ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯೋಗವನ್ನು ವಿಸರ್ಜಿಸಿ: ಉದ್ಧವ್‌ ಠಾಕ್ರೆ

Last Updated 20 ಫೆಬ್ರುವರಿ 2023, 22:00 IST
ಅಕ್ಷರ ಗಾತ್ರ

ಮುಂಬೈ : ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃ ತ್ವದ ಬಣವೇ ನಿಜವಾದ ಶಿವಸೇನಾ ಎಂದು ತೀರ್ಪು ಕೊಟ್ಟಿರುವ ಚುನಾವಣಾ ಆಯೋಗವನ್ನು ವಿಸರ್ಜಿಸಬೇಕು ಎಂದು ಶಿವಸೇನಾ (ಉದ್ಧವ್‌ ಬಾಳಾ ಠಾಕ್ರೆ) ಬಣದ ನಾಯಕ ಉದ್ಧವ್‌ ಠಾಕ್ರೆ ಸೋಮವಾರ ಹೇಳಿದ್ದಾರೆ.

‘ನಮ್ಮ ಹೆಸರು ಮತ್ತು ಚಿಹ್ನೆಯನ್ನು ಕದಿಯಲಾಗಿದೆ. ಆದರೆ, ಠಾಕ್ರೆ ಎಂಬ ಹೆಸರನ್ನು ಯಾರೂ ಕದಿಯಲಾಗದು’ ಎಂದಿದ್ದಾರೆ.

‘ಚುನಾವಣಾ ಆಯೋಗದ ತೀರ್ಪು ತಪ್ಪು. ಈಗ, ಸುಪ್ರೀಂ ಕೋರ್ಟ್ ನಮ್ಮ ಮುಂದಿರುವ ಏಕೈಕ ಆಶಾಕಿರಣ. ಹೆಸರು ಮತ್ತು ಚಿಹ್ನೆಯನ್ನು ಒಂದು ಬಣಕ್ಕೆ ನೇರವಾಗಿ ನೀಡಿದ ಒಂದೇ ಒಂದು ನಿದರ್ಶನ ಇಲ್ಲ. ಇಷ್ಟೊಂದು ತರಾತುರಿಯಲ್ಲಿ ಈ ನಿರ್ಧಾರ ಕೈಗೊಳ್ಳುವ ಅಗತ್ಯ ಏನಿತ್ತು’ ಎಂದು ಉದ್ಧವ್‌ ಪ್ರಶ್ನಿಸಿದ್ದಾರೆ.

‘ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಬಳಸಿಕೊಂಡು ದೇಶದ ಪ್ರಜಾ
ಪ್ರಭುತ್ವವನ್ನು ಬಿಜೆಪಿ ಧ್ವಂಸ ಮಾಡುತ್ತಿದೆ. ಬಿಜೆಪಿ ನಮಗೆ ಇಂದು ಮಾಡಿದ್ದನ್ನು ನಾಳೆ ಯಾರಿಗೆ ಬೇಕಿದ್ದರೂ ಮಾಡಬಹುದು. 2024ರ ಬಳಿಕವೂ ಇದುವೇ ಮುಂದುವರಿದರೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಅಥವಾ ಚುನಾವಣೆ ಇರುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಅಂಧೇರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಚುನಾವಣಾ ಆಯೋಗವು ನೀಡಿದ ಚಿಹ್ನೆಯ ಅಡಿಯಲ್ಲಿ ಸ್ಪರ್ಧಿಸಿದ್ದೇವೆ. ಆದರೆ, ಇನ್ನೊಂದು ಬಣಕ್ಕೆ ಸ್ಪರ್ಧಿಸುವ ಧೈರ್ಯ ಕೂಡ ಇರಲಿಲ್ಲ ಎಂದರು.

ಶಿವಸೇನಾದ ಅಧಿಕೃತ ಬ್ಯಾಂಕ್‌ ಖಾತೆಗಳಿಂದ ಹಣವನ್ನು ವರ್ಗಾಯಿಸ ಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ‘ಪಕ್ಷದ ನಿಧಿಗೆ ಏನಾಯಿತು ಎಂಬುದರ ಕುರಿತು ಮಾತನಾಡುವ ಹಕ್ಕು ಚುನಾವಣಾ ಆಯೋಗಕ್ಕೆ ಇಲ್ಲ. ಆಯೋಗವು ಸುಲ್ತಾನನ ರೀತಿ ವರ್ತಿಸಬಾರದು. ನ್ಯಾಯಯುತವಾಗಿ ಚುನಾವಣೆ ನಡೆಸುವುದು ಮತ್ತು ರಾಜಕೀಯ ಪಕ್ಷದೊಳಗೆ ಪ್ರಜಾಪ್ರಭುತ್ವ ಇರುವಂತೆ ನೋಡಿಕೊಳ್ಳುವುದು ಮಾತ್ರ ಆಯೋಗದ ಕೆಲಸ’ ಎಂದು ಉತ್ತರಿಸಿದ್ದಾರೆ.

ಶಿಂದೆ ಬಣವು ಶಿವಸೇನಾದ ಸ್ವತ್ತುಗಳನ್ನು ವಶಕ್ಕೆ ಪಡೆಯುತ್ತಿದೆಯಲ್ಲವೇ ಎಂಬ ಪ್ರಶ್ನೆಗೆ, ‘ನನ್ನ ತಂದೆಯ (ಬಾಳಾ ಸಾಹೇಬ್‌ ಠಾಕ್ರೆ) ಹೆಸರನ್ನು ಬಳಸುವುದನ್ನು ನಿಲ್ಲಿಸುವಂತೆ ಅವರಿಗೆ ಸವಾಲು ಹಾಕುತ್ತಿದ್ದೇನೆ. ಅವರು (ಶಿಂದೆ) ಅವರ ತಂದೆಯ ಹೆಸರನ್ನು ಬಳಸಿ, ಮತ ಕೇಳಲಿ’ ಎಂದು ಹೇಳಿದರು.

ಸ್ವತ್ತು ವ್ಯಾಜ್ಯ ಬಗೆಹರಿಸಿದಂತೆ: ಸಾಮ್ನಾ ವ್ಯಂಗ್ಯ

ಶಿವಸೇನಾದ ಹೆಸರು ಮತ್ತು ಚಿಹ್ನೆಯನ್ನು ಶಿಂದೆ ಬಣಕ್ಕೆ ನೀಡಿದ ಚುನಾವಣಾ ಆಯೋಗದ ಕ್ರಮವು ‘ಸ್ವತ್ತು ವ್ಯಾಜ್ಯ ಬಗೆಹರಿಸಿದಂತೆ ಇದೆ’ ಎಂದು ಶಿವಸೇನಾದ ಮುಖವಾಣಿ ‘ಸಾಮ್ನಾ’ದಲ್ಲಿ ವಿವರಿಸಲಾಗಿದೆ.

‘ಅಂಗಡಿಯಿಂದ ಶೇಂಗಾ ಖರೀದಿ ಮಾಡಿದ ರೀತಿಯಲ್ಲಿಯೇ ಚಿಹ್ನೆ ಮತ್ತು ಹೆಸರನ್ನು ಖರೀದಿ ಮಾಡಲಾಗಿದೆ ಎಂಬುದು ಈಗ ರಹಸ್ಯವೇನೂ ಅಲ್ಲ. ಠಾಕ್ರೆ ಅವರು ಪೋಷಿಸಿಕೊಂಡು ಬಂದ ಶಿವಸೇನಾವನ್ನು ದೆಹಲಿಯಲ್ಲಿರುವವರ ಬೂಟು ನೆಕ್ಕುವ ಜನರ ಕೈಗೆ ಆಯೋಗವು ಕೊಟ್ಟಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೃಪೆಗಾಗಿ ಶಿವಸೇನಾದ ಚಿಹ್ನೆಯಾದ ಬಿಲ್ಲು
ಬಾಣವನ್ನು ಕೊಡಲಾಗಿದೆ ಎಂಬುದು ಬಯಲಾಗಿದೆ. ಈ ವ್ಯಕ್ತಿಯು ಮಹಾರಾಷ್ಟ್ರ ಮತ್ತು ಮರಾಠಿ ಜನರ ಮೊದಲ ಶತ್ರು. ಶಾ ಅವರೊಂದಿಗೆ ಗುರುತಿಸಿಕೊಳ್ಳುವ ಎಲ್ಲರನ್ನೂ ಮಹಾರಾಷ್ಟ್ರದ ಶತ್ರುಗಳು ಎಂದೇ ನೋಡಬೇಕು’ ಎಂದು ಸಂಪಾದಕೀಯವು ಹೇಳಿದೆ.

ಅಧಿಕಾರವನ್ನು ಈಗಿನಂತೆ ಹಿಂದೆಂದೂ ದುರುಪಯೋಗ ಪಡಿಸಿಕೊಂಡದ್ದು ಇತಿಹಾಸ
ದಲ್ಲಿಯೇ ಇಲ್ಲ. ಶಿಂದೆ ಬಣದ ಸಿಂಧುತ್ವದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ಮುಗಿಯುವ ತನಕ ಆಯೋಗವು ಕಾಯಬಹುದಿತ್ತು. ಅದಾನಿ, ಅಂಬಾನಿ ಅಥವಾ ನೀರವ್‌ ಮೋದಿಯಂತಹ ಉದ್ಯಮಿಗಳು ಯಾವುದೇ ಪಕ್ಷದ ಎಲ್ಲ ಶಾಸಕರು ಮತ್ತು ಸಂಸದರನ್ನು ಖರೀದಿ ಮಾಡಿ ಆ ಪಕ್ಷದ ಮಾಲೀಕತ್ವವು ತಮ್ಮದು ಎಂದು ಸಾಧಿಸಬಹುದಾದ ಸಾಧ್ಯತೆ ಇದೆ ಎಂದೂ ‘ಸಾಮ್ನಾ’ ಹೇಳಿದೆ.

****

ವಿವಾದ ಸುಪ್ರೀಂ ಕೋರ್ಟ್‌ಗೆ

ಶಿಂದೆ ಬಣವೇ ನಿಜವಾದ ಶಿವಸೇನಾ ಎಂದು ಚುನಾವಣಾ ಆಯೋಗವು ಕೊಟ್ಟ ತೀರ್ಪಿನ ವಿರುದ್ಧ ಉದ್ಧವ್‌ ಠಾಕ್ರೆ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ತಮ್ಮ ಅರ್ಜಿಯನ್ನು ತುರ್ತು ವಿಚಾರಣೆಗೆ ಎತ್ತಿಕೊಳ್ಳಬೇಕು ಎಂದು ಉದ್ಧವ್ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರ ನೇತೃತ್ವದ ಪೀಠವನ್ನು ಕೋರಿದರು. ಆದರೆ, ತುರ್ತು ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿ ನಿರಾಕರಿಸಿದರು.

‘ಎಡ, ಬಲ, ಕೇಂದ್ರ ಏನೇ ಆಗಿರಲಿ, ನಿಯಮ ಎಲ್ಲರಿಗೂ ಅನ್ವಯವಾಗುತ್ತದೆ. ಸಮರ್ಪಕ ಪ್ರಕ್ರಿಯೆಯ ಮೂಲಕ ನಾಳೆ (ಮಂಗಳವಾರ) ಬನ್ನಿ’ ಎಂದು ಅವರು ಹೇಳಿದರು.



***

ಬಾಳಾ ಠಾಕ್ರೆ ಅವರ ಪರಂಪರೆಯನ್ನು ಶಿಂದೆ ಅವರು ಮುಂದಕ್ಕೆ ಒಯ್ಯುತ್ತಿದ್ದಾರೆ. ಮಹಾರಾಷ್ಟ್ರದ ಜನರು ಮತ್ತು ಬಿಜೆಪಿ–ಶಿವಸೇನಾ ಸರ್ಕಾರ ಅವರೊಂದಿಗೆ ಇದೆ

-ಜ್ಯೋತಿರಾದಿತ್ಯ ಸಿಂಧಿಯಾ,ಕೇಂದ್ರ ಸಚಿವ

***

ಪ‍್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತಕ್ಕೆ ಮಹತ್ವ ಇದೆ. ಯಾವುದು ನಿಜವಾದ ಶಿವಸೇನಾ ಎಂಬ ವಿಚಾರದಲ್ಲಿ ಸತ್ಯಕ್ಕೆ ಜಯವಾಗಿದೆ

-ಏಕನಾಥ ಶಿಂದೆ, ಮಹಾರಾಷ್ಟ್ರ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT