ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಸೇನಾ ಭವನದಿಂದ ದೂರ ನಡೆದ ಶಿವಸೇನಾ

Last Updated 23 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

ಠಾಣೆ/ಮುಂಬೈ: ಮುಂಬೈನ ಬಾಂದ್ರಾದಲ್ಲಿನ ಮಾತೋಶ್ರಿ ಮತ್ತು ದಾದರ್‌ನಲ್ಲಿನ ಶಿವಸೇನಾ ಭವನ ಈವರೆಗೆ ಶಿವಸೇನಾದ ಶಕ್ತಿಕೇಂದ್ರಗಳಾಗಿದ್ದವು. ಪಕ್ಷದ ಸಂಸ್ಥಾಪಕ ಬಾಳಾ ಠಾಕ್ರೆ ಅವರ ನಿವಾಸವಾದ ಮಾತೋಶ್ರೀಯಲ್ಲಿ ಪಕ್ಷದ ಎಲ್ಲಾ ಕಾರ್ಯಚಟುವಟಿಕೆಗಳು ನಿರ್ಧಾರವಾಗುತ್ತಿದ್ದವು. ಅಂತದ್ದೇ ಮತ್ತೊಂದು ಸ್ಥಳ ಪಕ್ಷದ ಕೇಂದ್ರ ಕಚೇರಿಯಾಗಿದ್ದ ‘ಶಿವಸೇನಾ ಭವನ’. ಬಾಳಾ ಠಾಕ್ರೆ ನಿಧನದ ನಂತರ ಮಾತೋಶ್ರೀಯ ಮಹತ್ವ ಸ್ವಲ್ಪ ಕಡಿಮೆಯಾಗಿತ್ತು. ಆದರೆ, ಶಿವಸೇನಾ ಭವನವು ರಾಜ್ಯ ರಾಜಕಾರಣದಲ್ಲಿ ಪ್ರಬಲ ಶಕ್ತಿಕೇಂದ್ರವಾಗಿಯೇ ಉಳಿದಿತ್ತು. ಆದರೆ, ಈಗ ಆ ಭವನದಿಂದಲೇ ಶಿವಸೇನಾ ದೂರ ಸರಿದಿದೆ.

ಪಕ್ಷ ಇಬ್ಬಾಗವಾದುದನ್ನು ಎತ್ತಿಹಿಡಿದಿದ್ದ ಚುನಾವಣಾ ಆಯೋಗ ಏಕನಾಥ ಶಿಂದೆ ಬಣವೇ ಅಧಿಕೃತ ಶಿವಸೇನಾ ಎಂದು ಆದೇಶ ನೀಡಿತ್ತು. ಅಲ್ಲಿಂದ ಎಲ್ಲದರ ಬದಲಾವಣೆ ಆರಂಭವಾಗಿದೆ. ಏಕನಾಥ ಶಿಂದೆ ಬಣವೇ ಅಧಿಕೃತ ಶಿವಸೇನಾ ಎಂದು ಆಯೋಗ ತೀರ್ಪು ನೀಡಿದ್ದರೂ, ಶಿವಸೇನಾ ಭವನದ ಮೇಲೆ ಅದು ಹಕ್ಕು ಚಲಾಯಿಸುತ್ತಿಲ್ಲ. ಬದಲಿಗೆ ಮುಂಬೈನ ಪಕ್ಕದ ಠಾಣೆಯಲ್ಲಿ ಹೊಸ ಕಚೇರಿಯನ್ನು ಆರಂಭಿಸಿದೆ. ಅದನ್ನೇ ಪಕ್ಷದ ಕೇಂದ್ರ ಕಚೇರಿ ಎಂದೂ ಘೋಷಿಸಿದೆ.

ಮುಂಬೈನ ದಾದರ್‌ನ ಐತಿಹಾಸಿಕ ಶಿವಾಜಿ ಪಾರ್ಕ್‌ನಿಂದ ಕೂಗಳತೆ ದೂರದಲ್ಲಿರುವ ಶಿವಸೇನಾ ಭವನದಲ್ಲಿ ಪಕ್ಷದ ಕಟ್ಟಾಳುಗಳು ಮತ್ತು ಬಾಳಾ ಠಾಕ್ರೆ ಮಧ್ಯೆ ಮಹತ್ವದ ಸಭೆಗಳು ನಡೆಯುತ್ತಿದ್ದವು. ಪಕ್ಷದ ಸಿದ್ಧಾಂತಗಳು, ನಿಲುವುಗಳು, ಹೋರಾಟಗಳು ರೂಪುಗೊಂಡಿದ್ದರಲ್ಲಿ ಮಾತೋಶ್ರೀಯ ಪಾಲು ಎಷ್ಟಿದೆಯೋ ಅಷ್ಟೇ ಪಾಲು ಶಿವಸೇನಾ ಭವನಕ್ಕೂ ಇದೆ. ಅಂತಹ ಮಹತ್ವದ ಭವನದ ಮೇಲೆ ಶಿಂದೆ ಅವರು ಹಕ್ಕು ಚಲಾಯಿಸದೇ ಇರಲು ಕಾರಣಗಳಿವೆ.

ಶಿವಸೇನಾ ಭವನದ ಒಡೆತನವು ‘ಶ್ರೀ ಶಿವಾಯಿ ಸೇವಾ ಟ್ರಸ್ಟ್‌’ಗೆ ಸೇರಿದೆ. ಈ ಟ್ರಸ್ಟ್‌ ಠಾಕ್ರೆ ಕುಟುಂಬದ್ದು. ಹೀಗಾಗಿ ಟ್ರಸ್ಟ್‌ ಮತ್ತು ಶಿವಸೇನಾ ಭವನದ ಮೇಲೆ ಠಾಕ್ರೆ ಕುಟುಂಬಕ್ಕೆ ಬಿಗಿಹಿಡಿತವಿದೆ. ಶಿವಸೇನಾದ ಮುಖವಾಣಿಯಾದ ‘ಸಾಮ್ನಾ’, ‘ದೋಪಹರ್‌ ಕಾ ಸಾಮ್ನಾ’ ಮತ್ತು ವಾರಪತ್ರಿಕೆ ‘ಮಾರ್ಮಿಕ್‌’ ಅನ್ನು ಪ್ರಕಟಿಸುವ ಪ್ರಬೋಧನ್‌ ಪ್ರಕಾಶನ ಸಂಸ್ಥೆಯ ಒಡೆತನವೂ ಈ ಟ್ರಸ್ಟ್‌ನದ್ದೇ. ಈ ಎಲ್ಲಾ ಪತ್ರಿಕೆಗಳೂ ಠಾಕ್ರೆ ಕುಟುಂಬದ ಬಿಗಿಹಿಡಿತದಲ್ಲೇ ಇವೆ. ಹೀಗಾಗಿಯೇ ಶಿಂದೆ ಅವರು, ಈ ಭವನದ ಮೇಲೆ ಹಕ್ಕು ಚಲಾಯಿಸಿಲ್ಲ. ಬದಲಿಗೆ ಹೊಸ ಕೇಂದ್ರ ಕಚೇರಿಯನ್ನೇ ಆರಂಭಿಸಿದ್ದಾರೆ.

ಆನಂದ ಆಶ್ರಮದಲ್ಲಿ ಹೊಸ ಕಚೇರಿ

ಚುನಾವಣಾ ಆಯೋಗವು ತೀರ್ಪು ನೀಡುವುದಕ್ಕೂ ಮುನ್ನ, ಶಿಂದೆ ಬಣವು ಆನಂದ ಆಶ್ರಮದಲ್ಲೇ ಕಚೇರಿಯನ್ನು ಆರಂಭಿಸಿತ್ತು. ಈಗ ಅದೇ ಕಚೇರಿಯನ್ನು ಪಕ್ಷದ ಕೇಂದ್ರ ಕಚೇರಿ ಎಂದು ಘೋಷಿಸಲಾಗಿದೆ.

ಶಿವಸೇನಾದ ಇತಿಹಾಸದಲ್ಲಿ ಆನಂದ ಆಶ್ರಮಕ್ಕೂ ಮಹತ್ವದ ಸ್ಥಾನವಿದೆ. ಆನಂದ ಆಶ್ರಮವು, ಬಾಳಾ ಠಾಕ್ರೆ ಅವರ ಅತ್ಯಾಪ್ತರಲ್ಲಿ ಒಬ್ಬರಾಗಿದ್ದ ಆನಂದ್‌ ದಿಘೆ ಅವರ ಕೇಂದ್ರ ಕಚೇರಿಯಾಗಿತ್ತು ಮತ್ತು ಪ್ರಮುಖ ಕಾರ್ಯಸ್ಥಾನವಾಗಿತ್ತು. ಅವಿವಾಹಿತರಾಗಿಯೇ ಉಳಿದಿದ್ದ ದಿಘೆ ಅವರು ಸರಳತೆ, ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದರು. ದಿಘೆ ಅವರ ಗರಡಿಯಲ್ಲಿಯೇ ಏಕನಾಥ ಶಿಂದೆ ರಾಜಕೀಯ ನಾಯಕನಾಗಿ ರೂಪುಗೊಂಡಿದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT