ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಲೈಂಗಿಕ ದೌರ್ಜನ್ಯ ಪ್ರಕರಣ| ಬಾಲಕಿ ಗಂಭೀರ, ಮತ್ತೊಂದು ಶಸ್ತ್ರಚಿಕಿತ್ಸೆ

Last Updated 7 ಆಗಸ್ಟ್ 2020, 14:19 IST
ಅಕ್ಷರ ಗಾತ್ರ

ನವದೆಹಲಿ: ಲೈಂಗಿಕ ದೌರ್ಜನ್ಯಕ್ಕೊಳಗಾಗಿ, ತೀವ್ರ ಹಲ್ಲೆಗೆ ಒಳಗಾಗಿರುವ 12 ವರ್ಷದ ದೆಹಲಿ ಬಾಲಕಿಗೆ ಮತ್ತೊಂದು ಶಸ್ತ್ರಚಿಕಿತ್ಸೆ ಅಗತ್ಯವಿದೆ. ಅಲ್ಲದೆ, ಆಕೆಯ ಸ್ಥಿತಿಯು ಗಂಭೀರವಾಗಿದೆ ಎನ್ನಲಾಗಿದೆ.

‘ಆಕೆಯ ದೇಹದಲ್ಲಿ ಬಿಳಿ ರಕ್ತ ಕಣಗಳು (ಪ್ಲೇಟ್‌ಲೆಟ್) ಕಡಿಮೆ ಇದ್ದು, ಆಸ್ಪತ್ರೆಯ ನರರೋಗ ವಿಭಾಗದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ,’ ಎಂದು ಏಮ್ಸ್‌ ಆಸ್ಪತ್ರೆಯ ಉನ್ನತ ಮೂಲಗಳ ಮಾಹಿತಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

‘ಆಕೆಯನ್ನು ನರರೋಗಶಸ್ತ್ರ ವಿಭಾಗದ ಐಸಿಯುನಲ್ಲಿ ಇರಿಸಲಾಗಿದೆ. ತಲೆಗೆ ತೀವ್ರ ಪೆಟ್ಟುಗಳಾಗಿವೆ. ಆಕೆಗೆ ಮತ್ತೊಂದು ಶಸ್ತ್ರಚಿಕಿತ್ಸೆ ಆಗತ್ಯವಿದೆ. ಆದರೆ ಪ್ಲೇಟ್‌ಲೆಟ್ ಸಂಖ್ಯೆ ತುಂಬಾ ಕಡಿಮೆಯಾಗಿದೆ. ದೇಹಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ,’ ಎಂದು ಮೂಲಗಳು ತಿಳಿಸಿವೆ.

‘ಸಂತ್ರಸ್ತ ಬಾಲಕಿಯ ಗುದನಾಳ ಮತ್ತು ಕರುಳಿಗೆ ಚೂಪಾದ ಸರಳಿನಿಂದ ತೀವ್ರವಾದ ಗಾಯ ಮಾಡಲಾಗಿದೆ. ಇದಕ್ಕಾಗಿ ಆಕೆಗೆ ತಕ್ಷಣದ ಚಿಕಿತ್ಸೆ ಅಗತ್ಯವಿತ್ತು. ಆಕೆ ಆಸ್ಪತ್ರೆಗೆ ತಲುಪಿದ ಕೂಡಲೇ ಶಸ್ತ್ರಚಿಕಿತ್ಸೆ ಮಾಡಲಾಯಿತು,’ ಎಂದು ಏಮ್ಸ್ ಹಿರಿಯ ವೈದ್ಯರೊಬ್ಬರು ಗುರುವಾರ ಹೇಳಿದ್ದಾರೆ.

ಪಶ್ಚಿಮ ದೆಹಲಿಯಲ್ಲಿ ಮಂಗಳವಾರ ಈ ಕೃತ್ಯ ನಡೆದಿದೆ. ಮನೆಯಲ್ಲಿದ್ದ ಬಾಲಕಿ ಮೇಲೆ 33 ವರ್ಷದ ಕ್ರಿಶನ್ ಲೈಂಗಿಕ ದೌರ್ಜನ್ಯ ಎಸಗಿದ್ದ. ಅಲ್ಲದೆ, ತೀಕ್ಷ್ಣವಾದ ವಸ್ತುವಿನಿಂದ ಮುಖ ಮತ್ತು ತಲೆ ಮೇಲೆ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದ. ಪೊಲೀಸರು ಗುರುವಾರ ಕ್ರಿಶನ್‌ನನ್ನು ಬಂದಿಸಿದ್ದಾರೆ.

ದೆಹಲಿಯಲ್ಲಿ 2012ರಲ್ಲಿ ನಡೆದಿದ್ದ ನಿರ್ಭಯಾ ಸಾಮಾಹಿಕ ಅತ್ಯಾಚಾರ ಪ್ರಕರಣವನ್ನೇ ಈ ಪ್ರಕರಣವೂ ಹೋಲುತ್ತಿದ್ದು, ದೆಹಲಿಯಲ್ಲಿ ಸಾರ್ವಜನಿಕರು ಬೆಚ್ಚಿಬೀಳುವಂತೆ ಮಾಡಿದೆ. ಸ್ವತಃ ಮುಖ್ಯಮಂತ್ರಿಯೇ ಈ ಪ್ರಕರಣವನ್ನು ಬರ್ಬರ ಕೃತ್ಯ ಎಂದು ಹೇಳಿದ್ದಾರೆ.

ಬಂಧಿತ ಪೊಲೀಸರ ಬಳಿ ಹೇಳಿದ್ದೇನು?

ಗುರುವಾರ ದೆಹಲಿ ಪೊಲೀಸರು ಕ್ರಿಶನ್‌ನನ್ನು ಬಂಧಿಸಿದ್ದಾರೆ. ಕಳ್ಳತನದ ಉದ್ದೇಶದಿಂದ ಮಂಗಳವಾರ ಬಾಲಕಿಯ ಮನೆಗೆ ಪ್ರವೇಶಿಸಿದ್ದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.

ಮನೆಯ ಗೇಟ್‌ ಭಾಗಶಃ ತೆಗೆದಿದ್ದನ್ನು ನೋಡಿ ಆರೋಪಿ ಮನೆ ಪ್ರವೇಶಿಸಿದ್ದ. ನಂತರ ಮನೆಯಿಂದ ಸೂಟ್‌ಕೇಸ್‌ ತೆಗೆದುಕೊಂಡು ಹೊರಬರುತ್ತಿದ್ದಾಗ ಬಾಲಕಿ ಆರೋಪಿಯನ್ನು ನೋಡಿ ಅಲಾರಂ ಮಾಡಿದ್ದಾಳೆ. ಆಗ ಹೊಲಿಗೆ ಯಂತ್ರವನ್ನು ಆಕೆಯ ಮೇಲೆಸೆದ ಆರೋಪಿ, ನಂತರ ಕತ್ತರಿ ತೆಗೆದುಕೊಂಡು ಮೈ, ತಲೆ ಮೇಲೆ ದಾಳಿ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಆರೋಪಿ ಕ್ರಿಶನ್‌ 2006ರಲ್ಲೂ ಇದೇ ಮಾದರಿಯ ಕೃತ್ಯವೊಂದರಲ್ಲಿ ಭಾಗಿಯಾಗಿದ್ದ. ಮನೆಯೊಂದಕ್ಕೆ ನುಗ್ಗಿದ್ದ ಆತ ಕಳ್ಳತನ ಮಾಡಿ ಪರಾರಿಯಾಗುವ ವೇಳೆ ಮಹಿಳೆಯ ಮೇಲೆ ದಾಳಿ ಮಾಡಿದ್ದ. ಪರಿಣಾಮವಾಗಿ ಆಕೆ ಸಾವಿಗೀಡಾದ್ದರು. ಈ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದ ಎನ್ನಲಾಗಿದೆ. ಪೊಲೀಸರು ಆರೋಪಿ ನೀಡಿರುವ ಹೇಳಿಕೆಗಳ ನಿಟ್ಟಿನಲ್ಲೂ ತನಿಖೆ ಕೈಗೊಂಡಿದ್ದಾರೆ.

ಅರವಿಂದ ಕೇಜ್ರಿವಾಲ್‌ ಟ್ವೀಟ್‌

ಪ್ರಕರಣದ ಕುರಿತು ಶುಕ್ರವಾರ ಟ್ವೀಟ್‌ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ‘ಲೈಂಗಿಕ ದೌರ್ಜನ್ಯಕ್ಕೀಡಾದ 12 ವರ್ಷದ ಬಾಲಕಿಯ ಕುರಿತು ವೈದ್ಯರು ಮತ್ತು ಪೋಷಕರೊಂದಿಗೆ ಮಾತನಾಡಿದೆ. ನಿನ್ನೆ ಆಸ್ಪತ್ರೆಗೆ ಭೇಟಿ ನೀಡಿ ಬಂದಿದ್ದೆ. ಆಕೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ವೈದ್ಯರೂ ಅವರ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಆಕೆಯ ಕ್ಷೇಮಕ್ಕಾಗಿ ಎಲ್ಲರೂ ಪ್ರಾರ್ಥಿಸಿ. ಈ ಮಧ್ಯೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ,’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT