ಭಾನುವಾರ, ಮೇ 22, 2022
24 °C

ಶೈಕ್ಷಣಿಕ ವ್ಯವಸ್ಥೆ ಸುಧಾರಿಸಿ–ನವೀನ್‌ ಪಾಲಕರ ಕಳಕಳಿ: ಶಿವಕುಮಾರ್ ಉದಾಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಿದೆ ಎಂದು ಉಕ್ರೇನ್‌ನ ಹಾರ್ಕೀವ್‌ ನಗರದಲ್ಲಿ ಮೃತಪಟ್ಟಿರುವ ವೈದ್ಯಕೀಯ ವಿದ್ಯಾರ್ಥಿ ನವೀನ್‌ ಗ್ಯಾನಗೌಡರ್‌ ಅವರ ತಂದೆ ಶೇಖರಪ್ಪ ಹೇಳಿದ್ದಾಗಿ ಸಂಸದ ಶಿವಕುಮಾರ ಉದಾಸಿ ಮಾಹಿತಿ ನೀಡಿದರು.

ಲೋಕಸಭೆಯಲ್ಲಿ ಮಂಗಳವಾರ ಸಂಜೆ ನಡೆದ ಉಕ್ರೇನ್ ಸ್ಥಿತಿ ಕುರಿತ ಚರ್ಚೆಯ ವೇಳೆ ಅವರು ಮಾತನಾಡಿದರು.

ಪಿಯುಸಿಯಲ್ಲಿ ಶೇ 97ರಷ್ಟು ಅಂಕ ಗಳಿಸಿದ್ದರೂ ವೈದ್ಯಕೀಯ ಶಿಕ್ಷಣ ಪಡೆಯಲು ನವೀನ್ ಉಕ್ರೇನ್‌ಗೆ ತೆರಳಬೇಕಾಯಿತು. ಅಂಥ ಪ್ರತಿಭಾವಂತರು ಉನ್ನತ ಶಿಕ್ಷಣಕ್ಕಾಗಿ ವಿದೇಶಿ ಕಾಲೇಜುಗಳನ್ನು ನೆಚ್ಚಿಕೊಳ್ಳುವ ಅನಿವಾರ್ಯತೆಯಿಂದ ಹೊರಬರಬೇಕು ಎಂಬ ಆಶಯವನ್ನು ಅವರ ತಂದೆ ವ್ಯಕ್ತಪಡಿಸಿದ್ದಾಗಿ ಉದಾಸಿ ಹೇಳಿದರು.

‘ಮಗನ ಅಗಲಿಕೆಯ ನೋವಿನ ನಡುವೆಯೂ ಶೇಖರಪ್ಪ ಅವರು ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದರು. ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಅವರು ಚಿಂತನೆ ನಡೆಸಿದ್ದು ಅಭಿನಂದನೀಯ. ಈ ಕುರಿತು ಸರ್ಕಾರ ಗಂಭೀರವಾದ ಚರ್ಚೆ ನಡೆಸಬೇಕಿದೆ’ ಎಂದು ಅವರು ಹೇಳಿದರು.

ರಷ್ಯಾ ನಡೆಸಿರುವ ಶೆಲ್‌ ದಾಳಿಗೆ ಸಿಲುಕಿ ಮೃತಪಟ್ಟಿದ್ದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದ ನವೀನ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ವಾಪಸ್‌ ತರಲು ಕೇಂದ್ರ ಸರ್ಕಾರ ಸಾಕಷ್ಟು ಶ್ರಮಿಸಿತು ಎಂದು ಅವರು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು