ಮಂಗಳವಾರ, ಆಗಸ್ಟ್ 16, 2022
20 °C

ಪೆಗಾಸಸ್ ಗೂಢಚರ್ಯೆ: ಸಂಸದೀಯ ಸ್ಥಾಯಿ ಸಮಿತಿ ವಿಚಾರಣೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪೆಗಾಸಸ್ ಗೂಢಚರ್ಯೆಗೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಇದೇ 28ರಂದು ಸಭೆ ನಡೆಸಲಿದೆ. ಪೆಗಾಸಸ್ ಗೂಢಚರ್ಯೆಗೆ ಸಂಬಂಧಿಸಿದಂತೆ ಗೃಹ ಸಚಿವಾಲಯ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿಗಳನ್ನು ಸಭೆಯಲ್ಲಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ನಾಗರಿಕರ ದತ್ತಾಂಶ ಭದ್ರತೆ ಮತ್ತು ಸೈಬರ್ ಭದ್ರತೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಅದೇ ಸಭೆಯಲ್ಲಿ ಪೆಗಾಸಸ್ ಗೂಢಚರ್ಯೆ ವಿಚಾರವನ್ನೂ ಚರ್ಚೆಗೆ ಎತ್ತಿಕೊಳ್ಳಲು ವಿರೋಧ ಪಕ್ಷಗಳ ಸದಸ್ಯರು ನಿರ್ಧರಿಸಿದ್ದಾರೆ. ನಾಗರಿಕರ ದತ್ತಾಂಶ ಮತ್ತು ಖಾಸಗಿತನದ ಭದ್ರತೆಗೆ ಸಂಬಂಧಿಸಿದಂತೆ ಗೃಹ ಸಚಿವಾಲಯ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿ
ಗಳಿಂದ ವಿವರಣೆ ಕೇಳಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಈ ಬಗ್ಗೆ ಸಮಿತಿಯ ಅಧ್ಯಕ್ಷ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರೂ ಮಾಹಿತಿ ನೀಡಿದ್ದಾರೆ.

‘ದೇಶದ ನಾಗರಿಕರ ವಿರುದ್ಧ ಗೂಢಚರ್ಯೆ ನಡೆಸಿರುವುದು ಸರ್ಕಾರವೇ ಎಂಬುದು ಸಾಬೀತಾದರೆ, ಸರ್ಕಾರವು ಆ ಬಗ್ಗೆ ವಿವರಣೆ ನೀಡಬೇಕಾಗುತ್ತದೆ’ ಎಂದು ತರೂರ್‌ ಹೇಳಿದರು.

‘ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತ್ರ ಗೂಢಚರ್ಯೆ ನಡೆಸಲು ಕಾನೂನಿನಲ್ಲಿ ಅವಕಾಶವಿದೆ. ಅದಲ್ಲದೆ, ಬೇರೆ ರೀತಿಯ ಗೂಢಚರ್ಯೆ ನಡೆಸಿದ್ದರೆ ಅದು ಸಂಪೂರ್ಣ ಕಾನೂನು ಬಾಹಿರ. ಈ ಬಗ್ಗೆ ತನಿಖೆ ನಡೆದರೆ, ತನಿಖೆಗೆ ಸರ್ಕಾರವು ಸಹಕಾರ ನೀಡಬೇಕಾಗುತ್ತದೆ’ ಎಂದು ತರೂರ್ ಹೇಳಿದ್ದಾರೆ.

‘ಗೂಢಚರ್ಯೆಗೆ ಗುರಿಯಾಗಿದ್ದ ಭಾರತೀಯರ ಫೋನ್‌ಗಳಲ್ಲಿ ಪೆಗಾಸಸ್ ಅಳವಡಿಕೆಯಾಗಿತ್ತು ಎಂಬುದು ಸಾಬೀತಾಗಿದೆ. ಪೆಗಾಸಸ್ ಅನ್ನು ಸರ್ಕಾರಗಳಿಗೆ ಮಾತ್ರವೇ ಮಾರಾಟ ಮಾಡಲಾಗುತ್ತದೆ. ಹೀಗಿದ್ದಾಗ ಭಾರತೀಯರ ಫೋನ್‌ಗಳ ಗೂಢಚರ್ಯೆ ನಡೆಸಿದ್ದು ಯಾವ ಸರ್ಕಾರ ಎಂಬ ಪ್ರಶ್ನೆ ಮೂಡುತ್ತದೆ. ನಾವು ಗೂಢಚರ್ಯೆ ನಡೆಸಿಲ್ಲ ಎಂದು ನಮ್ಮ ಸರ್ಕಾರ ಹೇಳುವುದಾದರೆ, ಬೇರೆ ಸರ್ಕಾರ ಗೂಢ
ಚರ್ಯೆ ನಡೆಸಿದೆ ಎಂದಲ್ಲವೇ? ಬೇರೆ ಸರ್ಕಾರವೇ ಗೂಢಚರ್ಯೆ ನಡೆಸಿದ್ದರೆ ಅದು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಅತ್ಯಂತ ಗಂಭೀರ ಕಳವಳ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

2018-2019ರ ಅವಧಿಯಲ್ಲಿ ಪೆಗಾಸಸ್ ಕಣ್ಗಾವಲು ತಂತ್ರಾಂಶದ ಮೂಲಕ ಗೂಢಚರ್ಯೆಯ ಗುರಿಯಾಗಿದ್ದವರ ವಿವರಕ್ಕೆ ಸಂಬಂಧಿಸಿದ ದತ್ತಾಂಶವನ್ನು ಫ್ರಾನ್ಸ್‌ನ ಫಾರ್‌ಬಿಡನ್‌ ಸ್ಟೋರೀಸ್‌ ಎಂಬ ತನಿಖಾ ಸಂಸ್ಥೆ ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆ ಬಹಿರಂಗಪಡಿಸಿದ್ದವು.

ಇದನ್ನು ಭಾರತದ ದಿ ವೈರ್ ಪೋರ್ಟಲ್ ಸೇರಿ ವಿಶ್ವದಾದ್ಯಂತ 15 ಮಾಧ್ಯಮ ಸಂಸ್ಥೆಗಳು ಏಕಕಾಲಕ್ಕೆ ಪ್ರಕಟಿಸಿದ್ದವು. ವಿರೋಧ ಪಕ್ಷಗಳ ನಾಯಕರು, ಪತ್ರಕರ್ತರು, ಕೇಂದ್ರ ಸಚಿವರು, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮತ್ತು ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಿಗಳು ಆ ಗೂಢಚರ್ಯೆಯ ಗುರಿಯಾಗಿದ್ದರು ಎಂಬುದನ್ನು ಈ ವರದಿಗಳ ಬಹಿರಂಗಪಡಿಸಿದ್ದವು.

ಇದೇ ಮೊದಲಲ್ಲ...

ಭಾರತೀಯರ ಮೇಲೆ ಪೆಗಾಸಸ್ ಮೂಲಕ ಗೂಢಚರ್ಯೆ ನಡೆಸಿದ್ದರ ಬಗ್ಗೆ ಈ ಸಮಿತಿಯು ಸಭೆ ನಡೆಸಿದ್ದು ಇದೇ ಮೊದಲಲ್ಲ. 2019ರಲ್ಲೂ ಈ ಸಮಿತಿಯು ಈ ಬಗ್ಗೆ ಸಭೆ ನಡೆಸಿತ್ತು. ಕೇಂದ್ರ ಸರ್ಕಾರವು ಭಾರತೀಯರ ಮೇಲೆ ಪೆಗಾಸಸ್ ಮೂಲಕ ಗೂಢಚರ್ಯೆ ನಡೆಸಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದರು. ಈ ವಿಚಾರವನ್ನು ಚರ್ಚೆ ನಡೆಸಲು ಸಮಿತಿಯು ಸಭೆ ನಡೆಸಿತ್ತು. ಸಮಿತಿಯಲ್ಲಿದ್ದ ಬಿಜೆಪಿ ಸದಸ್ಯರು ಚರ್ಚೆ ನಡೆಸುವುದು ಬೇಡ ಎಂದು ಮತ ಹಾಕಿದ್ದರು. ಆದರೆ ಚರ್ಚೆ ನಡೆಸಲು ಸಮಿತಿಯ ಇತರ ಸದಸ್ಯರು ಒಪ್ಪಿಗೆ ಸೂಚಿಸಿದ್ದರು. ಹೀಗಾಗಿ ಸಮಿತಿಯು ಚರ್ಚೆ ಕೈಗೆತ್ತಿಕೊಂಡಿತ್ತು.

ಚರ್ಚೆಯ ಭಾಗವಾಗಿ ಕೇಂದ್ರ ಗೃಹ ಸಚಿವಾಲಯ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. 121 ಭಾರತೀಯರನ್ನು ಪೆಗಾಸಸ್ ಮೂಲಕ ಗೂಢಚರ್ಯೆಗೆ ಒಳಪಡಿಸಲಾಗಿತ್ತು ಎಂದು ಸರ್ಕಾರವು ಒಪ್ಪಿಕೊಂಡಿತ್ತು. ಆದರೆ ಆ 121 ಮಂದಿ ಯಾರು ಎಂಬುದನ್ನು ಸರ್ಕಾರವು ಬಹಿರಂಗಪಡಿಸಿರಲಿಲ್ಲ.

ಕಾಂಗ್ರೆಸ್‌ನ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಹಲವು ಪತ್ರಕರ್ತರು ಮತ್ತು ಹಲವು ಸಾಮಾಜಿಕ ಕಾರ್ಯಕರ್ತರನ್ನು ಗೂಢಚರ್ಯೆಗೆ ಒಳಪಡಿಸಲಾಗಿತ್ತು ಎಂದು ಮಾಧ್ಯಮಗಳ ತನಿಖಾ ವರದಿಗಳು ಹೇಳಿದ್ದವು.

'ಗೂಢಚರ್ಯೆ ಪ್ರಜಾಪ್ರಭುತ್ವಕ್ಕೆ ಮಾರಕ'

ಪೆಗಾಸಸ್ ಮೂಲಕ ಗೂಢಚರ್ಯೆ ನಡೆಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಈ ಮೂಲಕ ಸರ್ಕಾರವು ಪೊಲೀಸ್ ರಾಜ್ಯವನ್ನು ಸೃಷ್ಟಿಸಲು ಹೊರಟಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಹುತಾತ್ಮರ ದಿನದ ಅಂಗವಾಗಿ ನಡೆಸಿದ ವರ್ಚುವಲ್ ಸಭೆಯಲ್ಲಿ ಅವರು ಈ ಮಾತು ಹೇಳಿದ್ದಾರೆ.

‘ಮಾಧ್ಯಮ, ನ್ಯಾಯಾಂಗ ಮತ್ತು ಚುನಾವಣಾ ಆಯೋಗಗಳಿಂದ ಪ್ರಜಾಪ್ರಭುತ್ವ ರೂಪುಗೊಳ್ಳುತ್ತದೆ. ಪೆಗಾಸಸ್ ಈ ಮೂರೂ ಅಂಗಗಳನ್ನು ಬಂಧಿಸಿದೆ. ಪೆಗಾಸಸ್ ಅತ್ಯಂತ ಅಪಾಯಕಾರಿ ಮತ್ತು ಭೀಕರವಾದ ತಂತ್ರಾಂಶ. ನನ್ನ ಫೋನ್‌ ಅನ್ನೂ ಕದ್ದಾಲಿಸುತ್ತಿರುವ ಕಾರಣ ವಿರೋಧ ಪಕ್ಷಗಳ ಬೇರೆ ನಾಯಕರ ಜತೆ ನಾನು ಫೋನ್‌ನಲ್ಲಿ ಮಾತನಾಡುತ್ತಿಲ್ಲ’ ಎಂದು ಮಮತಾ ಹೇಳಿದ್ದಾರೆ.

‘ನೋಡಿ, ಕದ್ದಾಲಿಕೆ ನಡೆಯುತ್ತಿರುವ ಕಾರಣ ನನ್ನ ಫೋನ್‌ನ ಕ್ಯಾಮೆರಾಗೆ ಪ್ಲಾಸ್ಟರ್ ಹಾಕಿದ್ದೇನೆ’ ಎಂದು ಪ್ಲಾಸ್ಟರ್ ಅಂಟಿಸಿದ್ದ ತಮ್ಮ ಫೋನ್‌ ಅನ್ನು ಅವರು ಪ್ರದರ್ಶಿಸಿದ್ದಾರೆ.

‘ಪೆಗಾಸಸ್ ಗೂಢಚರ್ಯೆ ಸಂಬಂಧ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು. ಎಲ್ಲರ ಫೋನ್‌ಗಳನ್ನೂ ಕದ್ದಾಲಿಸಲಾಗುತ್ತಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ತನಿಖಾ ಸಮಿತಿಯನ್ನು ರಚಿಸಬೇಕು. ನ್ಯಾಯಾಂಗ ಮಾತ್ರವೇ ದೇಶವನ್ನು ಕಾಪಾಡಬಲ್ಲದು’ ಎಂದು ಅವರು ಹೇಳಿದ್ದಾರೆ.

‘ಪ್ರಧಾನಿ ಮೋದಿ ಅವರೇ ನಾನು ನಿಮ್ಮ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿಲ್ಲ. ಆದರೆ ನೀವು ಮತ್ತು ನಿಮ್ಮ ಗೃಹ ಸಚಿವರು ವಿರೋಧ ಪಕ್ಷಗಳ ನಾಯಕರ ವಿರುದ್ಧ ಸರ್ಕಾರದ ಸಂಸ್ಥೆಗಳನ್ನು ಛೂಬಿಡುತ್ತಿದ್ದೀರಿ. ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ’ ಎಂದು ಮಮತಾ ಹರಿಹಾಯ್ದರು.

ನಾಚಿಕೆಗೇಡಿನ ಸಂಗತಿ: 'ನಲವತ್ತು ಪತ್ರಕರ್ತರು, ವಿರೋಧ ಪಕ್ಷಗಳ ನಾಯಕರ ವಿರುದ್ಧ ನರೇಂದ್ರ ಮೋದಿ ಅವರ ಸರ್ಕಾರ ಪೆಗಾಸಸ್ ಎಂಬ ಕುತಂತ್ರಾಂಶ ಬಳಸಿ ಗೂಢಚರ್ಯೆ ನಡೆಸಿದ್ದು ನಾಚಿಕೆಗೇಡಿನ ಕಾರ್ಯಸೂಚಿಯಾಗಿದೆ. ಈ ಕೃತ್ಯಕ್ಕೆ ಗುರಿಯಾದವರೆಲ್ಲರೂ ಮೋದಿ ಸರ್ಕಾರದ ನಡೆಯನ್ನು ಟೀಕಿಸಿದವರೇ ಆಗಿದ್ದಾರೆ ಎಂಬುದು ಗಮನಿಸಬೇಕಾದ ವಿಷಯ' ಎಂದು ಕಾಂಗ್ರೆಸ್ ನಾಯಕ ಪ್ರೊ.ಬಿ.ಕೆ.ಚಂದ್ರಶೇಖರ್ ಅವರು ಟೀಕಿಸಿದ್ದಾರೆ.

'ಸ್ಥಾಪಿತ ಸರ್ಕಾರಗಳಿಗೆ ಮಾತ್ರವೇ ಪೆಗಾಸಸ್ ತಂತ್ರಾಂಶವನ್ನು ಮಾರಾಟ ಮಾಡುವುದಾಗಿ ಇಸ್ರೇಲ್ ಕಂಪನಿ ಹೇಳಿದೆ. ಹಾಗಿರುವಾಗ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಕೂಡ ಈ ವಿಷಯವನ್ನು ಬಚ್ಚಿಡುವ ಪ್ರಯತ್ನ ನಡೆಸಿರುವುದು ಖಂಡನೀಯ ಹಾಗೂ ಹಾಸ್ಯಾಸ್ಪದ' ಎಂದು ಅವರು ಹೇಳಿದ್ದಾರೆ.

ತನಿಖೆಗೆ ಇಸ್ರೇಲ್ ಸಮಿತಿ

‘ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಮಾರಾಟ ಮಾಡಿರುವ ಪೆಗಾಸಸ್ ಕಣ್ಗಾವಲು ತಂತ್ರಾಂಶಕ್ಕೆ ಸಂಬಂಧಿಸಿದಂತೆ ಜಗತ್ತಿನ ವಿವಿಧೆಡೆ ಉಂಟಾಗಿರುವ ವಿವಾದದ ಪರಿಶೀಲನೆಗೆ ಇಸ್ರೇಲ್ ಸರ್ಕಾರವು ಉನ್ನತ ಸಮಿತಿಯೊಂದನ್ನು ರಚಿಸಿದೆ’ ಎಂದು ರಾಯಿಟರ್ಸ್ ವರದಿ ಮಾಡಿದೆ.

‘ಫ್ರಾನ್ಸ್, ಮೆಕ್ಸಿಕೊ, ಭಾರತ ಮತ್ತು ಇರಾಕ್‌ನಲ್ಲಿ ಪೆಗಾಸಸ್ ಅನ್ನು ಬಳಕೆ ಮಾಡಿರುವುದು ಇಸ್ರೇಲ್‌ಗೆ ರಾಜತಾಂತ್ರಿಕವಾಗಿ ಹಿನ್ನಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ಪೆಗಾಸಸ್ ತಂತ್ರಾಂಶವನ್ನು ಯಾರಿಗೆಲ್ಲಾ ಮಾರಾಟ ಮಾಡಲಾಗಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಫ್ರಾನ್ಸ್‌ನ ರಾಜಕೀಯ ಪ್ರಮುಖರ ವಿರುದ್ಧ ಗೂಢಚರ್ಯೆ ನಡೆಸಲು ಪೆಗಾಸಸ್ ತಂತ್ರಾಂಶ ಬಳಸಿಕೊಂಡಿರುವುದರ ವಿರುದ್ಧ ತನಿಖೆ ನಡೆಸಲು ಫ್ರಾನ್ಸ್ ಸರ್ಕಾರ ಆದೇಶಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು