ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹10 ಲಕ್ಷಕ್ಕೆ ಕುಸಿದ ಶಬರಿಮಲೆ ಆದಾಯ

ಭಕ್ತರ ಸಂಖ್ಯೆ ಹೆಚ್ಚಿಸಲು ಆಡಳಿತ ಮಂಡಳಿ ಮನವಿ
Last Updated 22 ನವೆಂಬರ್ 2020, 18:25 IST
ಅಕ್ಷರ ಗಾತ್ರ

ತಿರುವನಂತಪುರ: ಕೋವಿಡ್‌ನಿಂದಾಗಿ ಶಬರಿಮಲೆಗೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿರುವುದರಿಂದ ದೇವಸ್ಥಾನದ ಆದಾಯವು ಗಣನೀಯವಾಗಿ ಇಳಿಮುಖವಾಗಿದೆ. ಇದರಿಂದಾಗಿ ದೇವಸ್ಥಾನದ ನಿರ್ವಹಣೆ ಕಷ್ಟವಾಗುತ್ತಿದ್ದು, ಕೋವಿಡ್‌ ನಿಯಮಾವಳಿಗಳನ್ನು ಸಡಿಲಿಸುವಂತೆ ಮತ್ತು ದೇವಸ್ಥಾನಕ್ಕೆ ಆರ್ಥಿಕ ನೆರವು ನೀಡುವಂತೆ ದೇವಸ್ಥಾನದ ಆಡಳಿತ ನಡೆಸುವ ತಿರುವಾಂಕೂರ್‌ ದೇವಸ್ವಂ ಮಂಡಳಿ ಸರ್ಕಾರಕ್ಕೆ ಮನವಿ ಮಾಡಿದೆ.

ಪ್ರಸಕ್ತ ಸಾಲಿನ ದರ್ಶನವು ಕಳೆದ ಸೋಮವಾರ ಆರಂಭವಾಗಿದ್ದು ಜನವರಿ ವೇಳೆಗೆ ಅಂತ್ಯಗೊಳ್ಳಲಿದೆ. ಭಕ್ತರಿಂದ ಬರುತ್ತಿದ್ದ ಆದಾಯವು ₹ 3.5 ಕೋಟಿಯಿಂದ ಈ ಬಾರಿ ₹ 10 ಲಕ್ಷಕ್ಕೆ ಇಳಿದಿದೆ. ಸಾಮಾನ್ಯ ದಿನಗಳಲ್ಲಿ ದಿನಕ್ಕೆ 1000 ಭಕ್ತರಿಗೆ ಹಾಗೂ ವಾರಾಂತ್ಯದಲ್ಲಿ 2000 ಭಕ್ತರಿಗೆ ಮಾತ್ರ ಈಗ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಮಂಡಲಪೂಜೆ, ಮಕರವಿಳಕ್ಕು ಮುಂತಾದ ವಿಶೇಷ ಸಂದರ್ಭಗಳಲ್ಲಿ 5000 ಮಂದಿಗೆ ಅವಕಾಶ ನೀಡಲಾಗುತ್ತಿದೆ.

‘ಹಿಂದೆಲ್ಲ ಪ್ರತಿದಿನ 50,000 ಭಕ್ತರು ಭೇಟಿ ನೀಡುತ್ತಿದ್ದರು. ಒಂದೇ ದಿನ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಬಂದ ಉದಾಹರಣೆಗಳಿವೆ. ಈಗ ಒಂದು ಸಾವಿರ ಭಕ್ತರು ಮಾತ್ರ ಬರುತ್ತಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ದಿನನಿತ್ಯದ ಅಗತ್ಯಗಳನ್ನು ಪೂರೈಸಲೂ ಕಷ್ಟವಾಗಬಹುದು. ಮಂಡಳಿಯ ಸದಸ್ಯರ ವೇತನ ಹೊರತುಪಡಿಸಿ ದೇವಸ್ಥಾನದಲ್ಲಿ ತಿಂಗಳಿಗೆ ಕನಿಷ್ಠ ₹ 50 ಲಕ್ಷ ವೆಚ್ಚ ಬರುತ್ತದೆ’ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಎನ್‌. ವಾಸು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಈಗ ಪ್ರತಿದಿನ 14 ಗಂಟೆಗಳ ಕಾಲ ದೇವರ ದರ್ಶನಕ್ಕೆ ಅವಕಾಶ ಇರುವುದರಿಂದ ಅಂತರ ಕಾಯ್ದುಕೊಳ್ಳುವಂಥ ನಿಯಮಗಳನ್ನು ಪಾಲಿಸುವ ಮೂಲಕವೇ ಭಕ್ತರ ಸಂಖ್ಯಯನ್ನು ಹೆಚ್ಚಿಸಬಹುದು. ಆರೋಗ್ಯ ಇಲಾಖೆ ಹಾಗೂ ಇತರ ಸಂಬಂಧಪಟ್ಟವರು ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು.

ಈವರೆಗೆ ದೇವಸ್ಥಾನಕ್ಕೆ ಭೇಟಿನೀಡಿದ್ದ ಭಕ್ತರಲ್ಲಿ 20 ಮಂದಿಗೆ ಕೋವಿಡ್‌ ಇರುವುದು ದೇವಸ್ಥಾನದ ಸಮೀಪ ನಡೆಸಿದ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇಂಥವರು ಮತ್ತು ಅವರ ಜತೆಗೆ ಬಂದವರಿಗೆ ದರ್ಶನಕ್ಕೆ ಅವಕಾಶ ನೀಡದೆ ಮರಳಿ ಕಳುಹಿಸಲಾಗಿದೆ. ಬೇರೆ ರಾಜ್ಯಗಳಿಂದ ಬರುವ ಎಲ್ಲಾ ಭಕ್ತರನ್ನು ದೇವಸ್ಥಾನದ ಸಮೀಪ ನಿರ್ಮಿಸಲಾಗಿರುವ ಬೇಸ್‌ ಕ್ಯಾಂಪ್‌ನಲ್ಲಿ ಆ್ಯಂಟಿಜೆನ್‌ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ದೇವಸ್ಥಾನದ ಖರ್ಚುವೆಚ್ಚಗಳನ್ನು ಸರಿದೂಗಿಸುವ ಸಲುವಾಗಿ ಭಕ್ತರಿಂದ ಕಾಣಿಕೆಯ ರೂಪದಲ್ಲಿ ಬಂದಿರುವ ಚಿನ್ನ, ಬೆಳ್ಳಿಯನ್ನು ಆರ್‌ಬಿಐ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವ ಬಗ್ಗೆಯೂ ಆಡಳಿತ ಮಂಡಳಿ ಚಿಂತನೆ ನಡೆಸುತ್ತಿದೆ.

ಈನಡುವೆ, ‘ಭಕ್ತರ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದು ಕೇರಳ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT