ಶುಕ್ರವಾರ, ಏಪ್ರಿಲ್ 23, 2021
28 °C

ಲೈಂಗಿಕ ಕಿರುಕುಳ ಪ್ರಕರಣಗಳನ್ನು ಮುಚ್ಚಿಡಲು ಅಸಾಧ್ಯ: ಸುಪ್ರೀಂ ಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಲೈಂಗಿಕ ಕಿರುಕುಳದ ಪ್ರಕರಣಗಳನ್ನು ಯಾವುದೇ ರೀತಿಯಲ್ಲೂ ಮುಚ್ಚಿಡಲು ಸಾಧ್ಯವಾಗದು’ ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಹೇಳಿದೆ.

ಲೈಂಗಿಕ ಕಿರುಕುಳದ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಜಿಲ್ಲಾ ನಿವೃತ್ತ ನ್ಯಾಯಾಧೀಶರೊಬ್ಬರ ವಿರುದ್ಧ ಮಧ್ಯಪ್ರದೇಶ ಹೈಕೋರ್ಟ್ ಜಾರಿಗೊಳಿಸಿರುವ ಆಂತರಿಕ ಇಲಾಖಾ ತನಿಖೆಯನ್ನು ರದ್ದುಗೊಳಿಸಲು ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆ ಮಾಡಲು ಸಹ ಕೋರ್ಟ್ ನಿರಾಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಣಿಯನ್ ಅವರನ್ನೊಳಗೊಂಡ ನ್ಯಾಯಪೀಠವು, ‘ನಾವು ಯಾವುದೇ ರೀತಿಯ ಲೈಂಗಿಕ ಕಿರುಕುಳದಂಥ ಪ್ರಕರಣಗಳನ್ನು ಮುಚ್ಚಿಡಲು ಅನುಮತಿ ನೀಡುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದೆ.

ಮಧ್ಯಪ್ರದೇಶದ ನಿವೃತ್ತ ನ್ಯಾಯಾಧೀಶ ಶಂಭೂ ಸಿಂಗ್ ರಘುವಂಶಿ ಅವರು ಕಿರಿಯ ಮಹಿಳಾ ನ್ಯಾಯಾಂಗ ಅಧಿಕಾರಿಯೊಬ್ಬರಿಗೆ ವ್ಯಾಟ್ಸ್‌ಆ್ಯಪ್‌ನಲ್ಲಿ ಅನುಚಿತವಾದ ಸಂದೇಶಗಳನ್ನು ಕಳುಹಿಸಿದ್ದರು. ಈ ಸಂಬಂಧ ಅಧಿಕಾರಿಯು ದೂರು ಸಲ್ಲಿಸಿದ್ದರು. ಹೀಗಾಗಿ, ಜಿಲ್ಲಾ ನಿವೃತ್ತ ನ್ಯಾಯಾಧೀಶರ ವಿರುದ್ಧ ಮಧ್ಯಪ್ರದೇಶ ಹೈಕೋರ್ಟ್ ಆಂತರಿಕ ಇಲಾಖಾ ತನಿಖೆಗೆ ಆದೇಶ ನೀಡಿತ್ತು. ಈ ಆದೇಶವನ್ನು ರದ್ದುಗೊಳಿಸಲು ಕೋರಿ ನಿವೃತ್ತ ನ್ಯಾಯಾಧೀಶರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಅಲ್ಲದೇ, ದೂರು ನೀಡಿದ್ದ ಅಧಿಕಾರಿಯು ತಮ್ಮ ಅರ್ಜಿಯನ್ನು ಹಿಂಪಡೆಯಲು ಮನವಿ ಮಾಡಿದ್ದರು.

ಫೆ. 16ರಂದು ನಡೆದ ನ್ಯಾಯಾಲಯದ ವಿಚಾರಣೆಯಲ್ಲಿ ನಿವೃತ್ತ ನ್ಯಾಯಾಧೀಶರು ತಮ್ಮ ಕಿರಿಯ ಅಧಿಕಾರಿಗೆ ವಾಟ್ಸ್ ಆ್ಯಪ್‌ನಲ್ಲಿ ಅನುಚಿತವಾದ ಸಂದೇಶಗಳನ್ನು ಕಳಹಿಸಿದ್ದನ್ನು ಒಪ್ಪಿಕೊಂಡಿದ್ದರು. ಅಲ್ಲದೇ ತಮ್ಮದು ಕೇವಲ ‘ಫ್ಲರ್ಟಿಂಗ್’ ಎಂದೂ ಸಮರ್ಥನೆ ಮಾಡಿಕೊಂಡಿದ್ದರು.

ಮುಖ್ಯ ನ್ಯಾಯಮೂರ್ತಿ ಬೊಬಡೆ ನೇತೃತ್ವದ ನ್ಯಾಯಪೀಠವು, ‘ನೀವೀಗ (ನಿವೃತ್ತ ನ್ಯಾಯಾಧೀಶ) ತೆಳುವಾದ ಹಗ್ಗದ ಮೇಲಿದ್ದೀರಿ. ನೀವು ಯಾವಾಗ ಬೇಕಾದರೂ ಕೆಳಗೆ ಬೀಳುವ ಸಾಧ್ಯತೆ ಇದೆ. ಆಂತರಿಕ ತನಿಖೆ ವಿಚಾರಣೆಯಲ್ಲಿ ನೀವು ಖುಲಾಸೆಗೊಳ್ಳಬಹುದು. ಆದರೆ, ನೀವು ಈಗಾಗಲೇ ಈ ಪರಿಸ್ಥಿತಿಯಲ್ಲಿ ಶಿಕ್ಷೆಗೊಳಗಾಗಿದ್ದೀರಿ’ ಎಂದು ತಿಳಿಸಿದ ಪೀಠವು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಕಿರಿಯ ಅಧಿಕಾರಿಯ ಜತೆ ‘ಫ್ಲರ್ಟ್‌’ ಮಾಡುವುದು ನ್ಯಾಯಾಧೀಶರ ನಡವಳಿಕೆಗೆ ತಕ್ಕುದಲ್ಲ. ಇಂತಹ ನಡವಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಪೀಠವು ಹೇಳಿದೆ.

ಬಳಿಕ, ನಿವೃತ್ತ ನ್ಯಾಯಾಧೀಶರ ಪರ ವಕೀಲರು ತಮ್ಮ ಅರ್ಜಿಯನ್ನು ವಾಪಸ್‌ ಪಡೆದರು. ‘ಆರೋಪಿ ನಿವೃತ್ತ ನ್ಯಾಯಾಧೀಶರು 32 ವರ್ಷಗಳ ವೃತ್ತಿ ಬದುಕನ್ನು ಪೂರೈಸಿದ್ದಾರೆ. ಅಲ್ಲದೇ, ಅವರು ಹೈಕೋರ್ಟ್‌ಗೆ ನೇಮಕವಾಗುವ ಸಾಧ್ಯತೆಯೂ ಇತ್ತು. ಆದರೆ, 2018ರಲ್ಲಿ ಅವರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದ್ದರಿಂದ ಅವರ ವಿರುದ್ಧ ತನಿಖೆಯನ್ನು ಕೈಗೊಳ್ಳಲಾಯಿತು. ಇದರಿಂದಾಗಿ ನಿವೃತ್ತ ನ್ಯಾಯಾಧೀಶರು ತಮ್ಮ ನಿವೃತ್ತಿಯ ಅಂಚಿನಲ್ಲಿ ಮುಜುಗರಕ್ಕೊಳಗಾಗಬೇಕಾಯಿತು’ ಎಂದು ಆರೋಪಿ ಪರ ವಕೀಲರು ಅರ್ಜಿಯಲ್ಲಿ ತಿಳಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು