ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀತಾರಾಂ ಯೆಚೂರಿ ಸಂದರ್ಶನ: ‘ಪ್ರಜಾಪ್ರಭುತ್ವ ಉಳಿಯಲು ಬಿಜೆಪಿ ಸೋಲು ಅಗತ್ಯ’

Last Updated 14 ಮಾರ್ಚ್ 2021, 19:19 IST
ಅಕ್ಷರ ಗಾತ್ರ

‘ಪ್ರಜಾಪ್ರಭುತ್ವದ ಮೇಲೆ ನಡೆಸುತ್ತಿರುವ ದಾಳಿಯನ್ನು ಸಮರ್ಥಿಸಿಕೊಳ್ಳಲು ತನಗೆ ಚುನಾವಣೆಗಳಲ್ಲಿ ಲಭಿಸುತ್ತಿರುವ ಗೆಲುವನ್ನು ಬಿಜೆಪಿಯು ಬಳಸಿಕೊಳ್ಳುತ್ತಿದೆ. ಆದ್ದರಿಂದ ಬಿಜೆಪಿಯನ್ನು ಸೋಲಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡಬೇಕಾಗಿದೆ’ ಎಂದು ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಹೇಳಿದ್ದಾರೆ. ಅವರ ಜತೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ...

* ಈ ಚುನಾವಣೆಗಳ ಮಹತ್ವ ಏನು?

ಭಾರತದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯು ಚುನಾಯಿತ ನಿರಂಕುಶಾಧಿಪತ್ಯವಾಗುತ್ತಿದೆ ಎಂಬುದನ್ನು ಜಗತ್ತು ಈಗ ಗುರುತಿಸುತ್ತಿದೆ. ಭಾರತದ ಜಾತ್ಯತೀತ ಪ್ರಜಾತಂತ್ರವನ್ನು ರಕ್ಷಿಸಬೇಕಾದರೆ, ಬಿಜೆಪಿ ಚುನಾವಣೆ ಗೆಲ್ಲುವುದನ್ನು ತಡೆಯುವುದು ಅತ್ಯಗತ್ಯ.

* ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಅನ್ನು ವಿರೋಧಿಸುವ ಮೂಲಕ, ಬಿಜೆಪಿ ವಿರುದ್ಧದ ಹೋರಾಟವನ್ನು ಎಡಪಕ್ಷಗಳು ದುರ್ಬಲಗೊಳಿಸುತ್ತಿವೆ ಎಂಬ ಆರೋಪವಿದೆಯಲ್ಲಾ?

ಅದು ಹುರುಳಿಲ್ಲದ ಆರೋಪ. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಇದರಿಂದಾಗಿ ಟಿಎಂಸಿಯನ್ನು ವಿರೋಧಿಸುವ ಮತ್ತು ಜಾತ್ಯತೀತ ಸಿದ್ಧಾಂತವನ್ನು ನಂಬಿರುವವರಿಗೆ, ಟಿಎಂಸಿಯನ್ನು ಸೋಲಿಸಬಲ್ಲಂಥ ಒಂದು ಆಯ್ಕೆ ಇಲ್ಲದಂತಾಗಿತ್ತು. ಅವರೆಲ್ಲರೂ ಬಿಜೆಪಿಗೆ ಮತಹಾಕಿದರು. ಈ ಬಾರಿ ಕಾಂಗ್ರೆಸ್‌ ಹಾಗೂ ಇಂಡಿಯನ್‌ ಸೆಕ್ಯುಲರ್‌ ಫ್ರಂಟ್‌ ಎಡಪಕ್ಷಗಳ ಜತೆ ಚುನಾವಣಾ ಮೈತ್ರಿ ಮಾಡಿಕೊಂಡಿದ್ದರಿಂದ ಟಿಎಂಸಿಗೆ ಬಲವಾದ ಪರ್ಯಾಯ ಸೃಷ್ಟಿಯಾಗಿದೆ. ಟಿಎಂಸಿ ಜತೆಗೆ ನಾವು ಸೇರಿಕೊಂಡಿದ್ದರೆ ಟಿಎಂಸಿ ವಿರೋಧಿ ಮತಗಳೆಲ್ಲಾ ಈ ಬಾರಿಯೂ ಬಿಜೆಪಿಗೆ ಹೋಗಿ, ಅವರಿಗೆ ಗೆಲುವು ಸುಲಭವಾಗುತ್ತಿತ್ತು. ಈಗ ಹೇಳಿ ಬಿಜೆಪಿ ವಿರುದ್ಧದ ಹೋರಾಟವನ್ನು ನಾವು ದುರ್ಬಲಗೊಳಿಸುತ್ತಿದ್ದೇವೆಯೇ?

*ಪಶ್ಚಿಮ ಬಂಗಾಳದಲ್ಲಿ ಒಂದುವೇಳೆ ಅತಂತ್ರ ಸ್ಥಿತಿ ನಿರ್ಮಾಣವಾದರೆ ಎಡಪಕ್ಷಗಳು ಟಿಎಂಸಿಯನ್ನು ಬೆಂಬಲಿಸುವವೇ?

ಟಿಎಂಸಿಯು ಬಿಜೆಪಿಯ ಜತೆಗೆ ಹೆಚ್ಚು ಸುಖವಾಗಿರಬಲ್ಲದು. ಮೈತ್ರಿಯ ಮೂಲಕ ಬಂಗಾಳಕ್ಕೆ ಬಿಜೆಪಿಯನ್ನು ತಂದವರೇ ಅವರು. ಬಿಜೆಪಿಯ ಪ್ರಧಾನಿಯ ಜತೆಗೆ ಅವರು ಕೆಲಸವನ್ನೂ ಮಾಡಿದ್ದಾರೆ...

*ಪ್ರತಿ ಐದು ವರ್ಷಕ್ಕೊಮ್ಮೆ ಅಧಿಕಾರ ಬದಲಾವಣೆ ಕಾಣುತ್ತಾ ಬಂದಿರುವ ಕೇರಳದಲ್ಲಿ ಈ ಬಾರಿ ಈ ಸಂಪ್ರದಾಯವನ್ನು ಮುರಿದು, ಎಡಪಕ್ಷಗಳು ಪುನಃ ಅಧಿಕಾರ ಹಿಡಿಯುತ್ತವೆ ಎಂಬ ವಿಶ್ವಾಸವಿದೆಯೇ?

ನಾಲ್ಕು ದಶಕಗಳಿಂದ ನಡೆದುಬರುತ್ತಿರುವ ಈ ವ್ಯವಸ್ಥೆಯನ್ನು ನಾವು ಕೊನೆಗೊಳಿಸಲು ಸಜ್ಜಾಗಿದ್ದೇವೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಮಗೆ ಲಭಿಸಿದ ಪ್ರತಿಕ್ರಿಯೆ ಇದರ ಮುನ್ಸೂಚನೆ. ಕೋವಿಡ್‌ ಹೊರತಾಗಿ, ಕಳೆದ ಐದು ವರ್ಷಗಳಲ್ಲಿ ಕೇರಳ ಅನೇಕ ಪ್ರಕೃತಿ ವಿಕೋಪಗಳನ್ನು ಕಂಡಿದೆ. ಸರ್ಕಾರವು ಸಕಾಲದಲ್ಲಿ ಸ್ಪಂದಿಸುವ ಮೂಲಕ ಜನರ ವಿಶ್ವಾಸ ಗಳಿಸಿಕೊಂಡಿದೆ.

*ಚಿನ್ನದ ಕಳ್ಳಸಾಗಾಣಿಕೆ ಪ್ರಕರಣ ಸರ್ಕಾರವನ್ನು ಸುತ್ತಿಕೊಂಡಿದೆಯಲ್ಲಾ, ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೀರಿ?

ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಇಂಥ ಪ್ರಕರಣಗಳು ಬೆಳಕಿಗೆ ಬರುತ್ತಿವೆಯಲ್ಲಾ ಏಕೆ? ತಿರುವನಂತಪುರದಲ್ಲೇ ಏಕೆ ನಡೆಯು
ತ್ತಿವೆ? ಕೊರತೆ ಇರುವುದೆಲ್ಲಿ... ಈ ಎಲ್ಲಾ ಪ್ರಶ್ನೆಗಳನ್ನು ಜನರು ಕೇಳುತ್ತಿದ್ದಾರೆ. ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಸಿಬಿಐ, ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಧನಬಲವೆಂಬ ‘ತ್ರಿಶೂಲ’ವನ್ನು ಬಿಜೆಪಿ ಹೇಗೆ ಬಳಸುತ್ತಿದೆ ಎಂಬುದನ್ನು ಜನರು ಗಮನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT