ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಂಗಬಾದ್‌ ಹೆಸರು ಬದಲಿಸುವ ‘ಶಿವಸೇನಾ’ ಪ್ರಸ್ತಾವನೆಗೆ ಕಾಂಗ್ರೆಸ್ ವಿರೋಧ

ಸಂಭಾಜಿ ನಗರವಾಗಿ ಹೆಸರು ಬದಲಿಸಲು ಎಎಂಸಿ ಪ್ರಸ್ತಾವನೆ
Last Updated 1 ಜನವರಿ 2021, 11:16 IST
ಅಕ್ಷರ ಗಾತ್ರ

ಮುಂಬೈ: ಔರಂಗಬಾದ್‌ ಹೆಸರನ್ನು ಸಂಭಾಜಿ ನಗರ ಎಂದು ಬದಲಿಸಬೇಕೆಂಬ ಶಿವಸೇನೆಯ ಪ್ರಸ್ತಾವನೆಗೆ ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ ಆಘಾಡಿ ಮೈತ್ರಿಕೂಟದ ಪಾಲುದಾರ ಪಕ್ಷ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿದೆ.

ಮಹಾರಾಷ್ಟ್ರದ ಮರಾಠವಾಡದ ವಿಭಾಗೀಯ ಕ್ಷೇತ್ರವಾದ ಔರಂಗಬಾದ್, ರಾಜ್ಯದ ಪ್ರವಾಸೋದ್ಯಮ ರಾಜಧಾನಿಯಾಗಿದ್ದು, ಈ ನಗರದ ಹೆಸರನ್ನು ಬದಲಿಸಬೇಕು ಎನ್ನುವುದು ಶಿವಸೇನಾದ ಬಹು ದಿನಗಳಿಂದ ಬೇಡಿಕೆ ಇಟ್ಟಿತ್ತು. ಈಗ ಆ ಬೇಡಿಕೆಗೆ ಮೈತ್ರಿ ಪಕ್ಷ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸುತ್ತಿದೆ. ಸದ್ಯ ಔರಂಗಬಾದ್ ಮುನ್ಸಿಪಲ್ ಕಾರ್ಪೊರೇಷನ್‌(ಎಎಂಸಿ) ಚುನಾವಣೆ ಕೂಡ ಬಾಕಿ ಇರುವುದರಿಂದ, ಈ ವಿಚಾರ ಮತ್ತೆ ಮಹತ್ವ ಪಡೆದುಕೊಂಡಿದೆ.

ಕಳೆದ ವಾರ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ₹7500 ಕೋಟಿ ಹೂಡಿಕೆ ಮಾಡುವ ಪ್ರಸ್ತಾವನೆ ಬಂದ ಮೇಲೆ, ಕೈಗಾರಿಕಾ ಸಚಿವ ಸುಭಾಷ್ ದೇಸಾಯ್ ಅವರು, ಔರಂಗಬಾದ್‌ ಅನ್ನು ‘ಸೂಪರ್ ಸಂಭಾಜಿ ನಗರ್‘ ಎಂದು ಟ್ವೀಟ್‌ ಮಾಡಿದ್ದರು. ಶಿವಸೇನೆಯ ಈ‌ ನಡೆಯನ್ನು ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಕಂದಾಯ ಸಚಿವ ಬಾಳಾಸಾಹೇಬ್ ಥೊರಾಟ್ ಅವರು ವಿರೋಧಿಸಿದ್ದರು.

‘ಔರಂಗಬಾದ್‌ ಅನ್ನು ಸಂಭಾಜಿ ನಗರ ಎಂದು ಮರುನಾಮಕರಣ ಮಾಡುವ ಬಗ್ಗೆ ಯಾವುದೇ ಪ್ರಸ್ತಾಪ ಬಂದರೆ, ಕಾಂಗ್ರೆಸ್ ಅದನ್ನು ಬಲವಾಗಿ ವಿರೋಧಿಸುತ್ತದೆ. ನಗರದ ಹೆಸರು ಬದಲಿಸುವಂತಹ ಕ್ರಮಗಳು ಸಾಮಾನ್ಯ ಜನರ ಅಭಿವೃದ್ಧಿಗೆ ಯಾವುದೇ ಉಪಯೋಗವಿಲ್ಲ ಎಂಬುದನ್ನು ಪಕ್ಷ ಅರಿತಿದೆ‘ ಎಂದು ಥೋರಟ್ ಸ್ಪಷ್ಟಪಡಿಸಿದ್ದಾರೆ.

ಮೊಘಲರ ದೊರೆ ಔರಂಗಜೇಬ್‌ ಈ ನಗರವನ್ನು 1653ರಲ್ಲಿ ಔರಂಗಬಾದ್‌ ಎಂದು ಮರು ನಾಮಕರಣ ಮಾಡಿದ್ದರು. ಆದಾಗ್ಯೂ 1689ರಲ್ಲಿ ಔರಂಗಜೇಬನ ಆಜ್ಞೆಯ ಮೇರೆಗೆ ಛತ್ರಪತಿ ಸಂಭಾಜಿ ಮಹಾರಾಜ್ ಚಿತ್ರಹಿಂಸೆಗೆ ಒಳಗಾಗಿ ಸಾವನ್ನಪ್ಪಿದ ನಂತರದಲ್ಲಿ ಈ ನಗರದ ಹೆಸರು ಬದಲಿಸಬೇಕೆಂಬುದು ಬೇಡಿಕೆಯಾಯಿತು. ಸಂಭಾಜಿ ಮಹಾರಾಜ್, ಮರಾಠರ ದೊರೆ ಛತ್ರಪತಿ ಶಿವಾಜಿ ಮಹಾರಾಜ್ ಅವರ ಮಗ.

1995 ರಿಂದ 1999 ವರಗೆ ಮಹಾರಾಷ್ಟ್ರದಲ್ಲಿ ಶಿವಸೇನಾ – ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದ ವೇಳೆಯಲ್ಲಿ ಈ ನಗರದ ಹೆಸರು ಬದಲಾಯಿಸುವ ಪ್ರಸ್ತಾವನೆ ಮುನ್ನೆಲೆಗೆ ಬಂತು. ಜೂನ್ 19, 1995ರಲ್ಲಿ ಔರಂಗಬಾದ್‌ ಮುನ್ಸಿಪಲ್ ಕಾರ್ಪೊರೇಷನ್ ಈ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಅದು ಕಾರ್ಯಗತಗೊಳ್ಳಲಿಲ್ಲ. ಈಗ ಪುನಃ ಎಎಂಸಿ ಪ್ರಸ್ತಾವ ಸಲ್ಲಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT