ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14 ರಾಜ್ಯಗಳಲ್ಲಿ 100 ಕೇಂದ್ರ ತೆರೆದ ‘ಇಂಡಿಯನ್ ರೋಟಿ ಬ್ಯಾಂಕ್‌’

Last Updated 12 ಫೆಬ್ರುವರಿ 2023, 12:55 IST
ಅಕ್ಷರ ಗಾತ್ರ

ಲಖನೌ: ಇಲ್ಲಿನ ರೈಲು ನಿಲ್ದಾಣದಲ್ಲಿ ವೃದ್ಧ ಮಹಿಳೆಯ ಹಸಿವೆ ಕಂಡು ಆರಂಭವಾದ ‘ಇಂಡಿಯನ್ ರೋಟಿ ಬ್ಯಾಂಕ್‌’ (ಐಆರ್‌ಬಿ) ಏಳು ವರ್ಷ ಪೂರೈಸಿದ್ದು, 14 ರಾಜ್ಯಗಳ 100ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಾಗೂ ನೇಪಾಳ, ನೈಜೀರಿಯಾದಲ್ಲೂ ಶಾಖೆ ಸ್ಥಾಪಿಸಿ, ಸುಮಾರು 12 ಲಕ್ಷ ಹಸಿದವರ ಹೊಟ್ಟೆ ತುಂಬಿಸುತ್ತಿದೆ.

ಲಖನೌ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ಹರ್ಡೋಯ್‌ನ 38 ವರ್ಷದ ವಿಕ್ರಮ್‌ ಪಾಂಡೆ ಎಂಬುವವರು, ಏಳು ವರ್ಷಗಳ ಹಿಂದೆ ಲಖನೌ ರೈಲು ನಿಲ್ದಾಣದ ಹೊರಗೆ ವೃದ್ಧೆಯೊಬ್ಬರು ತುತ್ತು ಅನ್ನಕ್ಕಾಗಿ ಭಿಕ್ಷೆ ಬೇಡುತ್ತಿದ್ದುದನ್ನು ಕಂಡು ಕೆಲ ಸ್ನೇಹಿತರ ಸಹಾಯರೊಂದಿಗೆ ಸೇರಿ ‘ಇಂಡಿಯನ್ ರೋಟಿ ಬ್ಯಾಂಕ್‌’ ಆರಂಭಿಸಿದ್ದರು.

ಆರಂಭದಲ್ಲಿ ಕೆಲ ಸ್ಥಳೀಯ ಅಧಿಕಾರಿಗಳು ಮತ್ತು ಸ್ನೇಹಿತರು ಪ್ರೋತ್ಸಾಹ ನೀಡಿದರು. ಭಾರತದ ಪ್ರತಿ ಜಿಲ್ಲೆಯಲ್ಲಿ ರೋಟಿ ಬ್ಯಾಂಕ್‌ ಶಾಖೆ ತೆರೆಯುವ ಕನಸು ಕಂಡಿರುವ ಪಾಂಡೆ, ಇದುವರೆಗೂ ಸರ್ಕಾರದಿಂದ ಒಂದು ರೂಪಾಯಿಯ ಸಹಕಾರ ಪಡೆದಿಲ್ಲ, ಇದಕ್ಕಾಗಿ ದೇಣಿಗೆ ಅಥವಾ ಅನುದಾನವನ್ನು ಪಡೆದಿಲ್ಲ. ಸಾರ್ವಜನಿಕರ ಸಹಕಾರದಿಂದಲೇ ಸಂಸ್ಥೆ ನಡೆಯುತ್ತಿದೆಎನ್ನುತ್ತಾರೆ.

ಕಾಂಗ್ರೆಸ್ ಪಕ್ಷದಲ್ಲೂ ಸಕ್ರಿಯರಾಗಿರುವ ಪಾಂಡೆ, ಬಡವರಿಗೆ ರೊಟ್ಟಿ ಹಂಚುವ ಅಭಿಯಾನವನ್ನೇ ತಮ್ಮ ಜೀವನದ ದೊಡ್ಡ ಗುರಿಯನ್ನಾಗಿ ಮಾಡಿಕೊಂಡಿದ್ದಾರೆ. ಅವರ ತಂದೆ ಶೈಲೇಶ್ ಪಾಂಡೆ ಹರ್ದೋಯಿಯಲ್ಲಿ ವಕೀಲರಾಗಿದ್ದಾರೆ ಮತ್ತು ತಾಯಿ ಗೃಹಿಣಿ.

ಐಆರ್‌ಬಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಮಾತನಾಡಿರುವ ಪಾಂಡೆ, ‘ಸ್ವಯಂಸೇವಕರು ಕುಟುಂಬಗಳಿಂದ ರೊಟ್ಟಿಗಳನ್ನು ಸಂಗ್ರಹಿಸುತ್ತಾರೆ. ತರಕಾರಿಗಳ ಡಿಷ್‌, ಉಪ್ಪಿನಕಾಯಿ ಮತ್ತು ಮೆಣಸಿನಕಾಯಿಯ ಜೊತೆ ನಾಲ್ಕು ರೊಟ್ಟಿಗಳನ್ನು ಪ್ಯಾಕ್ ಮಾಡುತ್ತಾರೆ. ಈ ಪ್ಯಾಕೆಟ್‌ಗಳನ್ನು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಮತ್ತು ಸಾರ್ವಜನಿಕ ಸ್ಥಳಗಳಲ್ಲಿರುವ ಭಿಕ್ಷುಕರು ಮತ್ತು ಹಸಿದವರು ಮತ್ತು ನಿರ್ಗತಿಕರಿಗೆ ವಿತರಿಸಲಾಗುತ್ತದೆ. ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಐಆರ್‌ಬಿ ತಂಡಗಳು ಪ್ರತಿ ವಾರ ಸರಾಸರಿ 50,000 ರೊಟ್ಟಿಗಳನ್ನು ಜನರಿಂದ ಸಂಗ್ರಹಿಸುತ್ತವೆ. ಕೆಲವರು ಅಕ್ಕಿ ಮತ್ತು ಇತರ ಆಹಾರ ಪದಾರ್ಥಗಳನ್ನೂ ನೀಡುತ್ತಾರೆ’ ಎನ್ನುತ್ತಾರೆ ಪಾಂಡೆ.

ಇಂಡಿಯನ್ ರೋಟಿ ಬ್ಯಾಂಕ್ ತನ್ನ ಜಾಲವನ್ನು ವಾಟ್ಸಾಪ್ ಮೂಲಕ ನಿರ್ವಹಿಸುತ್ತದೆ. ಕಳೆದ ಏಳು ವರ್ಷಗಳಲ್ಲಿ ಅನೇಕರು ಉತ್ಸಾಹದಿಂದ ಐಆರ್‌ಬಿಗೆ ಸೇರಿದ್ದಾರೆ. ಇವರಲ್ಲಿ ಕೆಲವರು ಯಶಸ್ಸಿನ ರುಚಿ ಕಂಡ ನಂತರ ಸಂಸ್ಥೆ ತೊರೆದು ರೊಟ್ಟಿ ಹಂಚುವ ಮೂಲಕವೇ ಕಾರ್ಪೋರೇಟರ್‌ಗಳಾಗಿದ್ದಾರೆ ಎನ್ನುವುದು ಪಾಂಡೆ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT