ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು: ಕಳೆದ ಸಾಲಿಗಿಂತ ಶೇ 1.55ರಷ್ಟು ಕಡಿಮೆ ಪ್ರದೇಶದಲ್ಲಿ ಬಿತ್ತನೆ

ಕೇಂದ್ರ ಕೃಷಿ ಸಚಿವಾಲಯದಿಂದ ಮಾಹಿತಿ ಬಿಡುಗಡೆ
Last Updated 22 ಆಗಸ್ಟ್ 2021, 14:15 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಶೇ 1.55ರಷ್ಟು ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳುತ್ತವೆ.

ಬಿತ್ತನೆ ಕಾರ್ಯ ಆಗಸ್ಟ್ ಅಂತ್ಯದ ವರೆಗೂ ನಡೆಯಲಿದೆ. ಕೆಲವು ರಾಜ್ಯಗಳಲ್ಲಿ ಸೆಪ್ಟೆಂಬರ್‌ ವರೆಗೂ ಬಿತ್ತನೆ ಮುಂದುವರಿಯುವುದು.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಆ. 20ಕ್ಕೆ ಕೊನೆಗೊಂಡ ಅವಧಿಯಲ್ಲಿ 1,043.87 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,060.37 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು ಎಂದು ಇವೇ ಅಂಕಿ–ಅಂಶಗಳು ಹೇಳುತ್ತವೆ.

ನೈರುತ್ಯ ಮುಂಗಾರು ಜೂನ್‌ನಲ್ಲಿ ಪ‍್ರವೇಶಿಸಿದ ನಂತರ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಪ್ರಸಕ್ತ ಮುಂಗಾರಿನ ಜೂನ್‌ 1ರಿಂದ ಆಗಸ್ಟ್‌ 20ರ ಅವಧಿಯಲ್ಲಿ ವಾಡಿಕೆಗಿಂತ ಶೇ 8ರಷ್ಟು ಕಡಿಮೆ ಮಳೆಯಾಗಿತ್ತು. ಇದು ಕೂಡ ಬಿತ್ತನೆಯಲ್ಲಿನ ಹಿನ್ನಡೆಗೆ ಕಾರಣ ಎಂದು ಹೇಳಲಾಗಿದೆ.

‘ಬಿತ್ತನೆ ಕಾರ್ಯ ಇನ್ನೂ ನಡೆಯುತ್ತಿದೆ. ಮುಂಗಾರು ಬೆಳೆಗಳ ಪೈಕಿ ಬತ್ತ, ಉದ್ದು, ಹೆಸರು, ಎಳ್ಳು ಬಿತ್ತನೆ ಕಾರ್ಯ ಈ ತಿಂಗಳಾಂತ್ಯದ ವರೆಗೆ ನಡೆಯಲಿದೆ ಎಂದು ಕೆಲ ರಾಜ್ಯಗಳು ಮಾಹಿತಿ ನೀಡಿವೆ’ ಎಂದು ಸಚಿವಾಲಯ ತಿಳಿಸಿದೆ.

ಮುಂಗಾರು ಬೆಳೆಗಳ ಪೈಕಿ ಪ್ರಮುಖವಾದ ಬತ್ತದಬಿತ್ತನೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆಗಸ್ಟ್‌ 20ರ ವರೆಗಿನ ಅವಧಿಯಲ್ಲಿ 374.03 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 378.07 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು ಎಂದು ಅಂಕಿ–ಅಂಶಗಳಿಂದ ತಿಳಿದು ಬರುತ್ತದೆ.

ಎಣ್ಣೆಕಾಳುಗಳ ಬಿತ್ತನೆಯೂ ಕುಂಠಿತಗೊಂಡಿದೆ. ಕಳೆದ ವರ್ಷ ಈ ಅವಧಿಯಲ್ಲಿ 189.98 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಈ ವರ್ಷ ಈ ಪ್ರಮಾಣ 187.88 ಲಕ್ಷ ಹೆಕ್ಟೇರ್‌ನಷ್ಟಿದೆ.

ಕಳೆದ ವರ್ಷ 171.82 ಲಕ್ಷ ಹೆಕ್ಟೇರ್‌ನಲ್ಲಿ ಏಕದಳ ಧಾನ್ಯಗಳ ಬಿತ್ತನೆಯಾಗಿತ್ತು. ಈ ವರ್ಷ ಆ. 20ರ ವರೆಗಿನ ಅವಧಿಯಲ್ಲಿ 169.06 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ, ದ್ವಿದಳ ಧಾನ್ಯಗಳ ಬಿತ್ತನೆ ಪ್ರದೇಶ ಹೆಚ್ಚಿದೆ. ಕಳೆದ ವರ್ಷ 32.03 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು. ಈ ವರ್ಷ 134.23 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT