ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ವಿರುದ್ಧ ಪಟೇಲ್‌ ಸಂಚು: ಸಾಕ್ಷಿಗಳನ್ನು ಉಲ್ಲೇಖಿಸಿ ಎಸ್‌ಐಟಿ ಆರೋಪ

ಸಾಕ್ಷಿಗಳನ್ನು ಉಲ್ಲೇಖಿಸಿ ಎಸ್‌ಐಟಿ ಆರೋಪ
Last Updated 16 ಜುಲೈ 2022, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ನ ಬಿಜೆಪಿ ಸರ್ಕಾರವನ್ನು 2002ರ ಗಲಭೆಯ ಬಳಿಕ ಉರುಳಿಸಲು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ಅವರು ಪಿತೂರಿ ನಡೆಸಿದ್ದರು. ಕಾಂಗ್ರೆಸ್‌ನ ಮುಖಂಡರಾಗಿದ್ದ ಅಹ್ಮದ್‌ ಪಟೇಲ್‌ ಅವರ ಕುಮ್ಮಕ್ಕು ಈ ಪಿತೂರಿಗೆ ಇತ್ತು ಎಂದು ಗುಜರಾತ್‌ ಪೊಲೀಸ್‌ ಇಲಾಖೆಯ ವಿಶೇಷ ತನಿಖಾ ತಂಡವು (ಎಸ್‌ಐಟಿ) ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಿದೆ. ಈ ಆರೋಪವು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಪಟೇಲ್‌ ಅವರು 2020ರಲ್ಲಿಯೇ ಮೃತಪಟ್ಟಿದ್ದಾರೆ.

ಗುಜರಾತ್‌ ಗಲಭೆ ಪ್ರಕರಣಗಳಲ್ಲಿ ನಿರಪರಾಧಿಗಳನ್ನು ಸಿಲುಕಿಸಲು ಹುಸಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂಬ ಪ್ರಕರಣದಲ್ಲಿ ತೀಸ್ತಾ ಸೆಟಲ್‌ವಾಡ್‌, ಮಾಜಿ ಐಪಿಎಸ್‌ ಅಧಿಕಾರಿಗಳಾದ ಆರ್‌.ಬಿ.ಶ್ರೀಕುಮಾರ್‌ ಮತ್ತು ಸಂಜೀವ್ ಭಟ್‌ ಅವರನ್ನು ಇತ್ತೀಚೆಗೆ ಬಂಧಿಸಲಾಗಿದೆ. ತೀಸ್ತಾ ಅವರ ಜಾಮೀನು ಅರ್ಜಿಯ ವಿಚಾರಣೆ ಶನಿವಾರ ನಡೆಯಿತು.

ಜಾಮೀನು ಅರ್ಜಿಯನ್ನು ಎಸ್‌ಐಟಿ ವಿರೋಧಿಸಿದೆ. ಅರ್ಜಿಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

‘ಚುನಾಯಿತ ಸರ್ಕಾರವೊಂದನ್ನು ಉರುಳಿಸುವುದು ಅಥವಾ ಅಸ್ಥಿರಗೊಳಿಸುವುದು ತೀಸ್ತಾ ಸೆಟಲ್‌ವಾಡ್‌ ಅವರ ರಾಜಕೀಯ ಉದ್ದೇಶವಾಗಿತ್ತು... ಗುಜರಾತ್‌ನ ನಿರಪರಾಧಿ ವ್ಯಕ್ತಿಗಳನ್ನು ಪ್ರಕರಣಗಳಲ್ಲಿ ಸಿಲುಕಿಸುವ ಅವರ ಪ್ರಯತ್ನಕ್ಕೆ ಪ್ರತಿಫಲವಾಗಿ ಪ್ರತಿಸ್ಪರ್ಧಿ ರಾಜಕೀಯ ಪಕ್ಷವು ಹಣಕಾಸು ಮತ್ತು ಇತರ ನೆರವುಗಳನ್ನು ಅಕ್ರಮವಾಗಿ ನೀಡಿತ್ತು’ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ. 2002ರ ಗೋಧ್ರಾ ಗಲಭೆಯ ಬಳಿಕ ಅಹ್ಮದ್ ಪಟೇಲ್‌ ಕಡೆಯಿಂದ ತೀಸ್ತಾ ಸೆಟಲ್‌ವಾಡ್‌ ಅವರು ₹30 ಲಕ್ಷ ಪಡೆದಿದ್ದರು. ದೆಹಲಿಯಲ್ಲಿ ಆಗ ಅಧಿಕಾರದಲ್ಲಿದ್ದ ಪ್ರಮುಖ ರಾಷ್ಟ್ರೀಯ ಪಕ್ಷದ ಮುಖಂಡರನ್ನು ಸೆಟಲ್‌ವಾಡ್‌ ಭೇಟಿಯಾಗಿದ್ದಾರೆ’ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.

ಶಬನಾ ಮತ್ತು ಜಾವೇದ್‌ ಅವರಿಗೆ ಮಾತ್ರ ಏಕೆ ಅವಕಾಶ ಕೊಡಲಾಗುತ್ತಿದೆ, ತಮ್ಮನ್ನೂ ಏಕೆ ರಾಜ್ಯಸಭೆಯ ಸದಸ್ಯೆಯನ್ನಾಗಿ ಮಾಡಿಲ್ಲ ಎಂದು ಕಾಂಗ್ರೆಸ್‌ ಮುಖಂಡರೊಬ್ಬರನ್ನು ಸೆಟಲ್‌ವಾಡ್‌ ಅವರು 2006ರಲ್ಲಿ ಪ್ರಶ್ನಿಸಿದ್ದರು ಎಂದು ಸಾಕ್ಷಿಯೊಬ್ಬರನ್ನು ಉಲ್ಲೇಖಿಸಿ ಆರೋಪಿಸಲಾಗಿದೆ.

2002ರಲ್ಲಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಗುಜರಾತ್‌ ಗಲಭೆ ಪ್ರಕರಣಗಳಲ್ಲಿ ಆರೋಪಮುಕ್ತಗೊಳಿಸಿದ್ದನ್ನು ಸುಪ್ರೀಂ ಕೋರ್ಟ್‌ ಕಳೆದ ತಿಂಗಳು ಎತ್ತಿಹಿಡಿದಿದೆ. ಆ ಬಳಿಕ, ಸೆಟಲ್‌ವಾಡ್‌ ಅವರನ್ನು ಬಂಧಿಸಲಾಗಿದೆ.

ಮೃತರನ್ನೂ ಬಿಡದೆ ದ್ವೇಷಸಾಧನೆ: ಕಾಂಗ್ರೆಸ್‌

‘2002ರ ಗಲಭೆಯ ಎಲ್ಲ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಕ್ಕಾಗಿ ಪ್ರಧಾನಿ ನರೇಂದ್ರ
ಮೋದಿ ಅವರು ನಡೆಸಿದ ವ್ಯವಸ್ಥಿತ ಕಾರ್ಯತಂತ್ರದ ಭಾಗ ಇದು’ ಎಂದು ಅಹ್ಮದ್‌ ಪಟೇಲ್‌ ಮೇಲಿನ ಆರೋಪಕ್ಕೆ ಕಾಂಗ್ರೆಸ್‌ ಪಕ್ಷವು ಪ್ರತಿಕ್ರಿಯಿಸಿದೆ.

ಗುಜರಾತ್‌ ಗಲಭೆಯನ್ನು ನಿಯಂತ್ರಿಸುವ ಇಚ್ಛೆ ಮತ್ತು ಸಾಮರ್ಥ್ಯ ಆಗ ಮುಖ್ಯಮಂತ್ರಿಯಾಗಿದ್ದ ಮೋದಿ ಅವರಿಗೆ ಇರಲಿಲ್ಲ. ಹಾಗಾಗಿಯೇ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಮೋದಿಗೆ ರಾಜಧರ್ಮವನ್ನು ನೆನಪಿಸಿದ್ದರು ಎಂದು ಕಾಂಗ್ರೆಸ್‌ ಪಕ್ಷವು ಹೇಳಿದೆ.

ಮೋದಿ ಅವರ ‘ರಾಜಕೀಯ ದ್ವೇಷ ಸಾಧನೆ ವ್ಯವಸ್ಥೆ’ಯು ಮೃತರಾಗಿರುವ ರಾಜಕೀಯ ಪ್ರತಿಸ್ಪರ್ಧಿಗಳನ್ನೂ ಬಿಡುವುದಿಲ್ಲ. ಅಹ್ಮದ್‌ ಪಟೇಲ್‌ ಅವರ ವಿರುದ್ಧ ಮಾಡಲಾಗಿರುವ ಕಿಡಿಗೇಡಿ ಆರೋಪವನ್ನು ಪಕ್ಷವು ತಿರಸ್ಕರಿಸುತ್ತದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ರಾಜಕೀಯ ಮಾಲೀಕರ ತಾಳಕ್ಕೆ ತಕ್ಕಂತೆ ಎಸ್ಐಟಿ ಕುಣಿಯುತ್ತಿದೆ. ಆಗಿನ ಮುಖ್ಯಮಂತ್ರಿಯನ್ನು ಆರೋಪಮುಕ್ತಗೊಳಿಸಿದ ಎಸ್‌ಐಟಿಯ ಮುಖ್ಯಸ್ಥರಿಗೆ ರಾಜತಾಂತ್ರಿಕ ಹುದ್ದೆಯ ಉಡುಗೊರೆ ನೀಡಿದ್ದು ನಮಗೆ ತಿಳಿದಿದೆ’ ಎಂದೂ ಕಾಂಗ್ರೆಸ್‌ ಹೇಳಿದೆ.

‘ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುತ್ತದೆ. ಅದರ ಮಧ್ಯದಲ್ಲೇ, ತನಿಖಾ ಸಂಸ್ಥೆಗಳು ತನಿಖೆಯಲ್ಲಿ ತಿಳಿದು ಬಂದ ಅಂಶಗಳು ಎಂದು ಮಾಧ್ಯಮದ ಮೂಲಕ ಗೊತ್ತುಗುರಿ ಇಲ್ಲದ ಆರೋಪ ಮಾಡುತ್ತವೆ. ಇದು ಕಳೆದ ಕೆಲವು ವರ್ಷಗಳಿಂದ ಮೋದಿ–ಶಾ ಜೋಡಿಯ ಹೆಗ್ಗುರುತೇ ಆಗಿಬಿಟ್ಟಿದೆ. ಈಗಿನ ಆರೋಪ ಕೂಡ ಅಂತಹ ಪ್ರಯತ್ನದ ಭಾಗವಾಗಿದೆ. ಈ ಹಸಿ ಸುಳ್ಳನ್ನು ತಿರಸ್ಕರಿಸಲು ಆ ವ್ಯಕ್ತಿಯೇ ಇಲ್ಲ. ಮೃತ ವ್ಯಕ್ತಿಯ ತೇಜೋವಧೆ ಮಾಡುವುದೇ ಇದರ ಹಿಂದಿನ ಉದ್ದೇಶ’ ಎಂದೂ ಕಾಂಗ್ರೆಸ್‌ ಪಕ್ಷವು ಆಕ್ರೋಶ
ವ್ಯಕ್ತಪಡಿಸಿದೆ.

ಪಿತೂರಿಯ ಹಿಂದೆ ಸೋನಿಯಾ: ಬಿಜೆಪಿ

ನವದೆಹಲಿ (ಪಿಟಿಐ): 2002ರ ಗುಜರಾತ್‌ ಗಲಭೆ ಪ್ರಕರಣಗಳಲ್ಲಿ ಮೋದಿ ಅವರನ್ನು ಸಿಲುಕಿಸುವ ಷಡ್ಯಂತ್ರದ ಪ್ರಮುಖ ಸೂತ್ರಧಾರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಎಂದು ಬಿಜೆಪಿ ಆರೋಪಿಸಿದೆ. ಸೋನಿಯಾ ಅವರ ರಾಜಕೀಯ ಸಲಹೆಗಾರರಾಗಿದ್ದ ಅಹ್ಮದ್‌ ಪಟೇಲ್‌ ಅವರು ಇಲ್ಲಿ ಒಂದು ನೆಪ ಮಾತ್ರ. ಅವರ ಮೂಲಕ ಗುಜರಾತ್‌ ಸರ್ಕಾರವನ್ನು ಅಸ್ಥಿರಗೊಳಿಸಿ, ಮೋದಿ ಅವರ ರಾಜಕೀಯ ವೃತ್ತಿಜೀವನಕ್ಕೆ ಹಾನಿ ಮಾಡಲು ಸೋನಿಯಾ ಪ್ರಯತ್ನಿಸಿದ್ದರು ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಆರೋಪಿಸಿದ್ದಾರೆ.

ಸೋನಿಯಾ ಅವರು ಮಾಧ್ಯಮಗೋಷ್ಠಿ ನಡೆಸಿ ಈ ವಿಚಾರದ ಬಗ್ಗೆ ವಿವರಣೆ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಈಗ ನೀಡಿರುವ ಹೇಳಿಕೆಯು ಕಿಡಿಗೇಡಿತನದ್ದಾಗಿದೆ. ಸೆಟಲ್‌ವಾಡ್‌ ಅವರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್‌ ಕೂಡ ಒತ್ತಡದಲ್ಲಿ ಕೆಲಸ ಮಾಡಿದೆಯೇ ಎಂದು ಪಾತ್ರಾ ಪ್ರಶ್ನಿಸಿದ್ದಾರೆ.

ಪಟೇಲ್‌ ಅವರು ಒಂದು ಉಪಕರಣ ಮಾತ್ರ ಆಗಿದ್ದರು. ಹಾಗಾಗಿ ತಮ್ಮ ಆರೋಪಗಳು ಅವರ ಮೇಲೆ ಅಲ್ಲ. ಗುಜರಾತ್‌ನ ಹೆಸರಿಗೆ ಮಸಿ ಬಳಿಯುವುದಕ್ಕಾಗಿ ಮತ್ತು ಮೋದಿ ಅವರನ್ನು ಮೂಲೆಗುಂಪು ಮಾಡುವುದಕ್ಕಾಗಿ ಸೋನಿಯಾ ಅವರೇ ಪಿತೂರಿ ಮಾಡಿದ್ದರು ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ ಸೆಟಲ್‌ವಾಡ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ರಾಷ್ಟ್ರೀಯ ಸಲಹಾ ಸಮಿತಿಯ ಸದಸ್ಯೆಯನ್ನಾಗಿಯೂ ಅವರನ್ನು ನೇಮಿಸಲಾಗಿತ್ತು. ಒಪ್ಪಿಸಿದ ಕೆಲಸವನ್ನು ಅವರು ಚೆನ್ನಾಗಿ ಮಾಡಿದ್ದರು ಎಂಬ ಮೆಚ್ಚುಗೆ ಸೋನಿಯಾ ಅವರಿಗೆ ಇದ್ದುದೇ ಇದಕ್ಕೆ ಕಾರಣ ಎಂದು ಬಿಜೆಪಿ ಆರೋಪಿಸಿದೆ.

‘ಮೊದಲೇ ಏಕೆ ವಿಚಾರಣೆ ಮಾಡಿಲ್ಲ’

ವಿರೋಧ ಪಕ್ಷಗಳಿಗೆ ಮಸಿ ಬಳಿಯುವ ರಾಜಕೀಯ ಷಡ್ಯಂತ್ರಕ್ಕಾಗಿ ತಮ್ಮ ತಂದೆಯ ಹೆಸರು ಬಳಕೆ ಆಗಿರುವುದು ದುರದೃಷ್ಟಕರ ಎಂದು ಅಹ್ಮದ್‌ ಪಟೇಲ್‌ ಅವರ ಮಗಳು ಮುಮ್ತಾಜ್‌ ಪಟೇಲ್‌ ಹೇಳಿದ್ದಾರೆ.

‘ಇಷ್ಟು ದೊಡ್ಡ ಪಿತೂರಿ ಮಾಡಿದ್ದಕ್ಕಾಗಿ ನನ್ನ ತಂದೆಯನ್ನು ಕೇಂದ್ರವು 2020ಕ್ಕೆ ಮೊದಲೇ ಏಕೆ ವಿಚಾರಣೆಗೆ ಒಳಪಡಿಸಲಿಲ್ಲ’ ಎಂದು ಪ್ರಶ್ನಿಸಿದ್ದಾರೆ.

‘ಸಾವಿನ ಬಳಿಕವೂ ನನ್ನ ತಂದೆಗೆ ಇರುವ ಮಹತ್ವವನ್ನು ಈ ಆರೋಪವು ತೋರಿಸುತ್ತದೆ. ನಾವು ಅವರ ಕೆಲಸದಲ್ಲಿ ಯಾವತ್ತೂ ಭಾಗಿಯಾಗಿಲ್ಲ. ಆದರೆ, ಈ ತನಿಖೆಯು ಅವರು ಜೀವಿಸಿದ್ದಾಗಲೇ ನಡೆಯಬೇಕಿತ್ತು. ಅವರ ಸಾವಿನ ಬಳಿಕ, ಅವರ ಹೆಸರನ್ನು ಸುದ್ದಿಗಾಗಿ ಅಥವಾ ಟಿಆರ್‌ಪಿಗಾಗಿ ಬಳಸುತ್ತಿರುವುದು ದುರದೃಷ್ಟಕರ’ ಎಂದು ಮುಮ್ತಾಜ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT