ಗುರುವಾರ , ಅಕ್ಟೋಬರ್ 1, 2020
21 °C

ಮತ್ತೆ ಸರ್ಕಾರಿ ಸೇವೆಗೆ ಶಾ ಫೈಸಲ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಭಾರತೀಯ ಆಡಳಿತ ಸೇವೆಗೆ (ಐಎಎಸ್‌) ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದು ಜಮ್ಮು–ಕಾಶ್ಮೀರ ಪೀಪಲ್ಸ್‌ ಮೂವ್‌ಮೆಂಟ್‌ (ಜೆಕೆಪಿಎಂ) ಪಕ್ಷ ಸ್ಥಾಪಿಸಿದ್ದ ಶಾ ಫೈಸಲ್‌, ಟ್ವಿಟರ್‌ ಖಾತೆಯ ತಮ್ಮ ವೈಯಕ್ತಿಕ ವಿವರದಿಂದ ಜೆಕೆಪಿಎಂ ಪಕ್ಷದ ಅಧ್ಯಕ್ಷ ಎಂಬುದನ್ನು ಅಳಿಸಿದ್ದಾರೆ. ಇದರಿಂದ ಅವರು ಮತ್ತೆ ಸರ್ಕಾರಿ ಸೇವೆಗೆ ಮರಳುತ್ತಾರೆಯೇ ಎಂಬ ಊಹಾಪೋಹ ವ್ಯಾಪಕವಾಗಿ ಹರಡುತ್ತಿದೆ.   

2010ರ ಐಎಎಸ್‌ ಟಾಪರ್‌ ಆಗಿರುವ ಫೈಸಲ್‌, 2019 ಜನವರಿ 9ರಂದು ಜೆಕೆಪಿಎಂ ಸ್ಥಾಪಿಸಲು ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು. ಕಾಶ್ಮೀರದಲ್ಲಿ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರ, ಜಮ್ಮು ಮತ್ತು ಕಾಶ್ಮೀರಕ್ಕೆ  ದೊರೆಯದ ರಾಜಕೀಯ ನೆರವು ತಮ್ಮ ರಾಜೀನಾಮೆಗೆ ಕಾರಣ ಎಂದು ಶಾ ಕಾರಣ ನೀಡಿದ್ದರು. ಜೆಕೆಪಿಎಂ ಸ್ಥಾಪನೆಯಾಗಿ ಏಳು ತಿಂಗಳ ಬಳಿಕ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷಾಧಿಕಾರವನ್ನು ರದ್ದುಗೊಳಿಸಿತು. ಇದಾದ ನಂತರ ಫೈಸಲ್‌ ಸೇರಿದಂತೆ ಪ್ರಮುಖ ರಾಜಕೀಯ ನಾಯಕರನ್ನು ಸಾರ್ವಜನಿಕ ಸುರಕ್ಷತೆ ಕಾಯ್ದೆಯಡಿ (ಪಿಎಸ್‌ಎ) ಕಸ್ಟಡಿಗೆ ಪಡೆಯಲಾಗಿತ್ತು. 

ಇಲ್ಲಿಯವರೆಗೂ ಫೈಸಲ್‌ ಅವರ ರಾಜೀನಾಮೆಯನ್ನು ಭಾರತ ಸರ್ಕಾರ ಒಪ್ಪಿಕೊಂಡಿಲ್ಲ. ಜೊತೆಗೆ ಜಮ್ಮು ಮತ್ತು ಕಾಶ್ಮೀರದ ಹಿರಿಯ ಐಎಎಸ್‌ ಅಧಿಕಾರಗಳ ಪಟ್ಟಿಯಲ್ಲಿ ಶಾ 36ನೇ ಸ್ಥಾನದಲ್ಲಿ ಇದ್ದಾರೆ. ಹೀಗಾಗಿ ಅವರು ಮತ್ತೆ ಐಎಎಸ್‌ ಹುದ್ದೆಗೆ ಮರಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಫೈಸಲ್‌ ಅವರಿಗೆ ಕರೆ ಮಾಡಿದರೂ, ಅವರು ಸ್ವೀಕರಿಸಲಿಲ್ಲ. 

‘ಬಿಡುಗಡೆ ಬಳಿಕ ಅಮೆರಿಕಕ್ಕೆ ಹೋಗಲು ಫೈಸಲ್‌ ನಿರ್ಧರಿಸಿದ್ದರು. ಆದರೆ ಇದಕ್ಕೆ ಅವರಿಗೆ ಅನುಮತಿ ದೊರೆಯಲಿಲ್ಲ. ಬದಲಾಗಿ ರಾಜಕೀಯದಲ್ಲೇ ಮುಂದುವರಿಯಲು ಅಥವಾ ಐಐಎಸ್‌ ಹುದ್ದೆ ಮತ್ತೆ ಸ್ವೀಕರಿಸುವ ಆಯ್ಕೆ ನೀಡಲಾಗಿದೆ. ರಾಜಕೀಯಕ್ಕೆ ಬಂದರೆ, ವಿಶೇಷಾಧಿಕಾರ ರದ್ದು ವಿಚಾರವನ್ನು ಪ್ರಸ್ತಾಪಿಸಬಾರದು ಎಂಬ ಷರತ್ತು ಹಾಕಲಾಗಿದೆ’ ಎಂದು ಫೈಸಲ್‌ ಅವರ ಆಪ್ತರು ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು