ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್‌ ಹಂತಕರಂತೆ ನನ್ನನ್ನೂ ಬಿಡುಗಡೆ ಮಾಡಿ: ‘ಸುಪ್ರೀಂ’ಗೆ ಅರ್ಜಿ

ಪತ್ನಿಯನ್ನು ಕೊಂದು 29 ವರ್ಷದಿಂದ ಜೈಲಿನಲ್ಲಿರುವ ಸ್ವಾಮಿ ಶ್ರದ್ಧಾನಂದರಿಂದ ಮೊರೆ
Last Updated 17 ನವೆಂಬರ್ 2022, 10:51 IST
ಅಕ್ಷರ ಗಾತ್ರ

ನವದೆಹಲಿ: ‘ಕಳೆದ 29 ವರ್ಷದಿಂದ ಜೈಲಿನಲ್ಲಿಯೇ ಇದ್ದೇನೆ. ಒಂದು ದಿನವೂ ನನಗೆ ಪೆರೋಲ್‌ ನೀಡಿಲ್ಲ. ಆದರೆ, ರಾಜೀವ್‌ ಗಾಂಧಿ ಹಂತಕರಿಗೆ ಮಾತ್ರ ಹಲವು ಬಾರಿ ಪೆರೋಲ್‌ ನೀಡಲಾಗಿತ್ತು. ಈಗ ಅವರನ್ನು ಕಾರಾಗೃಹದಿಂದಲೂ ಬಿಡುಗಡೆ ಮಾಡಲಾಗಿದೆ. ನನ್ನ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ. ಆದ್ದರಿಂದ ಅವರಂತೆ ನನ್ನನ್ನು ಬಿಡುಗಡೆ ಮಾಡಿ’. – ತನ್ನ ಪತ್ನಿಯನ್ನು ಕೊಂದು 1994ರಿಂದ ಜೈಲಿನಲ್ಲಿರುವ ಸ್ವಯಂ ಘೋಷಿತ ದೇವಮಾನವ ಸ್ವಾಮಿ ಶ್ರದ್ಧಾನಂದ, ತನ್ನನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

‘ಪೆರೋಲ್‌ ಜೊತೆಗೆ ಹಲವು ಸ್ವಾತಂತ್ರ್ಯವನ್ನುರಾಜೀವ್‌ ಗಾಂಧಿ ಹಂತಕರು ಅನುಭವಿಸಿದ್ದಾರೆ. ನಾನು ಒಂದು ಕೊಲೆ ಪ್ರಕರಣದಲ್ಲಿ ಮಾತ್ರ ಭಾಗಿಯಾಗಿದ್ದೇನೆ. ಆದರೂ, ಒಂದು ದಿನವು ಪೆರೋಲ್‌ ನೀಡಿಲ್ಲ’ ಎಂದು ಶ್ರದ್ಧಾನಂದ ಪರ ವಕೀಲ ವರುಣ್‌ ಠಾಕೂರ್‌ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

‘ಸ್ಥಳೀಯ ನ್ಯಾಯಾಲಯವು ಮರಣದಂಡನೆ ವಿಧಿಸಿತ್ತು. ಈ ತೀರ್ಪನ್ನು ಹೈಕೋರ್ಟ್‌ ಕೂಡ ಎತ್ತಿಹಿಡಿದಿತ್ತು. ಆದರೆ, ಮರಣದಂಡನೆ ಶಿಕ್ಷಿಯನ್ನು ಜೀವಾವಧಿ ಶಿಕ್ಷೆಯಾಗಿ ಸುಪ್ರೀಂ ಕೋರ್ಟ್‌ ಮಾರ್ಪಾಡು ಮಾಡಿತ್ತು. ಆದರೆ, ಈ ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಂಡ ಅಧಿಕಾರಿಗಳು ಒಂದು ದಿನವೂ ಪೆರೋಲ್‌ ನೀಡಲಿಲ್ಲ. ನನಗೆ 80 ವರ್ಷ ವಯಸ್ಸಾಗಿದೆ’ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

‘ಕ್ಷಮಾದಾನ ಮತ್ತು ಪೆರೋಲ್‌ ನೀಡುವಂತೆ ಸುಪ್ರೀಂ ಕೋರ್ಟ್‌ಗೆ2014ರಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಸಂಬಂಧ ನ್ಯಾಯಾಲಯವು ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ನೀಡಿತ್ತು. ಆ ನಂತರದಲ್ಲಿ ಅರ್ಜಿಯ ವಿಚಾರಣೆ ನಡೆದಿಲ್ಲ. ಆದ್ದರಿಂದ ಈಗ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ನನ್ನ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳದೆ ಇರುವುದು ಕೂಡ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಇನ್ನೂ ಹೆಚ್ಚಿನ ಹೇಯ ಕೃತ್ಯಗಳಲ್ಲಿ ಭಾಗಿಯಾಗಿರುವವರನ್ನೂ ಬಿಡುಗಡೆ ಮಾಡಲಾಗಿದೆ. ಇದು ಸಮಾನತೆಯ ಹಕ್ಕಿನ ಉಲ್ಲಂಘನೆಯ ಉತ್ತಮ ಉದಾಹರಣೆಯಾಗಿದೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

‘ಸರ್‌ ಮಿರ್ಜಾ ಇಸ್ಮಾಯಿಲ್‌ ಮೊಮ್ಮಗಳು’

ಶ್ರದ್ಧಾನಂದನ ಪತ್ನಿ, ಕೊಲೆಯಾದ ಶಾಖಿರ್‌ ನಮಾಜಿ ಅವರು ಮೈಸೂರಿನ ದಿವಾನರಾಗಿದ್ದ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಮೊಮ್ಮಗಳು. ತನ್ನ ಮೊದಲ ಪತಿ ಅಕ್ಬರ್‌ ಖಲೀಲಿ ಅವರಿಗೆ ವಿಚ್ಛೇದನ ನೀಡಿ, ಶಾಖಿರ್‌ ಶ್ರದ್ಧಾನಂದನನ್ನು 1986ರಲ್ಲಿ ವಿವಾಹವಾಗಿದ್ದರು.

ಶ್ರದ್ಧಾನಂದ ಅಲಿಯಾಸ್‌ ಮುರಳಿ ಮನೋಹರ್‌ ಮಿಶ್ರಾ, ಶಾಖಿರ್‌ ಅವರನ್ನು 1991ರ ಏಪ್ರಿಲ್‌ 28ರಂದು ಬೆಂಗಳೂರಿನ ತಮ್ಮ ಬಂಗಲೆಯ ಕಾಂಪೌಂಡ್‌ ಒಳಗೆ ಜೀವಂತವಾಗಿ ಕೂತು ಹಾಕಿದ್ದರು. ಮಗಳು ನೀಡಿದ ದೂರಿನ ಮೇಲೆ ಶ್ರದ್ಧಾನಂದರ ಮೇಲೆ ಪ್ರಕರಣ ದಾಖಲಾಗಿ, ಈಗ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಪತ್ನಿಯ ಆಸ್ತಿ ಕಬಳಿಸುವ ಉದ್ದೇಶದಿಂದ ಕೊಲೆ ಮಾಡಲಾಗಿತ್ತು. 1994ರಿಂದ ಶ್ರದ್ಧಾನಂದ ಜೈಲಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT