ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಎಂಬುದು ‘ಸುಳ್ಳು ಪ್ರಚಾರ’: ಎಸ್‌ಪಿ ಸಂಸದ

Last Updated 19 ಮೇ 2022, 11:27 IST
ಅಕ್ಷರ ಗಾತ್ರ

ವಾರಾಣಸಿ: ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಶಿವಲಿಂಗ ಪತ್ತೆಯಾಗಿರುವುದು 'ಸುಳ್ಳು ಪ್ರಚಾರ' ಎಂದು ಸಮಾಜವಾದಿ ಪಕ್ಷದ ಸಂಸದ ಶಫೀಕರ್ ರೆಹಮಾನ್ ಬಾರ್ಕ್ ಗುರುವಾರ ಹೇಳಿದ್ದಾರೆ. ವಿರೋಧ ಪಕ್ಷಗಳು ಇದನ್ನು ವಿರೋಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

‘ಪ್ರತಿಯೊಂದು ಮಸೀದಿಯನ್ನೂ ಈಗ ಅನುಮಾನದಿಂದ ನೋಡಲಾಗುತ್ತಿದೆ. ಹಿಂದೂಗಳು ಮತ್ತು ಮುಸ್ಲಿಮರು ಇಂಥ ಅಪಪ್ರಚಾರ ತಡೆಯಬೇಕು’ ಎಂದು ಸಂಸದರು ಹೇಳಿದರು.

ಮುಸ್ಲಿಮರು ತಮ್ಮ ಪೂಜಾ ಸ್ಥಳದಲ್ಲಿ ಶಿವಲಿಂಗವನ್ನು ಏಕೆ ಇಡುತ್ತಾರೆ? ನಮ್ಮಲ್ಲಿ ಮೂರ್ತಿ ಪೂಜೆ ಇಲ್ಲ. ಅದು ಷರಿಯತ್‌ಗೆ ವಿರುದ್ಧವಾದದ್ದು’ ಎಂದು ಅವರು ಪ್ರತಿಪಾದಿಸಿದ್ದಾರೆ.

ಇತ್ತೀಚೆಗೆ, ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿಯ ಸರ್ವೆ ಮತ್ತು ವಿಡಿಯೊ ಚಿತ್ರೀಕರಣದ ಸಮಯದಲ್ಲಿ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿದ್ದಾಗಿ ವಕೀಲರೊಬ್ಬರು ಹೇಳಿದ್ದರು. ಈ ಸಂಗತಿಯು ದೇಶದಾದ್ಯಂತ ಸಂಚಲನ ಸೃಷ್ಟಿ ಮಾಡಿತ್ತು.

ಆದರೆ, ಮಸೀದಿ ಸಮಿತಿಯ ಸದಸ್ಯರು ಶಿವಲಿಂಗ ಪತ್ತೆಯಾಗಿರುವುದನ್ನು ನಿರಾಕರಿಸಿದ್ದಾರೆ.

ಇದೇ ವಿಚಾರವಾಗಿ ಬಿಜೆಪಿ, ಆರೆಸ್ಸೆಸ್ ಅನ್ನು ಟೀಕಿಸಿರುವ ಸಂಸದ ಬಾರ್ಕ್, ಎರಡೂ ಸಂಸ್ಥೆಗಳು ದೇಶದ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.

ದೇಶ ಮತ್ತು ಮುಸ್ಲಿಂ ಸಮುದಾಯವನ್ನು ಉಳಿಸಲು ವಕ್ಫ್ ಮಂಡಳಿ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಇತರರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಹೊಸ ಮದರಸಾಗಳಿಗೆ ಅನುದಾನ ನೀಡದಿರುವ ಉತ್ತರ ಪ್ರದೇಶ ಸರ್ಕಾರದ ಇತ್ತೀಚಿನ ನಿರ್ಧಾರವನ್ನೂ ಸಂಸದ ಬಾರ್ಕ್ ಪ್ರಶ್ನಿಸಿದ್ದಾರೆ.

‘ಇದು ಮುಸ್ಲಿಮರು ಶಿಕ್ಷಣವನ್ನು ಪಡೆಯಲಾಗದಂತೆ ಮಾಡುವ ಷಡ್ಯಂತ್ರದ ಭಾಗವಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT