ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಇಇ–ನೀಟ್‌ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ

ಬಿಜೆಪಿಯೇತರ ಸರ್ಕಾರಗಳಿರುವ ಏಳು ರಾಜ್ಯಗಳ ಮುಖ್ಯಮಂತ್ರಿಗಳ ನಿರ್ಧಾರ
Last Updated 26 ಆಗಸ್ಟ್ 2020, 20:12 IST
ಅಕ್ಷರ ಗಾತ್ರ

ನವದೆಹಲಿ: ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ನೀಟ್‌–ಜೆಇಇ ಪರೀಕ್ಷೆಗಳ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲುಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ಏಳು ರಾಜ್ಯಗಳ ಮುಖ್ಯಮಂತ್ರಿಗಳು ಸಜ್ಜಾಗಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ನಡೆಸಿ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗಿಯಾದ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಜಾರ್ಖಂಡ್‌, ಪಂಜಾಬ್‌, ರಾಜಸ್ಥಾನ, ಛತ್ತೀಸಗಡ ಮತ್ತು ಪುದುಚೇರಿಯ ಮುಖ್ಯಮಂತ್ರಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ.

ಸುಪ್ರೀಂ ಕೋರ್ಟ್‌ ಮೊರೆ ಹೋಗುವ ಪ್ರಸ್ತಾವವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಿಟ್ಟರು. ಸಭೆಯಲ್ಲಿ ಭಾಗಿಯಾಗಿದ್ದ ಇತರ ಮುಖ್ಯಮಂತ್ರಿಗಳು ಅದಕ್ಕೆ ಒಪ್ಪಿಗೆ ಸೂಚಿಸಿದರು.

‘ಸುಪ್ರೀಂ ಕೋರ್ಟ್‌ಗೆ ಹೋಗಿ ಈ ವಿಚಾರದ ಬಗ್ಗೆ ಮಾತನಾಡೋಣ. ಇದು (ಪರೀಕ್ಷೆಯ ನಿರ್ಧಾರ) ವಿದ್ಯಾರ್ಥಿಗಳಿಗೆ ಮಾನಸಿಕ ನೋವು ನೀಡುತ್ತದೆ. ಪ್ರಜಾಪ್ರಭುತ್ವದಲ್ಲಿ ಇಷ್ಟೊಂದು ದೌರ್ಜನ್ಯವನ್ನು ನಾನು ಕಂಡೇ ಇಲ್ಲ. ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ವಿದ್ಯಾರ್ಥಿಗಳಿಗಾಗಿ ನಾವು ಮಾತನಾಡಲೇಬೇಕಿದೆ’ ಎಂದು ಮಮತಾ ಹೇಳಿದರು.

ಭೀತಿಯಲ್ಲಿ ಬದುಕಬೇಕೇ ಅಥವಾ ಹೋರಾಡಬೇಕೇ ಎಂಬುದನ್ನು ವಿರೋಧ ಪಕ್ಷಗಳು ನಿರ್ಧರಿಸಬೇಕಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿದರು.

ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಮೊದಲು, ಪ್ರಧಾನಿ ನರೇಂದ್ರ ಮೋದಿ ಅಥವಾ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಳ್ಳಬಹುದು ಎಂಬ ಸಲಹೆಯನ್ನು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ನೀಡಿದರು. ಆದರೆ, ಪರೀಕ್ಷೆಗಳಿಗೆ ಇನ್ನು ಒಂದು ವಾರವಷ್ಟೇ ಇರುವುದರಿಂದ ಸುಪ್ರೀಂ ಕೋರ್ಟ್‌ಗೆ ಹೋಗುವುದೇ ಸೂಕ್ತ ಎಂದು ಮಮತಾ ಅಭಿಪ್ರಾಯಪಟ್ಟರು.

ಎರಡೂ ಪರೀಕ್ಷೆಗಳನ್ನು ಮುಂದೂಡಬೇಕು ಎಂಬ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಕಳೆದ ವಾರ ವಜಾ ಮಾಡಿದೆ. ವಿದ್ಯಾರ್ಥಿಗಳ ಒಂದು ಶೈಕ್ಷಣಿಕ ವರ್ಷವನ್ನು ಸುಮ್ಮನೆ ವ್ಯರ್ಥ ಮಾಡಲಾಗದು. ಜೀವನ ಮುಂದುವರಿಯಲೇಬೇಕು ಎಂದು ಹೇಳಿದೆ.ಸೆ. 1–6ರವರೆಗೆ ಜೆಇಇ ಮತ್ತು ಸೆ. 13ಕ್ಕೆ ನೀಟ್‌ ಪರೀಕ್ಷೆ ನಿಗದಿಯಾಗಿದೆ.

***

ವಿದ್ಯಾರ್ಥಿಗಳು ಪರೀಕ್ಷೆ ಬರೆದು ಉತ್ತೀರ್ಣರಾಗಲಿ ಎಂಬುದು ನನ್ನದೂ ಇಚ್ಛೆ. ಆದರೆ, ಈ ಪಿಡುಗಿನ ನಡುವಲ್ಲಿಯೇ ಪರೀಕ್ಷೆಗಳನ್ನು ನಡೆಸುವುದು ಹೇಗೆ?

-ಅಮರಿಂದರ್‌ ಸಿಂಗ್‌, ಪಂಜಾಬ್‌ ಮುಖ್ಯಮಂತ್ರಿ

***

ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರೂ ಹಲವು ಹಿರಿಯ ನಾಯಕರಿಗೆ ಕೋವಿಡ್‌ಗೆ ಬಂದಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೋವಿಡ್‌ ಬರುವುದಿಲ್ಲ ಎಂಬ ಭರವಸೆ ಕೊಡಲು ಸಾಧ್ಯವೇ?

-ಮನೀಶ್‌ ಸಿಸೋಡಿಯಾ, ದೆಹಲಿಯ ಉಪಮುಖ್ಯಮಂತ್ರಿ

***

9.53 ಲಕ್ಷ

ಜೆಇಇ ಮೇನ್‌ಗೆ ನೋಂದಣಿ ಮಾಡಿರುವವರು

15.97 ಲಕ್ಷ

ನೀಟ್‌ಗೆ ನೋಂದಣಿ ಮಾಡಿರುವವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT