ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ವಿಚಾರವಾಗಿ ಸರ್ವಪಕ್ಷಗಳ ಸಭೆ ಕರೆಯಲು ಸೋನಿಯಾ ಆಗ್ರಹ

Last Updated 7 ಮೇ 2021, 11:29 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಕೋವಿಡ್‌ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲವಾಗಿದೆ‘ ಎಂದು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ‘ಪರಿಸ್ಥಿತಿ ಕುರಿತ ಚರ್ಚೆಗೆ ಕೂಡಲೇ ಸರ್ವಪಕ್ಷಗಳ ಸಭೆ ಕರೆಯಬೇಕು’ ಎಂದು ಒತ್ತಾಯಿಸಿದ್ದಾರೆ.

ವರ್ಚುಯಲ್‌ ಸ್ವರೂಪದಲ್ಲಿ ನಡೆದ ಕಾಂಗ್ರೆಸ್‌ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ‘ಕೋವಿಡ್ ಪರಿಸ್ಥಿತಿಯ ನಿರ್ವಹಣೆಯಲ್ಲಿ ದೇಶದ ವ್ಯವಸ್ಥೆ ಸೋತಿಲ್ಲ. ಆದರೆ, ಇದನ್ನು ನಿಭಾಯಿಸುವಲ್ಲಿ ಮೋದಿ ನೇತೃತ್ವದ ಸರ್ಕಾರ ಪೂರ್ಣ ವಿಫಲವಾಗಿದೆ’ ಎಂದು ಹೇಳಿದರು.

‘ಈ ಸಂದರ್ಭದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಒಂದು ದೇಶವಾಗಿ ಇದರ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಮೊದಲಿಗೆ ಸರ್ವಪಕ್ಷಗಳ ಸಭೆಯನ್ನು ಕರೆಯಬೇಕು. ಆದರೆ, ಜನರ ಬಗ್ಗೆ ಕಾಳಜಿಯೇ ಇಲ್ಲದ ನಾಯಕತ್ವದಡಿ ದೇಶವಿಂದು ಸಿಲುಕಿದೆ‘ ಎಂದು ಪ್ರಧಾನಿ ವಿರುದ್ಧ ಹರಿಹಾಯ್ದರು.

‘ನಿರ್ವಹಣೆ ಕುರಿತ ವಿಶ್ವಾಸಾರ್ಹತೆ ಮೂಡಿಸಲು ಹಾಗೂ ಸಮಗ್ರ ಕ್ರಿಯಾಯೋಜನೆ ರೂಪಿಸಲು ಸ್ಥಾಯಿ ಸಮಿತಿಗಳ ಸಭೆ ಕರೆಯಬೇಕು. ಪಿಡುಗಿನ ವಿರುದ್ಧದ ಹೋರಾಟ ಎಂದರೆ ಅದು ಸರ್ಕಾರ ಮತ್ತು ನಮ್ಮ ವಿರುದ್ಧ ಅಲ್ಲ. ಅದು ನಮ್ಮ ಮತ್ತು ಕೊರೊನಾ ವಿರುದ್ಧ ಎಂಬುದು ಕಾಂಗ್ರೆಸ್‌ನ ಬಲವಾದ ನಂಬಿಕೆ’ ಎಂದು ಹೇಳಿದರು.

‘ನಾಯಕತ್ವ ವಿಫಲವಾಗಿದೆ ಎಂಬುದು ಈಗ ಸ್ಪಷ್ಟವಾಗಿದೆ. ಭಾರತದ ಬಲ ಮತ್ತು ಸಂಪನ್ಮೂಲವನ್ನು ವ್ಯವಸ್ಥಿತವಾಗಿ ಕ್ರೋಡೀಕರಿಸಲು ಮೋದಿ ಸರ್ಕಾರ ವಿಫಲವಾಗಿದೆ. ಜನರೆಡೆಗೆ ಕಾಳಜಿಯೇ ಇಲ್ಲದ ರಾಜಕೀಯ ನಾಯಕತ್ವಕ್ಕೆ ಭಾರತ ಸಿಲುಕಿದೆ. ಜನರ ನಿರೀಕ್ಷೆಗೆ ಸ್ಪಂದಿಸಲೂ ಸರ್ಕಾರ ವಿಫಲವಾಗಿದೆ‘ ಎಂದು ಟೀಕಿಸಿದರು.

ಇದೇ ಸಂದರ್ಭದಲ್ಲಿ ಅವರು ರಾಜ್ಯಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ, ಆರೋಗ್ಯ ಸ್ಥಾಯಿ ಸಮಿತಿಯ ವರದಿ ಮಂಡಿಸುವಂತೆ ಹಾಗೂ ಹಾಗೂ ಅದರ ಶಿಫಾರಸುಗಳ ಜಾರಿಗೆ ಒತ್ತು ನೀಡಬೇಕು ಎಂದು ಸಂಬಂಧಿತ ಅಧ್ಯಕ್ಷರ ಗಮ ನಸೆಳೆಯಬೇಕು ಎಂದು ಸಲಹೆ ನೀಡಿದರು.

‘ಇನ್ನಷ್ಟು ವಿಳಂಬವಾಗಬಾರದು. ಸಮರ್ಥವಾಗಿ, ತಾಳ್ಮೆಯಿಂದ ಮತ್ತು ದೂರದೃಷ್ಟಿ ಚಿಂತನೆಯ ನಾಯಕತ್ವ ಈಗ ಪರಿಸ್ಥಿತಿ ನಿಭಾಯಿಸಲು ಅಗತ್ಯವಾಗಿದೆ. ಸರ್ಕಾರದ ಅಸಮರ್ಥತೆ ಮತ್ತು ಭಿನ್ನಾಭಿಪ್ರಾಯಗಳ ಭಾರದಿಂದ ದೇಶ ಕುಸಿಯುತ್ತಿದೆ. ಪಕ್ಷದ ಸಂಸದರು ಜನರ ಸೇವೆಗೆ ಮುಂದಾಗಲು ಇದು ಸಕಾಲ’ ಎಂದು ಸಲಹೆ ಮಾಡಿದರು.

ಪಿಡುಗಿನಿಂದ ಸಾವಿರಾರು ಜನರು ಸಾಯುತ್ತಿದ್ದಾರೆ. ಆದರೆ, ಮೋದಿ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ ಅವರು, ಜನರ ನೋವು ಶಮನಗೊಳಿಸುವ ಕೆಲಸ ಆಗುತ್ತಿಲ್ಲ. ಲಸಿಕೆ ನೀತಿಯು ಸಮರ್ಪಕವಾಗಿಲ್ಲ. ಅಸಂಖ್ಯಾತ ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳ ಜನರು, ಕಡುಬಡವರಿಗೆ ಇನ್ನೂ ಲಸಿಕೆ ತಲುಪಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT