ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿವಸೇನಾ’ಗಾಗಿ ₹2,000 ಕೋಟಿ ಕೈಬದಲಾಗಿದೆ: ಸಂಜಯ ರಾವುತ್‌

Last Updated 19 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

ಮುಂಬೈ: ಶಿವಸೇನಾ ಎಂಬ ಹೆಸರು ಮತ್ತು ಆ ಪಕ್ಷದ ಚಿಹ್ನೆಯಾದ ಬಿಲ್ಲು ಮತ್ತು ಬಾಣವು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ
ಬಣಕ್ಕೆ ದೊರೆಯುವಲ್ಲಿ ₹2,000 ಕೋಟಿ ಕೈಬದಲಾಗಿದೆ ಎಂಬ ಗಂಭೀರ ಆರೋಪವನ್ನು ಶಿವಸೇನಾದ ಉದ್ಧವ್‌ ಠಾಕ್ರೆ ಬಣದ ಮುಖ್ಯ ವಕ್ತಾರ ಸಂಜಯ ರಾವುತ್‌ ಅವರು ಭಾನುವಾರ ಮಾಡಿದ್ದಾರೆ. ಹೆಸರು ಮತ್ತು ಚಿಹ್ನೆಯನ್ನು ಚುನಾವಣಾ ಆಯೋಗವು ಶಿಂದೆ ಬಣಕ್ಕೆ ಶುಕ್ರವಾರ ನೀಡಿದೆ.

ಶಿಂದೆ ಬಣ ಮತ್ತು ಬಿಜೆಪಿ ಈ ಆರೋಪವನ್ನು ಅಲ್ಲಗಳೆದಿವೆ. ರಾವುತ್‌ ಅವರ ಮೇಲೆ ಹರಿಹಾಯ್ದಿವೆ.

‘ಛತ್ರಪತಿ ಶಿವಾಜಿ ಮಹಾರಾಜರ ಆಶೀರ್ವಾದ ಇರುವುದರಿಂದಲೇ ಬಿಲ್ಲು–ಬಾಣ ಚಿಹ್ನೆಯು ನಮಗೆ ಸಿಕ್ಕಿದೆ’ ಎಂದು ಏಕನಾಥ ಶಿಂದೆ ಅವರು ಪುಣೆಯಲ್ಲಿ ನಡೆದ ಶಿವ ಜಯಂತಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರೂ ಆ ವೇದಿಕೆಯಲ್ಲಿ ಇದ್ದರು.

ರಾಜ್ಯಸಭಾ ಸದಸ್ಯರೂ ಆಗಿರುವ ರಾವುತ್ ಅವರು ಭಾನುವಾರ ಎರಡು ಟ್ವೀಟ್‌ಗಳಲ್ಲಿ ಲಂಚದ ಆರೋಪ ಮಾಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದಾಗ ಅದೇ ಆರೋಪವನ್ನು ಪುನರುಚ್ಚರಿಸಿದ್ದಾರೆ. ಪ್ರಧಾನಿಯವರ ಕಚೇರಿ ಮತ್ತು ಚುನಾವಣಾ ಆಯೋಗವನ್ನು ಟ್ವೀಟ್‌ ಗಳಿಗೆ ಅವರು ಟ್ಯಾಗ್‌ ಮಾಡಿದ್ದಾರೆ.

‘ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಪಡೆದುಕೊಳ್ಳುವ ವಿಚಾರದಲ್ಲಿ ₹2,000 ಕೋಟಿ ಕೈಬದಲಾಗಿದೆ ಎಂಬುದು ಖಚಿತ. ಇದು ನೂರು ಶೇಕಡ ಸತ್ಯ. ಇದು ಆರಂಭದ ಮಾಹಿತಿ, ಇನ್ನಷ್ಟು ವಿವರಗಳು ಮುಂದೆ ಬಹಿರಂಗ ಆಗಲಿವೆ. ಇಂತಹದ್ದು ದೇಶದಲ್ಲಿ ಈವರೆಗೆ ಆಗಿಯೇ ಇಲ್ಲ’ ಎಂದು ರಾವುತ್ ಟ್ವೀಟ್‌ನಲ್ಲಿ ಹೇಳಿದ್ದಾರೆ.

‘ಪೂರ್ಣ ಜವಾಬ್ದಾರಿಯೊಂದಿಗೆ ನಾನು ಇದನ್ನು ಹೇಳುತ್ತಿದ್ದೇನೆ. ನನ್ನಲ್ಲಿ ಮಾಹಿತಿ ಇದೆ. ಕಾರ್ಪೊರೇಟರ್‌ಗಳಿಗೆ ತಲಾ ₹50 ಲಕ್ಷ, ಶಾಸಕರಿಗೆ ತಲಾ ₹50 ಕೋಟಿ ಮತ್ತು ಸಂಸದರಿಗೆ ತಲಾ ₹100 ಕೋಟಿ ನೀಡಲಾಗಿದೆ’ ಎಂದು ರಾವುತ್‌ ಆರೋಪಿಸಿದ್ದಾರೆ.

‘ಅವರಿಗೆ (ಶಿಂದೆ ಬಣದವರಿಗೆ) ಆಪ್ತರಾಗಿರುವ ಬಿಲ್ಡರ್‌ ಒಬ್ಬರಿಂದ ಈ ಮಾಹಿತಿ ದೊರೆಯಿತು. ಅವರಲ್ಲಿ ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಇವೆ. ಶೀಘ್ರವೇ ಅವರು ಇದನ್ನು ಬಹಿರಂಗಪಡಿಸಲಿದ್ದಾರೆ. ದಿಲ್ಲಿಯಿಂದ ಗಲ್ಲಿಯವರೆಗೆ ಈ ಕುರಿತು ಚರ್ಚೆ ನಡೆಯುತ್ತಿದೆ’ ಎಂದು ರಾವುತ್ ಹೇಳಿದ್ದಾರೆ.

ಶಿಂದೆ ಬಣದ ತಿರುಗೇಟು

ರಾವುತ್ ಅವರನ್ನು ಶಿಂದೆ ಬಣದ ಮುಖಂಡರು ಟೀಕಿಸಿದ್ದಾರೆ. ‘ರಾವುತ್ ಅವರು ಕ್ಯಾಷಿಯರ್‌ ಆಗಿದ್ದಾರೆಯೇ’ ಎಂದು ಶಿಂದೆ ಬಣದ ಶಾಸಕ ಸದಾ ಸರ್ವಣಕರ್‌ ಪ್ರಶ್ನಿಸಿದ್ದಾರೆ.

‘ರಾವುತ್‌ ಹೇಳಿದ್ದನ್ನು ಉದ್ಧವ್‌ ಅವರು ಒಪ್ಪಿಕೊಳ್ಳುತ್ತಾರೆಯೇ... ಈ ಹೇಳಿಕೆಯಿಂದಾಗಿ ಮಹಾರಾಷ್ಟ್ರ ರಾಜ್ಯವೇ ನಗುತ್ತಿದೆ. ಈ ವ್ಯಕ್ತಿಯನ್ನು ಉದ್ಧವ್‌ ಹೇಗೆ ಸಹಿಸಿ ಕೊಳ್ಳುತ್ತಿದ್ದಾರೆ. ರಾವುತ್‌ ಅವರು ₹50 ಕೋಟಿಯಿಂದ ಆರಂಭಿಸಿದರು. ಈಗ ಅದು ₹2,000 ಕೋಟಿಗೆ ತಲುಪಿದೆ’ ಎಂದು ಶಿಂದೆ ಬಣದ ಶಾಸಕ ಸಂಜಯ್‌ ಶಿರ್ಸಾಟ್‌ ಹೇಳಿದ್ದಾರೆ.

‘ಈ ರೀತಿಯ ಆರೋಪ‍ಗಳನ್ನು ಮಾಡುವವರಿಗೆ ಮತಿಭ್ರಮಣೆ ಆಗಿರುತ್ತದೆ’ ಎಂದು ಮುಂಬೈ ಬಿಜೆಪಿ ಘಟಕದ ಮುಖ್ಯಸ್ಥ ಆಶೀಶ್‌ ಶೇಲಾರ್ ಅವರು ಹೇಳಿದ್ದಾರೆ.

ಹಿಂದುತ್ವ ಬಿಟ್ಟಿಲ್ಲ: ಉದ್ಧವ್‌

‘ನೀವು ಬಿಲ್ಲು ಬಾಣವನ್ನು ಕದಿಯಬಹುದು. ಆದರೆ, ನಮ್ಮ ಜನರ ಹೃದಯದಲ್ಲಿ ಇರುವ ಶ್ರೀರಾಮನನ್ನು ಕದ್ದೊಯ್ಯಲಾಗದು. ಇಂದು ನನ್ನಲ್ಲಿ ಏನೂ ಇಲ್ಲ. ಮೈಕ್‌ ಮಾತ್ರ ಇದೆ. ನಾನು ಮನದ ಮಾತು ಅಲ್ಲ, ಹೃದಯದ ಮಾತು ಆಡಲಿದ್ದೇನೆ. ನಾನು ಬಿಜೆಪಿಯನ್ನು ಬಿಟ್ಟಿದ್ದೇನೆ, ಆದರೆ ಹಿಂದುತ್ವವನ್ನು ಅಲ್ಲ’ ಎಂದು ಶಿವಸೇನಾ ಉದ್ಧವ್‌ ಬಣದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

‘ಸುಳ್ಳಿನ ಬಲದಲ್ಲಿ ಗರ್ಜಿಸುತ್ತಿದ್ದವರಿಗೆ ಸತ್ಯ ಯಾರ ಕಡೆಗೆ ಇದೆ ಎಂಬುದು ಈಗ ಅರಿವಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ ಉದ್ಧವ್‌ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.

***

ಶಿವಸೇನಾದ ಏಕನಾಥ ಶಿಂದೆ ಬಣಕ್ಕೆ ಚುನಾವಣಾ ಆಯೋಗವು ಹೆಸರು ಮತ್ತು ಚಿಹ್ನೆ ನೀಡಿದ್ದಕ್ಕೆ ಸಂಬಂಧಿಸಿದ ವಿವಾದದ ಭಾಗವಾಗಲು ನಾನು ಬಯಸುವುದಿಲ್ಲ

-ಶರದ್ ಪವಾರ್‌, ಎನ್‌ಸಿಪಿ ಮುಖ್ಯಸ್ಥ

***

ಆರೋಪ ಆಧಾರರಹಿತ. ಸುಪ್ರೀಂ ಕೋರ್ಟ್‌ ಮತ್ತು ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆಗಳು. ಈ ಸಂಸ್ಥೆಗಳನ್ನು ರಾವುತ್ ಅವರು ಅಪಮಾನಿಸಿದ್ದಾರೆ

-ಸುಧೀರ್ ಮುಂಗಟಿವಾರ್‌, ಮಹಾರಾಷ್ಟ್ರದ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT