ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಗ್ರರಿಗೆ ಬೆಂಬಲ: ಪರೋಕ್ಷವಾಗಿ ಚೀನಾ, ಪಾಕ್‌ ವಿರುದ್ಧ ಪ್ರಧಾನಿ ಮೋದಿ ಆಕ್ರೋಶ

Published : 18 ನವೆಂಬರ್ 2022, 13:55 IST
ಫಾಲೋ ಮಾಡಿ
Comments

ನವದೆಹಲಿ: ಕೆಲವು ದೇಶಗಳು ತಮ್ಮ ವಿದೇಶಾಂಗ ನೀತಿಯ ಭಾಗವಾಗಿಯೇ ಭಯೋತ್ಪಾದನೆಗೆ ಬೆಂಬಲ ಕೊಡುತ್ತಿವೆ. ಕೆಲವು ದೇಶಗಳು ಭಯೋತ್ಪಾದಕರ ವಿರುದ್ಧ ಕೈಗೊಳ್ಳುವ ಕ್ರಮಗಳಿಗೆ ಅಡ್ಡಿ ಉಂಟು ಮಾಡಿ ಉಗ್ರರ ಪರ ವಾದ ಮಂಡಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ. ಚೀನಾ ಮತ್ತು ಪಾಕಿಸ್ತಾನವನ್ನು ಪರೋಕ್ಷವಾಗಿ ಉಲ್ಲೇಖಿಸಿ ಅವರು ಈ ಮಾತು ಹೇಳಿದ್ದಾರೆ.

ಭಯೋತ್ಪಾದನೆಗೆ ಬೆಂಬಲ ನೀಡುವ ದೇಶಗಳ ಮೇಲೆ ಭಯೋತ್ಪಾದನೆಯಿಂದಾಗುವ ನಷ್ಟವನ್ನು ಹೊರಿಸಬೇಕು. ಪರೋಕ್ಷ ಯುದ್ಧವು ಅಪಾಯಕಾರಿ ಮತ್ತು ಹೆಚ್ಚು ಹಿಂಸಾತ್ಮಕವಾಗಿರುತ್ತದೆ. ಯುದ್ಧ ಇಲ್ಲ ಎಂಬುದರ ಅರ್ಥ ಶಾಂತಿ ನೆಲೆಸಿದೆ ಎಂದಲ್ಲ ಎಂದು ಪ್ರಧಾನಿ ಹೇಳಿದ್ದಾರೆ.

ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಹೆಚ್ಚು ಸಕ್ರಿಯವಾದ ಪ್ರತಿಕ್ರಿಯೆ ಮತ್ತು ಜಾಗತಿಕ ಸಹಕಾರ ಬೇಕಿದೆ. ಭಯೋತ್ಪಾದಕರನ್ನು ದೇಶಗಳು ಮಟ್ಟ ಹಾಕಬೇಕಿದೆ, ಅವರ ಬೆಂಬಲ ಜಾಲವನ್ನು ಒಡೆಯಬೇಕಿದೆ ಮತ್ತು ಅವರಿಗೆ ದೊರೆಯುವ ಹಣಕಾಸು ಬೆಂಬಲವನ್ನು ತಡೆಗಟ್ಟಬೇಕಿದೆ ಎಂದು ಮೋದಿ ಪ್ರತಿಪಾದಿಸಿದ್ದಾರೆ.

ಭಯೋತ್ಪಾದನೆಗೆ ಹಣಕಾಸು ನೆರವು ತಡೆಗಟ್ಟುವುದಕ್ಕೆ ಸಂಬಂಧಿಸಿದ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು. ಗೃಹ ಸಚಿವಾಲಯವು ಈ ಸಮಾವೇಶವನ್ನು ಆಯೋಜಿಸಿತ್ತು. ಭಯೋತ್ಪಾದಕರ ಕುರಿತು ಸಹಾನುಭೂತಿ ತೋರುವ ಜನರು ಮತ್ತು ಸಂಘಟನೆಗಳನ್ನು ಕೂಡ ಏಕಾಂಗಿ ಆಗಿಸಬೇಕಾಗಿದೆ. ಇಂತಹ ವಿಚಾರದಲ್ಲಿ ಹೀಗಾದರೆ ಅಥವಾ ಹೀಗಾಗದಿದ್ದರೆ ಎಂಬಂತಹ ವಿಚಾರಗಳೆಲ್ಲ ಇಲ್ಲ. ಗುಪ್ತವಾಗಿ ಮತ್ತು ಬಹಿರಂಗವಾಗಿ ಭಯೋತ್ಪಾದನೆಗೆ ಬೆಂಬಲ ನೀಡುವವರ ವಿರುದ್ಧ ಜಗತ್ತು ಒಂದಾಗಬೇಕಿದೆ ಎಂದು ಮೋದಿ ಹೇಳಿದ್ದಾರೆ.

ಭಯೋತ್ಪಾದಕ ಸಂಘಟನೆಗಳು ವಿವಿಧ ಮೂಲಗಳಿಂದ ಹಣ ಪಡೆಯುತ್ತಿವೆ. ಸರ್ಕಾರದ ಬೆಂಬಲ ಕೂಡ ಅಂತಹ ಮೂಲಗಳಲ್ಲಿ ಒಂದು. ವಿವಿಧ ರೀತಿಯ ಭಯೋತ್ಪಾದನಾ ದಾಳಿಗಳಿಗೆ ನೀಡುವ ಪ್ರತಿಕ್ರಿಯೆಯ ತೀವ್ರತೆಯು ದಾಳಿ ಎಲ್ಲಿ ನಡೆದಿದೆ ಎಂಬುದರ ಮೇಲೆ ಆಧಾರಿತವಾಗಿ ಇರಬಾರದು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಭಯೋತ್ಪಾದಕರ ವಿರುದ್ಧ ಕೈಗೊಳ್ಳುವ ಕ್ರಮಕ್ಕೆ ತಡೆ ಒಡ್ಡುವ ಮೂಲಕ ಕೆಲವು ದೇಶಗಳು ಪರೋಕ್ಷವಾಗಿ ಬೆಂಬಲ ನೀಡಿವೆ. ಜಾಗತಿಕ ಬೆದರಿಕೆಯ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ದ್ವಂದ್ವ ನೀತಿಗೆ ಅವಕಾಶವೇ ಇಲ್ಲ ಎಂದು ಮೋದಿ ಹೇಳಿದ್ದಾರೆ.

ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಜಾಗತಿಕ ಉಗ್ರರು ಎಂದು ಅಂತರರಾಷ್ಟ್ರೀಯ ಸಂಸ್ಥೆಗಳು ಘೋಷಿಸುವಂತೆ ಭಾರತ ಪ್ರಯತ್ನ ಮಾಡಿದ್ದರೂ ಚೀನಾವು ಪ್ರತಿ ಬಾರಿ ಅದಕ್ಕೆ ತಡೆ ಒಡ್ಡಿದೆ ಎಂಬುದನ್ನು ಮೋದಿ ಅವರು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ. ಲಷ್ಕರ್‌ ಎ ತಯಬಾ ಉಗ್ರಗಾಮಿ ತಲ್ಹಾ ಸಯೀದ್‌ ಮತ್ತು ಶಾಹಿದ್ ಮೊಹಮ್ಮದ್‌ ಅವರ ಮೇಲೆ ನಿರ್ಬಂಧ ಹೇರುವಂತೆ ಭಾರತ ಮತ್ತು ಅಮೆರಿಕ ನಡೆಸಿದ ಪ್ರಯತ್ನಕ್ಕೆ ಅಕ್ಟೋಬರ್‌ 18 ಮತ್ತು 19ರಂದು ಚೀನಾ ತಡೆ ಒಡ್ಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT