ್ಕಾರವು ಸತ್ಯವನ್ನು ಹೇಳಬೇಕು ಎಂದು ಕಾಂಗ್ರೆಸ್‌ ವಕ್ತಾರ ಗೌರವ್‌ ಗೊಗೊಯ್‌ ಹೇಳಿದ್ದಾರೆ.

‘ಡಿ.9ರಂದೇ ಘಟನೆ ನಡೆದಿದ್ದರೂ ರಾಜನಾಥ್ ಅವರು ತಡವಾಗಿ ಹೇಳಿಕೆ ನೀಡಲು ಕಾರಣವೇನು? ಸಂಸತ್ತಿನಲ್ಲಿ ಸೋಮವಾರವೇ ಹೇಳಿಕೆ ಕೊಡಬಹುದಿತ್ತಲ್ಲವೇ?
ಮುಚ್ಚಿಡುತ್ತಿರುವುದು ಏಕೆ? ಜನರಿಂದ ಸತ್ಯವನ್ನು ಮುಚ್ಚಿಡಲು ಈ ಸರ್ಕಾರವು ಯತ್ನಿಸುತ್ತಿದೆ. ಸತ್ಯವನ್ನು ದೇಶದ ಮುಂದೆ ತೆರೆದಿರಿಸಬೇಕು ಎಂಬುದು ನಮ್ಮ ಒತ್ತಾಯ’ ಎಂದು ಗೊಗೊಯ್‌ ಹೇಳಿದ್ದಾರೆ.

ಚೀನಾದ ನಿರ್ಲಜ್ಜ ಅತಿಕ್ರಮಣದಿಂದಾಗಿ ರಾಷ್ಟ್ರೀಯ ಭದ್ರತೆ ಮತ್ತು ಭೌಗೋಳಿಕ ಸಮಗ್ರತೆಗೆ ಧಕ್ಕೆ ಉಂಟಾಗಿದ್ದರೂ ಸರ್ಕಾರವು ಮೂಕ ಪ್ರೇಕ್ಷಕನಾಗಿದೆ

- ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ, ರಾಜ್ಯಸಭೆ

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕಾರದಲ್ಲಿರುವಾಗ ಭಾರತದ ಒಂದು ಇಂಚು ನೆಲವನ್ನೂ ಯಾರೂ ಕಬಳಿಸಲಾಗದು

- ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT